ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಚಡ್ಡಿ, ಲಂಗೋಟಿ ಎರಡೂ ಕಳಚಿದೆ: ಜೋಶಿ ವ್ಯಂಗ್ಯ

Last Updated 6 ಜೂನ್ 2022, 12:53 IST
ಅಕ್ಷರ ಗಾತ್ರ

ವಿಜಯಪುರ: ದೇಶದಾದ್ಯಂತ ಕಾಂಗ್ರೆಸ್ ಪಕ್ಷದ ಚಡ್ಡಿ ಮತ್ತು ಲಂಗೋಟಿ ಎರಡನ್ನೂ ಜನತೆ ಕಳಚಿರುವುದರಿಂದ ಇದೀಗ ಆರ್‌ಎಸ್‌ಎಸ್ ಚಡ್ಡಿ ಸುಡಲು ಅವರು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ನಿಡಗುಂದಿ ಪಟ್ಟಣದ ಮುದ್ದೇಶ್ವರ ಮಂಗಲ ಭವನ ಆವರಣದಲ್ಲಿ ಸೋಮವಾರ ನಡೆದ ವಿಧಾನ ಪರಿಷತ್‌ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸದ್ಯ ದೇಶದ 18 ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಿಂದ ವಂಚಿತಗೊಂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಅವರಿಗೆ ಆರೋಪ ಮಾಡಲು ಯಾವುದೇ ವಿಷಯವಿಲ್ಲದಂತಾಗಿ ಆರ್‌ಎಸ್‌ಎಸ್ ಚಡ್ಡಿ ಸುಡಲು ಹೋಗಿ ಶೀಘ್ರದಲ್ಲಿಯೇ ಅವರು ಸಂಪೂರ್ಣ ಸುಟ್ಟು ಹೋಗಲಿದ್ದಾರೆ ಎಂದರು.

ಉತ್ತರ ಪ್ರದೇಶದಲ್ಲಿ 397ಕಡೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ 388 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ. ಉತ್ತರಾಖಾಂಡ, ಆಸ್ಸಾಂನಲ್ಲಿ ಕಾಂಗ್ರೆಸ್ ಚಡ್ಡಿ ಇಲ್ಲ. ಗುಜರಾತ್‌ನಲ್ಲಂತೂ ಕೇಳಲೇ ಬೇಡಿ. ಏನೆಲ್ಲ ಆರೋಪ ಮಾಡಿದರೂ ದೇಶದಲ್ಲಿ ಕಾಂಗ್ರೆಸ್ ಬೀಜ ಮೊಳಕೆಯೊಡೆಯುತ್ತಿಲ್ಲ. ಹೀಗಾಗಿ ಈಗ ರಾಜ್ಯದಲ್ಲಿ ಪಠ್ಯಪುಸ್ತಕಕ್ಕೆ ಮಸಿ ಬಳಿಯಲು ಹೊರಟಿದ್ದಾರೆ ಎಂದು ಹೇಳಿದರು.

ಆರ್‌ಎಸ್‌ಎಸ್ ಸಂಸ್ಥಾಪಕರ ಹೆಸರು ಪಠ್ಯದಲ್ಲಿ ಸೇರ್ಪಡೆಗೊಳಿರುವುದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಿಂದೆ ತಾವು ಟಿಪ್ಪು ಸುಲ್ತಾನ್‌, ನೆಹರು ಅವರ ಹೆಸರನ್ನು ಪಠ್ಯದಲ್ಲಿ ಸೇರಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಒಬ್ಬ ಸಾಮಾನ್ಯ ಸಿಪಾಯಿಯನ್ನು ನಿಲ್ಲಿಸಿ ಅಂಬೇಡ್ಕರರನ್ನು ಸೋಲಿಸಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ನೆಹರು, ಇಂದಿರಾ, ರಾಜೀವ್‌ ಗಾಂಧಿ ನಿಧನದ ನಂತರ ಸುಮಾರು 60 ಎಕರೆ ಜಮೀನನ್ನು ಅವರಿಗೆ ನೀಡಿದ ಕಾಂಗ್ರೆಸ್, ಅಂಬೇಡ್ಕರ್ ಅವರಿಗೆ ನೀಡಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಆ ಕಾರ್ಯ ಮಾಡುತ್ತಿದೆ ಎಂದರು.

ಜೂನ್‌ 13 ರಂದು ನಡೆಯುವ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಮತ್ತು ಅರುಣ ಶಹಪೂರ ಅವರನ್ನು ಗೆಲ್ಲಿಸಿ ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ವಾಯವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಪೂರ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಸೋಮನಗೌಡ ಪಾಟೀಲ ಮನಗೂಳಿ, ಸುರೇಶ ಬಿರಾದಾರ, ಶಿವಾನಂದ ಅವಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಪದ್ಮಾವತಿ ಗುಡಿ, ಬಸವನ ಬಾಗೇವಾಡಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಅಮರಯ್ಯ ಹಿರೇಮಠ, ಬಸವರಾಜ ದಂಡಿನ ಇದ್ದರು.

*

ಕಾಂಗ್ರೆಸ್ 68 ವರ್ಷ ದೇಶದಲ್ಲಿ ಬರೀ ಸುಳ್ಳು, ಮೋಸದಿಂದ ದುರಾಡಳಿತ ನಡೆಸಿದ ಪರಿಣಾಮ ಇಂದು ಹೇಳ ಹೆಸರಿಲ್ಲದಂತೆ ನಿರ್ನಾಮವಾಗುತ್ತಿದೆ

-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT