ಶನಿವಾರ, ಜುಲೈ 24, 2021
27 °C

ವಿಜಯಪುರ: ಎಮ್ಮೆ ಕರು, ಆರು ಕುರಿಗಳನ್ನು ತಿಂದು ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ದೇವರಗೆಣ್ಣೂರ, ಸುತಗಂಡಿ, ಬಬಲಾದಿ, ಬಿದರಿ  ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ವಾರದಿಂದ ಜಾನುವಾರುಗಳ ಮೇಲೆ ದಾಳಿ ಮಾಡಿ, ಒಂದು ಎಮ್ಮೆ ಕರು, ಆರು ಕುರಿಗಳನ್ನು ತಿಂದು ಹಾಕುವ ಮೂಲಕ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿಯಲು ನಾಲ್ಕು ಸ್ಥಳಗಳಲ್ಲಿ ಬೋನ್ ಇರಿಸಿ ಮೇಕೆಯನ್ನು ಕಟ್ಟಿಹಾಕಿದ್ದರು. ಮೇಕೆ ತಿನ್ನಲು ಹೋಗಿ ಬೋನಿಗೆ ಬಿದ್ದಿದೆ. ಚಿರತೆಯ ಚಲನವಲನ ಗಮನಿಸಲು ಎಂಟು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಅಲ್ಲದೇ, ಅರಣ್ಯ ಇಲಾಖೆ ಸಿಬ್ಬಂದಿ ಹಗಲು, ರಾತ್ರಿ ಗಸ್ತು ತಿರುಗುತ್ತಿದ್ದರು.

ದೇವರಗೆಣ್ಣೂರ, ಸುತಗಂಡಿ, ಬಬಲಾದಿ, ಬಿದರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆ ಯಾರೂ ಸಂಚರಿಸದಂತೆ ಹಾಗೂ ಜಮೀನುಗಳಿಗೆ ಒಂಟಿಯಾಗಿ ತೆರಳದಂತೆ  ಅರಣ್ಯ ಇಲಾಖೆ ಸಿಬ್ಬಂದಿ ಡಂಗೂರ ಸಾರಿದ್ದರು.

ವಿಜಯಪುರ ವಲಯ ಅರಣ್ಯ ಅಧಿಕಾರಿಗಳಾದ ಸರೀನಾ ಸಿಕ್ಕಲಗಾರ ಮತ್ತು ಪ್ರಭುಲಿಂಗ ನೇತೃತ್ವದಲ್ಲಿ ಬೀಡುಬಿಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಕೊನೆಗೂ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣಾ ನದಿ ತೀರದ ಬೀಳಗಿ ತಾಲ್ಲೂಕಿನ ಚಿಂಕಾರ ವನ್ಯ ಜೀವಿಧಾಮದಿಂದ ಆಹಾರ ಅರಸಿ ಈ ಚಿರತೆ ಲಾಕ್ ಡೌನ್ ಅವಧಿಯಲ್ಲಿ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು