ವಿಜಯಪುರ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿ–ಜೆಡಿಎಸ್ ನಡೆಸಿರುವ ಷಡ್ಯಂತ್ರ ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅಹಿಂದ ಒಕ್ಕೂಟದ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೀದಿಗಿಳಿದು ಪ್ರತಿಭಟಿಸಿದರು.
ನಗರದ ಸಿದ್ದೇಶ್ವರ ಗುಡಿಯಿಂದ ಆರಂಭವಾದ ಪ್ರತಿಭಟನಾ ಜಾಥಾವು ಗಾಂಧಿಚೌಕ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿದರು. ಬಿಜೆಪಿ, ಜೆಡಿಎಸ್ ಮುಖಂಡರ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಬುಡಮೇಲು:
ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ದೇಶದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಸಂವಿಧಾನವನ್ನೇ ಬುಡಮೇಲು ಮಾಡುವ ಕೃತ್ಯ ಹೆಚ್ಚಾಗಿದೆ. ದೇಶದ ಆರೇಳು ರಾಜ್ಯಗಳ ಚುನಾಯಿತ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಕಿತ್ತೊಗೆಯಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲದೇ ಇದ್ದರೂ ಅಡ್ಡದಾರಿ, ಹುನ್ನಾರದ ಮೂಲಕ ಸರ್ಕಾರ ರಚನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಉತ್ತಮ ಕೆಲಸ ಮಾಡುವ ಮುಖ್ಯಮಂತ್ರಿಗಳನ್ನು ಕಿತ್ತೊಗೆಯುವ ಕೆಲಸ ದುಷ್ಟ ಬಿಜೆಪಿ ಮಾಡುತ್ತಿದೆ. ಈಗಾಗಲೇ ಮಹಾರಾಷ್ಟ್ರ, ಗೋವಾ, ದೆಹಲಿ ಮುಖ್ಯಮಂತ್ರಿಗಳನ್ನು ಕಿತ್ತೊಗಿದಿದ್ದು, ಇದೀಗ ನಮ್ಮ ರಾಜ್ಯದಲ್ಲೂ ಅದೇ ಪ್ರಯತ್ನ ನಡೆಸಿರುವುದು ಖಂಡನೀಯ’ ಎಂದರು.
‘ಕಳೆದ ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ 21 ಹಗರಣಗಳು ನಡೆದಿವೆ. ಅವುಗಳನ್ನು ತನಿಖೆ ಮಾಡಿದರೆ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು ಜೈಲಿನಲ್ಲಿ ಇರಬೇಕಾಗುತ್ತದೆ’ ಎಂದು ಹೇಳಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿ ಅನುದಾನ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸುವ ರಾಜ್ಯ ಬಿಜೆಪಿ ಮುಖಂಡರಿಗೆ ದಲಿತ ಸಮುದಾಯಗಳ ಬಗ್ಗೆ ಬದ್ಧತೆ ಇದ್ದರೆ, ಕೇಂದ್ರದಿಂದ ಅನುದಾನ ಕೊಡಿಸಿ, ಗಂಡಸರು ಎಂಬುದನ್ನು ಸಾಬೀತು ಪಡಿಸಬೇಕು’ ಎಂದು ಸವಾಲು ಹಾಕಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ‘ಸಿದ್ದರಾಮಯ್ಯ ವಿರುದ್ಧ ಇದುವರೆಗೂ ಭ್ರಷ್ಟಾಚಾರ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಬಿಜೆಪಿ–ಜೆಡಿಎಸ್‌ನವರು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಹಗಲುಗನಸು ಕಾಣುತ್ತಿದ್ದಾರೆ’ ಎಂದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ‘ಮುಖ್ಯಮಂತ್ರಿ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ–ಜೆಡಿಎಸ್ ಬೆಂಗಳೂರು–ಮೈಸೂರು ಪಾದಯಾತ್ರೆಯಿಂದ ಯಾವುದೇ ಪರಿಣಾಮ ಬೀರದು. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ವರ್ತಿಸುತ್ತಿರುವುದು ಖಂಡನೀಯ’ ಎಂದರು.
ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ‘ಮೂಡ ಹಗರಣವೇ ನಡೆದಿಲ್ಲ. ಆದರೂ ಹಗರಣ ನಡೆದಿದೆ ಎಂದು ಬಿಜೆಪಿ-ಜೆಡಿಎಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಮೂಡ ಹಗರಣ ನಡೆದಿದ್ದರೇ ಅದಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣವಾಗುತ್ತಾರೆ’ ಎಂದು ಹೇಳಿದರು.
ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಸೋಮನಾಥ ಕಳ್ಳಿಮನಿ, ಸಂಗಮೇಶ ಬಬಲೇಶ್ವರ, ಶರಣಪ್ಪ ಸುಣಗಾರ, ವಿದ್ಯಾರಾಣಿ ತುಂಗಳ, ದಿನೇಶ ಹಳ್ಳಿ, ಅಬ್ದುಲ್ ರಜಾಕ್ ಹೊರ್ತಿ, ಸುಜಾತಾ ಕಳ್ಳಿಮನಿ, ಸ್ನೇಹಾಲತಾ ಶೆಟ್ಟಿ, ಎಂ.ಎನ್.ಮದರಿ, ಬಿ.ಕೆ.ಬಿರಾದಾರ, ಸಿ.ಬಿ.ಅಸ್ಕಿ, ಎಂ. ಸಿ. ಮುಲ್ಲಾ, ಫಯಾಜ್ ಕಲಾದಗಿ, ಅಡ್ಡಿವೆಪ್ಪ ಸಾಲಗಲ್, ಅರ್ಜುನ್ ರಾಠೋಡ, ಮೊಹಮ್ಮದ್ ರಫೀಕ್ ಟಪಾಲ್, ಡಿ. ಎಲ್. ಚವ್ಹಾಣ, ಶಬೀರ್ ಜಹಗೀರದಾರ, ಜಮಿರ್ ಬಕ್ಷಿ, ಸಂಜು ಕಂಬಾಗಿ, ಅಕ್ರಮ ಮಾಶಾಳಕರ, ಕನಾನ್ ಮುಶ್ರೀಫ್ ಇದ್ದರು.
ರಾಜ್ಯಪಾಲರು ಪೂರ್ವಗ್ರಹ ಪೀಡಿತರಾಗಿದ್ದಾರೆ. ಇಂತಹ ರಾಜ್ಯಪಾಲರನ್ನು ಎಂದೂ ನೋಡಿರಿಲ್ಲ. ಮುಖ್ಯಮಂತ್ರಿಗೆ ನೀಡಿರುವ ನೋಟಿಸ್ ಹಿಂಪಡೆಯದೇ ಇದ್ದರೇ ಕಾನೂನು ಹೋರಾಟ ನಡೆಸುತ್ತೇವೆ
-ಶಿವಾನಂದ ಪಾಟೀಲಸಚಿವ
ರಾಜ್ಯ ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಈಡೇರಿಸಿದ್ದೇವೆ. ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಮುಂದಿನ 10 ವರ್ಷವೂ ನಮ್ಮ ಸರ್ಕಾರವೇ ಅಧಿಕಾರದಲ್ಲಿ ಇರಲಿದೆ
-ಅಶೋಕ ಮನಗೂಳಿಶಾಸಕ ಸಿಂದಗಿ
ರಾಜ್ಯಪಾಲರು ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರಿಗೆ ನೀಡಿರುವ ನೋಟಿಸ್ ಕಾನೂನುಬಾಹಿರವಾಗಿದ್ದು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ಪಕ್ಷದಿಂದ ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ.
–ಮಲ್ಲಿಕಾರ್ಜುನ ಲೋಣಿ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.