ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಪುರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಕಾಂಗ್ರೆಸ್‌, ಜೆಡಿಎಸ್‌ನಿಂದ ನಿರಂತರ ಸಭೆ
Last Updated 13 ಅಕ್ಟೋಬರ್ 2020, 2:45 IST
ಅಕ್ಷರ ಗಾತ್ರ

ಸಿಂದಗಿ: ಇಲ್ಲಿನ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ (ಎರಡೂ ಸ್ಥಾನ ಸಾಮಾನ್ಯ ವರ್ಗ) ಅಧಿಸೂಚನೆ ಹೊರ ಬಿದಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ.

ಅ.22ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಬಿಜೆಪಿಯ ಮೂವರೇ ಸದಸ್ಯರಿರುವುದರಿಂದ ಅಸಹಾಯಕರಾಗಿದ್ದಾರೆ.

ಕಾಂಗ್ರೆಸ್‌ನಿಂದ 11, ಜೆಡಿಎಸ್‌ನಿಂದ 6, ಬಿಜೆಪಿಯಿಂದ 3, ಪಕ್ಷೇತರರು 3 ಆಯ್ಕೆಗೊಂಡರು. ಇಬ್ಬರು ಪಕ್ಷೇತರ ಸದಸ್ಯರು ಬಹಿರಂಗವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ 13 ಸಂಖ್ಯಾಬಲದೊಂದಿಗೆ ಕಾಂಗ್ರೆಸ್ ಬಹುಮತವಿರುವ ಪಕ್ಷವಾಗಿ ಹೊರಹೊಮ್ಮಿದೆ. ಆದಾಗ್ಯೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸದಸ್ಯರಲ್ಲಿ ಎರಡು ಬಣಗಳಾಗಿರುವುದನ್ನು ಕಾಂಗ್ರೆಸ್ ಸದಸ್ಯರೇ ಒಪ್ಪಿಕೊಂಡಿದ್ದಾರೆ.

‘ಬಹುಮತವುಳ್ಳ ಕಾಂಗ್ರೆಸ್ ಪಕ್ಷದ ಸದಸ್ಯರು ಒಟ್ಟಾಗಿ ಇರಬೇಕು. ನಾಲ್ವರು ಸದಸ್ಯರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಎಲ್ಲ ಸದಸ್ಯರನ್ನೊಳಗೊಂಡು ಪಕ್ಷದ ವರಿಷ್ಠರ ಸಭೆ ನಡೆಸಿ ಒಮ್ಮತದಿಂದ ಅಭ್ಯರ್ಥಿಯನ್ನು ತೀರ್ಮಾನಿಸಲಾಗುವುದು ಎಂಬ ಅಭಿಪ್ರಾಯವನ್ನು ಈಗಾಗಲೇ ಪ್ರಥಮ ಹಂತದ ಸಭೆಯಲ್ಲಿ ತಿಳಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಶರಣಪ್ಪ ಸುಣಗಾರ ಪ್ರತಿಕ್ರಿಯಿಸಿದ್ದಾರೆ.

ಮೂರನೇ ಬಾರಿಗೆ ಸದಸ್ಯರಾಗಿ ಆಯ್ಕೆಗೊಂಡ ಹಣಮಂತ ಸುಣಗಾರರಿಗೆ ಅಧ್ಯಕ್ಷಗಿರಿ ದೊರಕಿಸಿಕೊಡುವ ಉದ್ದೇಶ ಶರಣಪ್ಪ ಸುಣಗಾರ ಅವರಿದೆ ಎಂದು ಬಹುತೇಕ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಅಲ್ಲದೇ, ಈ ಹಿಂದಿನ ಅವಧಿಯಲ್ಲಿ ಪುರಸಭೆಯಲ್ಲಾದ ಭಾರಿ ಅವ್ಯವಹಾರ ಮುಚ್ಚಿ ಹಾಕುವ ಷರತ್ತಿನೊಂದಿಗೆ ಹಲವು ಸದಸ್ಯರು ಸುಣಗಾರಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ನ ಮತ್ತೊಂದು ಬಣದಲ್ಲಿ ಐವರು ಸದಸ್ಯರಿದ್ದು, ಶಾಂತವೀರ ಬಿರಾದಾರ, ಖೈರುನಬಿ ನಾಟೀಕಾರ, ಪ್ರತಿಭಾ ಕಲ್ಲೂರ ಅವರ ಪೈಕಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಅವರ ಬೇಡಿಕೆಯಾಗಿದೆ.

ಜೆಡಿಎಸ್ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಹೊಂದಾಣಿಕೆ ಮಾಡಿಕೊಂಡಿದ್ದ ನಾಲ್ಕು ಜನ ಕಾಂಗ್ರೆಸ್ ಸದಸ್ಯರನ್ನು ಕಾಂಗ್ರೆಸ್ ವಲಯ ಪ್ರವಾಸಕ್ಕೆಂದು ದೂರದ ಊರಿಗೆ ಕಳಿಸಿದ ಸುದ್ದಿ ಗೌಪ್ಯವಾಗಿ ಉಳಿದಿಲ್ಲ.

ಬಿಜೆಪಿ ತಟಸ್ಥ ನೀತಿ:‘ಬಿಜೆಪಿ ಮೂವರು ಸದಸ್ಯರು ಮಾತ್ರ ಇದ್ದು, ತಟಸ್ಥ ನೀತಿ ಅನುಸರಿಸಲಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್‌ನಲ್ಲಿನ ಒಳ ಜಗಳದಿಂದ ಸಹಾಯ ಕೋರಿ ಪಕ್ಷದ ಕಾರ್ಯಾಲಯಕ್ಕೆ ಬಂದರೆ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಬಿಟ್ಟು ಕೊಡುವ ಬೇಡಿಕೆ ಇಡಲಾಗುವುದು. ಪಕ್ಷದ ಹಿರಿಯ ಸದಸ್ಯ ಮಹಾಂತಗೌಡ ಬಿರಾದಾರ ಅವರ ಹೆಸರನ್ನೂ ಪ್ರಸ್ತಾಪಿಸಲಾಗುವುದು’ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ರಮೇಶ ಭೂಸನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಜೆಡಿಎಸ್‌ನಲ್ಲಿ ಡಾ.ಶಾಂತವೀರ ಮನಗೂಳಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಶತಾಯಗತಾಯ ಅಧ್ಯಕ್ಷರಾಗಲೇಬೇಕೆಂಬ ಉದ್ದೇಶದಿಂದಾಗಿ ಪುರಸಭೆ ಚುನಾವಣಾ ಅಖಾಡಕ್ಕೆ ದುಮುಕಿದ್ದಾರೆ.

‘ಇಲ್ಲಿಯ ಪುರಸಭೆ ಬದಲಾವಣೆಯ ಪರ್ವ ಕಾಣಬೇಕು ಎಂಬ ಕಾರಣಕ್ಕಾಗಿಯೇ ಅಧ್ಯಕ್ಷನಾಗಲು ಪ್ರಯತ್ನ ನಡೆಸುತ್ತಿರುವೆ. ಆದಾಗ್ಯೂ ನಮ್ಮ ಪಕ್ಷ ಕಡಿಮೆ ಸಂಖ್ಯಾಬಲ ಹೊಂದಿರುವುದು ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ. ಆದರೂ ಪ್ರಯತ್ನವಂತೂ ಜೋರಾಗಿಯೇ ಇದೆ’ ಎನ್ನುತ್ತಾರೆ ಡಾ.ಶಾಂತವೀರ.

ಒಬ್ಬರೇ ಪಕ್ಷೇತರ ಸದಸ್ಯರಾಗಿರುವ ಭೀಮು ಕಲಾಲ ಅವರು ಸುಣಗಾರ ಬಣ ಹೊರತುಪಡಿಸಿ ಬೇರೆಯವರಿಗೆ ಬೆಂಬಲಿಸುವ ಮಾತು ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT