ಆಲಮಟ್ಟಿ: ಸಮೀಪದ ವಡವಡಗಿ ಗ್ರಾಮದಲ್ಲಿ ನಡೆದ ಬಳಬಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಛದ್ಮವೇಷಧಾರಿಯಾಗಿ ಹಲವು ವಿದ್ಯಾರ್ಥಿಗಳು ನಾನಾ ವೇಷಭೂಷಣದಲ್ಲಿ ಗಮನಸೆಳೆದರು.
ನಾರಾಯಣ, ತಿರುಪತಿ ಬಾಲಾಜಿ, ವಿಷ್ಣು, ಲಕ್ಷ್ಮಿ, ಯಲ್ಲಮ್ಮ ದೇವಿಯ ವೇಷದಲ್ಲಿ ಛದ್ಮವೇಷಧಾರಿಗಳು, ದೇವರೇ ಧರೆಗಿಳಿದಂತೆ ಅಲಂಕಾರ ಮಾಡಿಕೊಂಡಿದ್ದರೆ, ವೀಕ್ಷಕರು ದೂರದಿಂದಲೇ ನಮಿಸುವ ದೃಶ್ಯವೂ ಕಂಡು ಬಂತು.
ಯಲ್ಲಮ್ಮ ವೇಷಧಾರಿಯಾಗಿದ್ದ ವಡವಡಗಿ ಶಾಲೆಯ ವಿದ್ಯಾರ್ಥಿನಿ ಅಮೃತಾ ಕೆಂಗುತ್ತಿ ಅವರ ದೇವಿಯ ನೋಟ ಮಂತ್ರಮುಗ್ಧರನ್ನಾಗಿಸಿತು. ವಿಷ್ಣುವಿನ ವೇಷದಲ್ಲಿ ಮಿಂಚಿದ ಬಸವರಾಜ ಗೌಡರ ಅವತಾರವೂ ಸೆಳೆಯಿತು.
ಈ ಬಾರಿ 1 ರಿಂದ 4 ನೇ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದೆ.
ಎಚ್‌ಪಿಎಸ್ ವಡವಡಗಿ ಶಾಲೆಯ ಅಮೃತಾ ಕೆಂಗುತ್ತಿ –ಪ್ರಥಮ, ಆಂಜನೇಯ ಪ್ರಾಥಮಿಕ ಶಾಲೆ ಯಲಗೂರದ ಅಮೂಲ್ಯ ಬಿರಾದಾರ–ದ್ವಿತೀಯ, ಯಲಗೂರದ ಗಂಗಾ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ರಿಷಿಕ್ ಆನೇಮಡು ತೃತೀಯ ಸ್ಥಾನ ಪಡೆದರು ಎಂದು ಸಿಆರ್‌ಪಿ ರಾಜು ಕೋನರೆಡ್ಡಿ, ಮುಖ್ಯ ಶಿಕ್ಷಕ ಎಸ್.ಸಿ. ಚಲವಾದಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಕ, ನೌಕರ ಸಂಘಟನೆಯ ನಾನಾ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಬಳಬಟ್ಟಿ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕ, ವಿದ್ಯಾರ್ಥಿಗಳು ಇದ್ದರು.