ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ಕಾಂಗ್ರೆಸ್ ಧ್ವನಿ: ಕುಮಾರಸ್ವಾಮಿ

Last Updated 22 ಜನವರಿ 2023, 12:54 IST
ಅಕ್ಷರ ಗಾತ್ರ

ವಿಜಯಪುರ: ಪಂಚರತ್ನ ರಥಯಾತ್ರೆ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕಾಂಗ್ರೆಸ್ ನಡೆಸುತ್ತಿರುವುದು ಏನು? ನಿಮ್ಮದು ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ ಎಂದು ಚಾಟಿ ಬೀಸಿದರು.

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಬಳವಾಟ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ನಿಮಿತ್ತ ಗ್ರಾಮ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಂಚರತ್ನ ರಥಯಾತ್ರೆ 50 ದಿನ ದಾಟಿ ಮುನ್ನಡೆಯುತ್ತಿದೆ. ಅದು ಇವರೆಲ್ಲರ ನಿದ್ದೆಗೆಡಿಸಿದೆ. ಹೋದ ಕಡೆ ಎಲ್ಲಾ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಹಿಸಿಕೊಳ್ಳುವುದು ಅವರಿಗೆ ಆಗುತ್ತಿಲ್ಲ ಎಂದರು.

ನನ್ನ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಲು ಧರ್ಮಸ್ಥಳದ ಸಿದ್ದವನದಲ್ಲಿ ನಡೆಸಿದ ಷಡ್ಯಂತ್ರವನ್ನು ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು‌.

ಜನರು ಕಷ್ಟ ಹೇಳಿಕೊಂಡು ನಮ್ಮ ಬಳಿ ನಿರಂತರವಾಗಿ ಜನ ಬರುತ್ತಾರೆ. ಸುಮ್ಮನೆ ಜೆಡಿಎಸ್ ಪಕ್ಷದ ಬಗ್ಗೆ ಏನೇನು ಮಾತನಾಡಬೇಡಿ ಎಂದರು.

ಮುಖ್ಯಮಂತ್ರಿ ಆಸೆಗಾಗಿ ಪಕ್ಷ ಬಿಟ್ಟು ಹೋಗಿದ್ದು ನೆನಪು ಇದೇಯಾ ನಿಮಗೆ? ನಿಮ್ಮಿಂದ ನಾನು ಪಾಠವನ್ನು ಹೇಳಿಸಿಕೊಳ್ಳುವ ಅಗತ್ಯ ನನಗೆ ಇಲ್ಲ. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವನ್ನು ಉಳಿಸಿಕೊಂಡು ಹೊರಟಿದ್ದೇವೆ ನಾವು. ಅಂಥ ಪಕ್ಷವನ್ನು, ಅವರ ಸಿದ್ದಾಂತವನ್ನು ಗಾಳಿಗೆ ಬಿಟ್ಟು ಸಿಎಂ ಕುರ್ಚಿ ಹಿಂದೆ ಓಡಿ ಹೋದವರು ಯಾರು? ನಿಮ್ಮ ಯೋಗ್ಯತೆ ಏನು ಅಂತಾ ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ನೀವು ಏನು ಮಾಡಿದಿರಿ ಎನ್ನುವುದು ಗೊತ್ತಿದೆ. ಎಲ್ಲಿ ಕೂತು, ಯಾರ ಜತೆ ಕೂಡಿ ಕುತಂತ್ರ ಮಾಡಿದಿರಿ ಎನ್ನುವುದು ನನಗೆ ತಿಳಿದಿದೆ. ಬಿಜೆಪಿಗೆ ಅಧಿಕಾರ ಹೋಗಬಾರದು ಎಂದು ನಿಮ್ಮ ಪಕ್ಷದ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು. ಖರ್ಗೆ, ಪರಮೇಶ್ವರ್, ಡಿಕೆ ಶಿವಕುಮಾರ್ ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ಲವೆ? ಆಗ ನೀವು ಎಲ್ಲಿದ್ದೀರಿ? ಎಂದು ಕಿಡಿಕಾರಿದರು.

ನನ್ನ ಸರ್ಕಾರ ಹೇಗೆ ಹೋಯಿತು? ಅದನ್ನು ತೆಗೆಯಲು ನಿಮ್ಮ ಕಾಣಿಕೆ ಏನು? ಬಿಜೆಪಿಯವರ ಜತೆ ಹೇಗೆಲ್ಲಾ ಕುಮ್ಮಕ್ಕಾಗಿದ್ದಿರಿ? ಯಾರನ್ನೆಲ್ಲ ಎಲ್ಲೆಲ್ಲಿಗೆ ಕಳಿಸಿದಿರಿ ಎನ್ನುವುದು ನನಗೆ ಮಾಹಿತಿ ಇದೆ. ಆದರೆ, ಜಾತ್ಯತೀತ ತತ್ವ ತಮ್ಮ ಆಸ್ತಿ ಎನ್ನುವ ರೀತಿ ವರ್ತಿಸುತ್ತಿದ್ದಿರಿ. ಜಯಪ್ರಕಾಶ್ ನಾರಾಯಣ್ ಅವರ ಸಿದ್ದಾಂತಕ್ಕೆ ನೀವು ಬದ್ಧರಾಗಿ ಇದ್ದಿದರೆ ನೀವು ಅಧಿಕಾರಕ್ಕಾಗಿ ಮಾತೃಪಕ್ಷವನ್ನು ಕಾಲಿನಲ್ಲಿ ಒದ್ದು ಹೋಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ಬಿಜೆಪಿ ಪಕ್ಷದವರಿಗಿಂತ ಭ್ರಷ್ಟಾಚಾರದಲ್ಲಿ ನಿವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮಗಳನ್ನು ನಡೆಸಿದ್ದೀರಿ. ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡಲು ನಿಮ್ಮಿಂದ ಉತ್ತರ ಕೊಡಲು ಆಗಿಲ್ಲ. ಮತ್ತೆ ನಮ್ಮ ಪಕ್ಷದ ಬಗ್ಗೆ ನಾಲಿಗೆ ಜಾರಿ ಬಿಡುತ್ತಿರಾ? ನಾಚಿಕೆ ಇಲ್ಲವೇ? ಎಂದು ಅವರು ಕೇಳಿದರು.

ನಾನು ಹೋಟೆಲ್ ನಲ್ಲಿ ಇದ್ದೆ ಎಂದು ಹೇಳುತ್ತಿರಲ್ಲ, ನಿಮ್ಮ ಸರ್ಕಾರ ಹೋದ ಕೂಡಲೇ ಸರ್ಕಾರಿ ಮನೆ ಖಾಲಿ ಮಾಡಿಕೊಡಬೇಕಿತ್ತು. ನೀವು ಹಾಗೆ ಮಾಡಲಿಲ್ಲ. ನಾನು ಹೋಟೆಲ್ ನಲ್ಲಿಯೇ ಇದ್ದಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೂರಾರು ಕೋಟಿ ಹಣ ಹೇಗೆ ಬಿಡುಗಡೆ ಆಯಿತು? ನಿಮ್ಮ ಪಕ್ಷದ ಶಾಸಕರಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹೇಗೆ ಬಿಡುಗಡೆ ಆಯಿತು? ಎಂದರು.
ನಾನು ಸದಾ ಜನಗಳ ಮಧ್ಯೆ ಇರುವ ಸಾಮಾನ್ಯ ವ್ಯಕ್ತಿ. ಆದರೆ ನೀವು ಸಂಜೆ 6 ಗಂಟೆಯಾದ ಮೇಲೆ ಯಾರ ಕೈಗೆ ಸಿಗುತ್ತಿದ್ದಿರಿ? ಮಧ್ಯಾಹ್ನ ಊಟಕ್ಕೆಂದು ಹೋದರೆ ನಾಪತ್ತೆ ಆಗಿಬಿಡುತ್ತಿದ್ದಿರಿ! ಈ ಬಗ್ಗೆ ಕೂಡ ನೀವು ಭಾಷಣ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದರು.

ಮುದ್ದೇಬಿಹಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್. ಸೋಲಾಪೂರ, ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT