ವಿಜಯಪುರ: ‘ಕೃಷಿ, ಗ್ರಾಮೀಣಾಭಿವೃದ್ದಿ, ಸ್ವಚ್ಛ ಭಾರತ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಕೇಂದ್ರ ಪುರಷ್ಕೃತ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡು, ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ 1ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಕೇಂದ್ರ ಪುರಷ್ಕೃತ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಸಂದರ್ಭದಲ್ಲಿ ಅಗೆಯಲಾದ ರಸ್ತೆಯನ್ನು ಕಾಮಗಾರಿ ಪೂರ್ಣಗೊಂಡ ನಂತರ ಹಾಗೆ ಬಿಡದೇ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಂದಲೇ ರಸ್ತೆ ದುರಸ್ತಿಗೆ ಕ್ರಮವಹಿಸಬೇಕು. ಕಾಮಗಾರಿಯ ಗುಣಮಟ್ಟ ತೃಪ್ತಿಯಾದ ನಂತರವೇ ಟೆಂಡರ್‌ದಾರರಿಗೆ ಹಣ ಪಾವತಿಸಲು ಕ್ರಮ ವಹಿಸಿ’ ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
‘ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪಡಿಸುವ ಸಂದರ್ಭದಲ್ಲಿ ಹಳ್ಳಿಗಳಲ್ಲಿನ ರಸ್ತೆ ಬದಿಯ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಅಥವಾ ನಗರ ಪ್ರದೇಶದ ಯೋಜನೆಯಡಿ ಮನೆ ನಿರ್ಮಿಸಿ ಕೊಡಬೇಕು. ಜಲಧಾರೆ ಯೋಜನೆ ಕಾಮಾಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇದ್ದ ಕಡೆಗಳಲ್ಲಿ ಬೊರ್‌ವೆಲ್ ಕೊರೆಯಿಸಲು ಕ್ರಮ ವಹಿಸಿ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಹೇಳಿದರು.
‘ಜಲ ಜೀವನ ಮಿಷನ್ ಯೋಜನೆಯಡಿಯ 848 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 234 ಕಾಮಗಾರಿಗಳು ಪ್ರಗತಿಯಲ್ಲಿದ್ದು, 471 ಕಾಮಗಾರಿಗಳು ಪೂರ್ಣಗೊಂಡಿವೆ. ಶೇ 58.82ರಷ್ಟು ಪ್ರಗತಿ ಸಾಧಿಸಲಾಗಿದ್ದು, ₹266 ಕೋಟಿ ವೆಚ್ಚ ಮಾಡಲಾಗಿದೆ. 2024ರ ಡಿಸೆಂಬರ್ ಒಳಗಾಗಿ ಬಾಕಿ ಉಳಿದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಅವರು ಸೂಚಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಳೆದ ಮೂರು ತಿಂಗಳಲ್ಲಿ ವಿಜಯಪುರ ತಾಲ್ಲೂಕಿನ 12, ತಿಕೋಟಾ ತಾಲ್ಲೂಕಿನ 78, ಬಸವನಬಾಗೇವಾಡಿ ತಾಲ್ಲೂಕಿನ 106, ಕೊಲ್ಹಾರ ತಾಲ್ಲೂಕಿನ 9, ನಿಡಗುಂದಿ ತಾಲ್ಲೂಕಿನ 14, ಇಂಡಿ ತಾಲ್ಲೂಕಿನ 87, ಮುದ್ದೇಬಿಹಾಳ ತಾಲ್ಲೂಕಿನ 5, ತಾಳಿಕೋಟೆ ಹಾಗೂ ಸಿಂದಗಿ ತಾಲ್ಲೂಕಿನ ತಲಾ 23, ದೇವರಹಿಪ್ಪರಗಿ ತಾಲ್ಲೂಕಿನ 24 ಹಾಗೂ ಆಲಮೇಲ ತಾಲ್ಲೂಕಿನ 47 ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಬಾಕಿ ಉಳಿದ 6545 ವೈಯಕ್ತಿಕ ಶೌಚಾಲಯಗಳ ಕಾರ್ಯಾದೇಶವನ್ನು ಪಂಚತಂತ್ರ ತಂತ್ರಾಂಶ 2.0ದಲ್ಲಿ ದಾಖಲಿಸಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿದರು.
ಯೋಜನೆಯಡಿ ಯಾವುದೇ ಮಿತಿ ಇಲ್ಲದೇ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ‘ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ ಯೋಜನೆಯಡಿ 761 ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ. ಈ ಪೈಕಿ 138 ಹೃದಯ ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದು, ಮೆದುಳು ಶಸ್ತ್ರ ಚಿಕಿತ್ಸೆ ಪ್ರಕರಣಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ’ ಎಂದರು.
‘ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಗೆ ನಿಗದಿಪಡಿಸಲಾದ 6556 ಗುರಿ ಎದುರು 5141 ಮನೆಗಳನ್ನು ಮಂಜೂರು ಮಾಡಲಾಗಿದೆ. 1ನೇ ಕಂತು ₹16.52 ಕೋಟಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ದೇವರಹಿಪ್ಪರಗಿ ತಾಲ್ಲೂಕಿನ 13, ಇಂಡಿ 1, ಸಿಂದಗಿ 8, ತಾಳಿಕೋಟೆ 1 ಸೇರಿದಂತೆ 13 ಮನೆಗಳು ಪೂರ್ಣಗೊಂಡಿದ್ದು, 1415 ಫಲಾನುಭವಿಗಳ ಜಿಯೋ ಟ್ಯಾಗ್ ಬಾಕಿ ಇದೆ. ನಿಗದಿತ ಗುರಿಯಂತೆ ಪ್ರಗತಿ ಸಾಧಿಸಲಾಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ’ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.