ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಹತ್ರಾಸ್ ಅತ್ಯಾಚಾರ, ಕೊಲೆಗೆ ಖಂಡನೆ

Last Updated 30 ಸೆಪ್ಟೆಂಬರ್ 2020, 12:13 IST
ಅಕ್ಷರ ಗಾತ್ರ

ವಿಜಯಪುರ: ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಯುವತಿಯನ್ನು ಅತ್ಯಾಚಾರಗೈದು, ಅಮಾನವೀಯವಾಗಿ ಕಿರುಕುಳ ನೀಡಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಜಂಟಿಯಾಗಿ ಬುಧವಾರ ಪ್ರತಿಭಟನೆ ನಡೆಸಿದರು.

ಅತ್ಯಾಚಾರದಿಂದ ಸಾವಿಗೀಡಾದ ಯುವತಿಗೆ ಗೌರವ ಪೂರ್ವಕವಾಗಿ ಅಂತ್ಯಕ್ರಿಯೆಗೂ ಅವಕಾಶ ನೀಡದೇ ಹೆತ್ತವನ್ನು ಗೋಳಾಡಿಸಿದ ಉತ್ತರಪ್ರದೇಶ ಸರ್ಕಾರದ ಕ್ರಮವನ್ನು ಖಂಡಿಸಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಸಹ ಸಂಚಾಲಕಿ ಗೀತಾ ಎಚ್. ಮಾತನಾಡಿ, ಯುವತಿ ಮೇಲಿನ ಪೈಶಾಚಿಕ ಕೃತ್ಯವನ್ನು ಎಸಗಿದ ಮೇಲ್ಜಾತಿಯ ನಾಲ್ವರು ಯುವಕರು ಯಾವುದೇ ಅಳುಕಿಲ್ಲದೆ ಸ್ವತಂತ್ರವಾಗಿ ಓಡಾಡಿಕೊಂಡಿರುವುದು ನಾಗರಿಕ ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ ಎಂದರು.

ಯುವತಿಯನ್ನು ಅತ್ಯಾಚಾರ ಮಾಡಿ, ಬೆನ್ನುಹುರಿಯನ್ನು ಮುರಿದು, ನಾಲಿಗೆ ಕತ್ತರಿಸಿದ ಪರಿಣಾಮ ಅರೆಜೀವವಾಗಿ ನರಳುತ್ತಿದ್ದ ಸಂತ್ರಸ್ತೆಗೆ ವೈದ್ಯಕೀಯ ನೆರವನ್ನು ನೀಡದೆ ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ಸತಾಯಿಸಿರುವುದು ಖಂಡನೀಯ ಎಂದರು.

ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರದ ವೈಫಲ್ಯ ಮತ್ತು ಜನತೆಯ ಬಗ್ಗೆ ನಿಷ್ಕಾಳಜಿಯನ್ನು ಎತ್ತಿ ತೋರುತ್ತದೆ. ಕೂಡಲೇ ಸಂಬಂಧಿಸಿದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು

ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ ಯರಗುದ್ರಿ ಮಾತನಾಡಿ, ಉತ್ತರಪ್ರದೇಶ ಸರ್ಕಾರದ ಮಹಿಳಾ ವಿರೋಧಿ, ಸಮಾಜ ವಿರೋಧಿ ಧೋರಣೆಯಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ಅತ್ಯಾಚಾರ,ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ಆರೋಪಿಸಿದರು.

ಯುವಜನರ ಮನಸನ್ನು ಹಾಳು ಮಾಡಿ, ಇಂತಹ ಕೃತ್ಯಗಳಿಗೆ ಪ್ರಚೋದಿಸುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯಗಳನ್ನು, ಅಶ್ಲೀಲ ವೆಬ್‍ಸೈಟ್‍ಗಳನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.

ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಲಿಂಗ ಬಾಗೇವಾಡಿ, ಸುರೇಖಾ ಕಡಪಟ್ಟಿ, ದುಂಡೇಶ, ಶಿವರಂಜನಿ,ಶಿವಬಾಳಮ್ಮ ಕೊಂಡಗೂಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT