ಗುರುವಾರ , ಜೂನ್ 24, 2021
23 °C
ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ

ಕೋವಿಡ್‌ ನಿರ್ವಹಣೆ; ಲೋಪಕ್ಕೆ ಅವಕಾಶ ನೀಡದಿರಿ: ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್  ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

ಮುದ್ದೇಬಿಹಾಳದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಿದ ಅವರು, ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಎಲ್ಲ ಕೋವಿಡ್ ರೋಗಿಗಳಿಗೆ ಮತ್ತು ಕೋವಿಡೇತರ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಬೇಕು ಎಂದರು.

ಕೋವಿಡ್ ರೋಗಿಗಳ ಬಗ್ಗೆ ಸೂಕ್ತ ಗಮನ ನೀಡಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಹಾಸಿಗೆಗಳು ಇರುವಂತೆ ನೋಡಿಕೊಳ್ಳಬೇಕು. ಆಮ್ಲಜನಕದ ಬಗ್ಗೆ ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆಗಾಗಿ ಅವಶ್ಯಕತೆ ಇರುವ ಕಡೆ ತುರ್ತು ಸೇವೆಗೆ ಸಕಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರೆಮ್‍ಡಿಸಿವಿರ್ ಲಸಿಕೆಯನ್ನು ವೈದ್ಯರ ಸಲಹೆ ಆಧಾರದಲ್ಲಿ ನೀಡಬೇಕು. ಮುದ್ದೇಬಿಹಾಳದಲ್ಲಿ ಆಮ್ಲಜನಕ ಘಟಕ ಆರಂಭಕ್ಕೆ ಕ್ರಮಕೈ ಕೊಳ್ಳಬೇಕು ಎಂದರು.

ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಡಿ ಗ್ರುಪ್ ನೌಕರರಿಗೆ ಸರಿಯಾಗಿ ವೇತನ ಆಗುವಂತೆ ನೋಡಿಕೊಳ್ಳಬೇಕು. ಹೋಮ್ ಕ್ವಾರಂಟೈನ್ ಬಗ್ಗೆ ನಿಗಾ ಇಡುವ ಜೊತೆಗೆ ಅವರಿಗೆ ಅಲ್ಲಿ ಇದ್ದವರಿಗೆ ಸಮರ್ಪಕವಾಗಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಸಚಿವರು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ ಮಾತನಾಡಿ, ಮುದ್ದೇಬಿಹಾಳ ತಾಲ್ಲೂಕಿನಲ್ಲಿ 76,977 ಗಂಟಲುದ್ರವ ಮಾದರಿ ಸಂಗ್ರಹಿಸಿದ್ದು, 73,457 ನೆಗೆಟಿವ್, 3530 ಪಾಸಿಟಿವ್ ಬಂದಿವೆ. ಇದುವರೆಗೆ 3080 ಡಿಸ್‌ಜಾರ್ಜ್‌ ಆಗಿದ್ದು,  ಇದುವರೆಗೆ ಪಾಸಿಟಿವ್‍ನಿಂದ 17 ಜನ ಮೃತಪಟ್ಟಿದ್ದಾರೆ ಎಂದರು.

ತಾಲ್ಲೂಕು ಆಸ್ಪತ್ರೆಯಲ್ಲಿ 28 ಬೆಡ್ ಕೋವಿಡ್‍ಗೆ ಮೀಸಲಿದ್ದು, ಇದರಲ್ಲಿ 20 ಆಕ್ಸಿಜನ್, 3 ವೆಂಟಿಲೇಟರ್ ಇವೆ. 72 ಜಂಬೋ ಆಕ್ಸಿಜನ್ ಸಿಲೆಂಡರ್‌ಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ರೆಮ್‍ಡಿಸಿವಿರ್‌ ಪೂರೈಕೆಯಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ 60 ವರ್ಷ ಮೇಲ್ಪಟ್ಟ 25,581 ಜನರಿಗೆ ಕೋವಿಡ್ ವ್ಯಾಕ್ಸಿನ್ ಗುರಿ ಇದ್ದು ಇವರಲ್ಲಿ 14,517 ಜನರಿಗೆ ವ್ಯಾಕ್ಸಿನ್ ಹಾಕಿ ಶೇ 56.75 ಗುರಿ ಸಾಧಿಸಲಾಗಿದೆ. 45-59 ವಯಸ್ಸಿನವರಿಗೆ ಮೊದಲ ಡೋಸ್‍ ಶೇ 81, 2ನೇ ಡೋಸ್‍ ಶೇ 39.96 ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ನಿಂಬೆ ಅಭಿವೃಧ್ದಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪುರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ, ತಾಲ್ಲೂಕು ಪಂಚಾಯ್ತಿ ಇಓ ವೀರೇಶ ಹಿರೇಮಠ, ಟಿಎಚ್‍ಒ ಡಾ.ಸತೀಶ ತಿವಾರಿ, ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ, ಸಿಪಿಐ ಆನಂದ ವಾಘ್ಮೋಡೆ ಇದ್ದರು.

***

ಕೋವಿಡ್ ನಿಯಂತ್ರಣ ಮಾಡಲು ಗಂಟಲುದ್ರವ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಕೋವಿಡ್ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು

-ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವೆ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು