ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ರೈತರ ಮೇಲೆ ಲಾಠಿಚಾರ್ಜ್‌ಗೆ ಖಂಡನೆ

ಎಸ್.ಯು.ಸಿ.ಐ ಕಮ್ಯೂನಿಸ್ಟ್‌ ಪಕ್ಷದಿಂದ ಪ್ರತಿಭಟನೆ
Last Updated 1 ಸೆಪ್ಟೆಂಬರ್ 2021, 11:54 IST
ಅಕ್ಷರ ಗಾತ್ರ

ವಿಜಯಪುರ:ಹರಿಯಾಣದಲ್ಲಿ ಇತ್ತೀಚೆಗೆ ನಡೆದ ರೈತರ ಹೋರಾಟದಲ್ಲಿ ಪೊಲೀಸ್‌ ಲಾಠಿಚಾರ್ಜ್‌ನಲ್ಲಿ ಮೃತಪಟ್ಟ ರೈತ ಸುಶೀಲ್ ಕಾಜಲ್ ನೆನಪಿನಲ್ಲಿ ಎಸ್.ಯು.ಸಿ.ಐ ಕಮ್ಯೂನಿಸ್ಟ್‌ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಸ್.ಯು.ಸಿಐ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಸಿದ್ದಲಿಂಗ ಬಾಗೇವಾಡಿ, ರೈತರ ಮೇಲೆ ನಡೆದ ಲಾಠಿಚಾರ್ಜ್‌ ಖಂಡನಾರ್ಹ. ಇದು ಜನಗಳ ಹೋರಾಟವನ್ನು ಹತ್ತಿಕ್ಕುವ ತಂತ್ರವಾಗಿದೆ ಎಂದು ಆರೋಪಿಸಿದರು.

ರೈತರು ತಮ್ಮ ಬೇಡಿಕೆಗಳನ್ನಿಟ್ಟುಕೊಂಡು ಹಲವಾರು ತಿಂಗಳಿಂದ ಹೋರಾಡುತ್ತಿದ್ದು ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವುದನ್ನು ಬಿಟ್ಟು ಅವರ ಮೇಲೆ ಲಾಠಿಚಾರ್ಜ್‌ ಮಾಡಿ ರೈತರನ್ನು ಕೊಲ್ಲುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯೋತ್ತರ ಭಾರತದಲ್ಲೂ ಆಧುನಿಕ ಜನರಲ್ ಡಯರ್, ಸ್ಕಾಟ್ ಅವರಂಥ ಅಧಿಕಾರಿಗಳಿದ್ದದ್ದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದರು.

ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಮ್‌ ಮಾಶಾಳಕರ ಮಾತನಾಡಿ, ಕೇಂದ್ರ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು ಸೇರಿ ರೈತ ಹೋರಾಟವನ್ನು ಸದೆ ಬಡಿಯಲು ಪ್ರಯತ್ನಿಸುತ್ತಿವೆ. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಖಂಡಿಸಬೇಕಾಗಿದೆ. ರೈತ ನ್ಯಾಯ ಕೇಳಿದರೆ ಲಾಠಿಚಾರ್ಜ್‌ ಮಾಡುವ ಈ ಸರ್ಕಾರಗಳಿಗೆ ರೈತರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

ಎಸ್.ಯು.ಸಿ.ಐನ ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಎಚ್.ಟಿ., ರೈತ ವಿರೊಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರದ ನೀತಿಯೇ ಇಂದು ಇಂಥ ದುರ್ಘನೆಗಳಿಗೆ ಕಾರಣವಾಗಿದೆ. ಪ್ರಧಾನಿ ಮೋದಿಯವರು ಈ ನೀತಿಗಳನ್ನು ಕೂಡಲೇ ಹಿಂಪಡೆಯಬೇಕು. ಚುನಾವಣೆಯಲ್ಲಿ ಜನತೆಗೆ ನೀಡಿದ ಆಶ್ವಾಸನೆಗಳನ್ನು ಇಡೇರಿಸುವುದು ಬಿಟ್ಟು ಇಂಥ ರೈತ ವಿರೋಧಿ ನೀತಿಗಳಲ್ಲಿ ತೊಡಗಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ದಸ್ತಗೀರ ಉಕ್ಕಲಿ, ಬಸವರಾಜ ಮಾಳಿ, ಬಲರಾಮ ಪವಾರ, ಪರಶುರಾಮ ತೇಲಿ, ಕೃಷ್ಣಾ ಜಾಧವ, ಸುರೇಖಾ ಕಡಪಟ್ಟಿ, ಸುನೀಲ ಸಿದ್ರಾಮಶೆಟ್ಟಿ, ಮಹಾದೇವ ಲಿಗಾಡೆ, ಫಯಾಜ್ ಕಲಾದಗಿ ಭಾಗವಹಿಸಿದ್ದರು.

* ದೇಶಕ್ಕೆ ಅನ್ನ ಕೊಡುವ ರೈತನ ಕೊಲೆ ಸ್ವತ: ಸರ್ಕಾರಗಳೇ ಮಾಡುತ್ತಿರುವುದು ದೇಶವೇ ತಲೆತಗ್ಗಿಸುವಂತಾಗಿದೆ. ಬಿಜೆಪಿ ಸರ್ಕಾರವು ರೈತರ ಕೊಲೆಯನ್ನು ಸಂಘಟಿಸುತ್ತಿವೆ

-ಬಾಳು ಜೇವೂರ, ಜಿಲ್ಲಾ ಸಂಚಾಲಕ, ರೈತ ಕೃಷಿ ಕಾರ್ಮಿಕ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT