ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಯತ್ನಾಳ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ರಾಹುಲ್‌ ಗಾಂಧಿ, ಮಠಾಧೀಶರು, ಬುದ್ದಿಜೀವಿಗಳ ಅವಹೇಳನಕ್ಕೆ ಖಂಡನೆ
Last Updated 26 ಆಗಸ್ಟ್ 2021, 11:54 IST
ಅಕ್ಷರ ಗಾತ್ರ

ವಿಜಯಪುರ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಠಾಧೀಶರು, ಬುದ್ದಿಜೀವಿಗಳು, ಸಾಹಿತಿಗಳ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳಅವಹೇಳನಕಾರಿ ಹೇಳಿಕೆ ನೀಡಿರುವ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಮುಖಂಡರು ಶಾಸಕ ಯತ್ನಾಳ ವಿರುದ್ಧ ಘೋಷಣೆ ಕೂಗಿದರು.

ಮುಖಂಡ ಅಬ್ದುಲ್ ಹಮೀದ ಮುಶ್ರೀಫ್‌ ಮಾತನಾಡಿ, ಕಾಂಗ್ರೆಸ್‌ ಮುಖಂಡರು, ಮಠಾಧೀಶರು, ಬುದ್ದಿಜೀವಿಗಳ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಪ್ರಚೋಧನಕಾರಿಯಾಗಿ ಮಾತನಾಡಿರುವ ಶಾಸಕ ಯತ್ನಾಳ ವಿರುದ್ಧ‌ ಜಿಲ್ಲಾಡಳಿತ ಸ್ವಯಂ ಪ್ರೇರಿತವಾಗಿ ಎಫ್.ಐ.ಆರ್ ದಾಖಲಿಸಿ, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗಾಂಧಿ ಪರಿವಾರ ಈ ದೇಶಕ್ಕೆ ಕೊಟ್ಟ ಕೊಡುಗೆ ಇಡೀ ದೇಶ ಹೆಮ್ಮೆ ಪಡುತ್ತದೆ. ನಿಮ್ಮಂತಹವರ ಸರ್ಟಿಫಿಕೇಟ್‌ ಬೇಕಾಗಿಲ್ಲ ಎಂದರು.

ನಿಮ್ಮ ರಾಜಕೀಯ ಉದ್ದಾರಕ್ಕಾಗಿ, ಯಾರನ್ನೋ ಮೆಚ್ಚಿಸುವ ಭರದಲ್ಲಿ ಹೇಳಿಕೆ ಕೊಟ್ಟರೆ ನಿಮಗೆ ಶೋಭೆ ತರುವುದಿಲ್ಲ. ನಿಮ್ಮ ಹೇಳಿಕೆಗಳನ್ನು ಗಮನಿಸಿದರೆ ನಿಮಗೆ ಬುದ್ದಿ ಭ್ರಮಣೆಯಾದಂತಿದೆ. ನೀವು ಮೊದಲು ಹುಚ್ಚಾಸ್ಪತ್ರೆಗೆ ಸೇರಿ ಉಪಚಾರ ಮಾಡಿಕೊಂಡರೆ ಒಳಿತು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರೇ ನಿಮ್ಮನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ದಿನ ದೂರವಿಲ್ಲ ಎಂದು ಹೇಳಿದರು.

ಕೈಯಲ್ಲಿ ಅಧಿಕಾರವಿದೆಯೆಂದು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ಹಾಗೂ ಕಚೇರಿಗೆ ಮುತ್ತಿಗೆ ಹಾಕಿ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರದ ರಸ್ತೆಗಳು ಹದಗೆಟ್ಟು ಹೋಗಿವೆ, ಒಳಚರಂಡಿ ವ್ಯವಸ್ಥೆ ಇಲ್ಲದೇ ಜನ ಕಂಗಾಲಾಗಿ ಹೋಗಿದ್ದಾರೆ. ಅಭಿವೃದ್ದಿ ಕೆಲಸಗಳು ಮರೀಚಿಕೆಯಾಗಿವೆ. ನಗರದ ಜನ ನಿಮಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನಗರದ ಅಭಿವೃದ್ದಿ ಕೆಲಸಗಳಲ್ಲಿ ತಾರತಮ್ಯ ಮಾಡುತ್ತಿದ್ದು, ಜನ ನಿಮಗೆ ಮುಂದಿನ ದಿನಗಳಲ್ಲಿ ರಸ್ತೆಯಲ್ಲೇ ತತ್ತಿ ಸೇವೆ ಮಾಡಲ ನಿಶ್ಚಯಿಸಿದ್ದಾರೆ ಎಂದರು.

ಶ್ರೀಕಾಂತ ಛಾಯಾಗೋಳ, ಎಸ್.ಎಂ.ಪಾಟೀಲ ಗಣಿಹಾರ, ಸಾಹೇಬಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಮಹ್ಮದ ರಫೀಕ ಟಪಾಲ, ಆರತಿ ಶಹಾಪೂರ, ಪ್ರಕಾಶ ಕಟ್ಟಿಮನಿ, ರವೀಂದ್ರ ಜಾಧವ, ಅಬ್ದುಲ್ ರಜಾಕ, ಜಮೀರ ಬಕ್ಷೀ, ಶಬ್ಬೀರ ಜಾಗೀರದಾರ, ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರ ಮಠ, ಮಹ್ಮದ ಹನೀಫ್ ಮಕಾನದಾರ, ಜಮೀರ ಅಹ್ಮದ ಬಾಗಲಕೋಟ, ದೀಪಾ ಕುಂಬಾರ, ಆಸ್ಮಾ ಕಾಲೇಬಾಗ, ವಸಂತ ಹೊನಮೋಡೆ, ಐ.ಎಂ.ಇಂಡಿಕರ, ಇರ್ಫಾನ್‌ ಶೇಖ್‌, ಜಮೀರ ಬಾಂಗಿ, ಇದ್ರುಸ್‌ ಬಕ್ಷೀ, ಇಲಿಯಾಸ್‌ ಸಿದ್ದಿಕೆ, ಸಂತೋಷ ಬಾಲಗಾಂವಿ, ಧನರಾಜ.ಎ.ಚನ್ನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಮಹಾದೇವ ಜಾಧವ, ತಿಪ್ಪಣ್ಣ ಕಮಲದಿನ್ನಿ, ಅಶ್ಪಾಕ್‌ ಮನಗೂಳಿ ನಾಗೇಶ ಮಣೂರ, ಗಿರೀಶ ಕುಲಕರ್ಣಿ, ಆಸೀಫ್‌ ಜುನೇದಿ, ಜಾಫರ ಶೇಖ್‌, ಆಸೀಫ್‌ ಪುಂಗಿವಾಲೆ, ಸರಿತಾ ಬಳ್ಳಾರಿ, ತಾಜುದ್ದೀನ್‌ ಖಲೀಫಾ, ಶಮೀಮ್‌ ಅಕ್ಕಲಕೋಟ, ಶಕೀಲ ಗಡೇದ, ಸುನೀಲ ಬಿರಾದಾರ, ವಾಸುದೇವ ಗಡದಾನಿ, ದೇವಾನಂದ ಲಚ್ಚಾಣ, ಮುಕ್ತಿಯಾರ ನಧಾಪ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

***

ಯತ್ನಾಳ ಅವರು ಮಠಾಧೀಶರು, ಬುದ್ಧಿಜೀವಿಗಳ ಬಗ್ಗೆ ಹಾಗೂ ಅನ್ಯ ಕೋಮಿನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು

–ಅಬ್ದುಲ್ ಹಮೀದ ಮುಶ್ರೀಫ್‌

ಕಾಂಗ್ರೆಸ್‌ ಮುಖಂಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT