ವಿಜಯಪುರ: ಕರ್ನಾಟಕ ಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿ ಸೂಚಿಸಿದ್ದ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಪರಿಶೀಲಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಕೊಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡೆಕನೂರಕ್ಕೆ ಭೇಟಿ ನೀಡಿದ ಅವರು, ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಕೈಗೊಳ್ಳುತ್ತಿರುವ ದ್ರವ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳ ಪರಿಶೀಲಿಸಿದರು. ಚರಂಡಿ ನೀರು ಸರಾಗವಾಗಿ ಸಾಗಲು ದೊಡ್ಡ ಪೈಪ್ ಅಳವಡಿಸಬೇಕು. ಪ್ರಗತಿಯಲ್ಲಿರುವ ಸಮುದಾಯ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಆಯುಷ ಇಲಾಖೆಯ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ, ಆಸ್ಪತ್ರೆಗೆ ಬರುವ ಹೊರ ರೋಗಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು. ಆಯುಷ ಇಲಾಖೆ ಗ್ರಾಮದಲ್ಲಿ ಕರಪತ್ರ, ಗೋಡೆ ಬರಹಗಳನ್ನು ಬರೆಸಿ ಜಾಗೃತಿ ಮೂಡಿಸಬೇಕು. ಆಯುರ್ವೇದ ಇಲಾಖೆಯಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು ತಾತ್ಕಾಲಿಕವಾಗಿ ಆರೋಗ್ಯ ಇಲಾಖೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಅಲ್ಲಿಯೇ ನಡೆಸುವಂತೆ ಸೂಚಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಮತ್ತು ಸಿಬ್ಬಂದಿ ಹಾಜರಾತಿ, ಅಂಗನವಾಡಿ ಉಗ್ರಾಣ ಕೋಣೆ, ದಾಸ್ತಾನು ವಿವರ ಪಡೆದುಕೊಂಡರು. ಗ್ರಾಮದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಗಮನಿಸಿದ ಸಿಇಒ ರಸ್ತೆ ಪಕ್ಕದ ಮನೆಗಳಿಗೆ ಭೇಟಿ ನೀಡಿ, ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ನಿಮಗೆ ಇಂಗು ಗುಂಡಿ ಮಾಡಿಕೊಳ್ಳಲು ಅವಕಾಶವಿದ್ದು, ಅದರ ಲಾಭ ಪಡೆದುಕೊಂಡು ಇಂಗು ಗುಂಡಿ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಗತಿ ಪರಿಶೀಲನಾ ಸಭೆ:
ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಅರಿವು ಕಾರ್ಯಕ್ರಮ, ಉಚಿತ ಆರೋಗ್ಯ ಶಿಬಿರ, ಬೀದಿ ನಾಟಕಗಳನ್ನು ಆಯೋಜಿಸಬೇಕು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಶೀಘ್ರದಲ್ಲಿ ನಿಯಮಾನುಸಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಎಲ್ಲ ಶಿಕ್ಷಕರು ಮಕ್ಕಳ ಮೂಲಕ ಪಾಲಕರಿಗೆ ಸ್ವಚ್ಛತೆಯ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದರು.
ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಅತ್ಯಂತ ಒಳ್ಳೆಯ ಗುಣಮಟ್ಟದಿಂದ ಮುಕ್ತಾಯಗೊಳಿಸಬೇಕು. ಜನರ ಅಭಿವೃದ್ಧಿಯ ದೃಚ್ಟಿಯಿಂದ ಮಾತ್ರ ಸರ್ಕಾರ ವಿವಿಧ ಇಲಾಖೆಗಳನ್ನು ರಚಿಸಿದೆ. ಆದರೆ ಎಲ್ಲರ ಗುರಿ ಮಾತ್ರ ಜನರ ಅಭಿವೃದ್ಧಿ ಮಾತ್ರ. ಹೀಗಾಗಿ, ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ದೋಣಿ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನೀಲ ಕಿರಣಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.