ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನಾಳೆಯಿಂದ

ವಿಜಯಪುರ ಜಿಲ್ಲೆಗೆ ಬಂತು ಕೋವಿಶೀಲ್ಡ್‌ ಲಸಿಕೆ
Last Updated 14 ಜನವರಿ 2021, 12:07 IST
ಅಕ್ಷರ ಗಾತ್ರ

ವಿಜಯಪುರ: ಮೊದಲ ಹಂತದಲ್ಲಿ ಕೋವಿಡ್-19 ಲಸಿಕೆ ಹಾಕುವ ಕಾರ್ಯ ಜಿಲ್ಲೆಯ ಎಂಟು ಸ್ಥಳಗಳಲ್ಲಿ ಜನವರಿ 16 ರಂದು ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ ತಿಳಿಸಿದ್ದಾರೆ.

ಕೋವಿನ್ ತಂತ್ರಾಂಶದಲ್ಲಿ ಈಗಾಗಲೇ ನೋಂದಣಿಯಾದ ಒಟ್ಟು 1912 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ದಿನ ಲಸಿಕೆ ನೀಡುವ ಕಾರ್ಯವನ್ನು ವ್ಯಾಕ್ಸಿನೇಶನ್ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯಪುರ ನಗರದ ಬಿಎಲ್‍ಡಿಇಎ ಬಿ.ಎಂ ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ 1000, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 400, ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 69, ಬಸವನ ಬಾಗೇವಾಡಿಯಲ್ಲಿ 100, ಇಂಡಿಯಲ್ಲಿ 33, ಮುದ್ದೇಬಿಹಾಳದಲ್ಲಿ 100, ಸಿಂದಗಿಯಲ್ಲಿ 139, ವಿಜಯಪುರದ ಯುಪಿಎಚ್‍ಸಿ ದರ್ಗಾದಲ್ಲಿ 71 ಸೇರಿದಂತೆ ಒಟ್ಟು 1912 ಪೋರ್ಟಲ್‍ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.

ಅಂದು ಲಸಿಕೆ ಪಡೆಯುವ ಫಲಾನುಭವಿಗಳಿಗೆ ಎಸ್‍ಎಂಎಸ್ ಮೂಲಕ ಮುಂಚಿತವಾಗಿ ತಿಳಿಸಲಾಗಿದೆ. ಎಲ್ಲ ಫಲಾನುಭವಿಗಳು ಕೋವಿಡ್ -19 ಲಸಿಕೆ ಪಡೆದು ಸರ್ಕಾರದ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದಿದ್ದಾರೆ.

15,820 ಜನರಿಗೆ ಲಸಿಕೆ:ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ 1370, ವಿಜಯಪುರ 10,487, ಇಂಡಿ 928, ಮುದ್ದೇಬಿಹಾಳ 1553, ಸಿಂದಗಿ 1482 ಸೇರಿದಂತೆ ಒಟ್ಟು 15,820 ಫಲಾನುಭವಿಗಳಿಗೆ ಪ್ರಥಮ ಹಂತದಲ್ಲಿ ಕೋವಿಡ್‌ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ ಐವರು ಅಧಿಕಾರಿಗಳನ್ನು ಒಳಗೊಂಡ 20 ತಂಡಕ್ಕೆ ಸೂಕ್ತ ತರಬೇತಿ ನೀಡಲಾಗಿದ್ದು, ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ ಇದಕ್ಕಾಗಿ ಮೂರು ಪ್ರತ್ಯೇಕ ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಸಂಗ್ರಹಕ್ಕಾಗಿ ಒಟ್ಟು 80 ಕೋಲ್ಡ್ ಸ್ಟೋರೇಜ್‌ ಕೇಂದ್ರಗಳಿವೆ ಎಂದು ಹೇಳಿದರು.

ಲಸಿಕೆ ನೀಡುವ ಕಾರ್ಯದಲ್ಲಿ ನಿಯೋಜಿಸಲಾಗಿರುವ ವ್ಯಾಕ್ಸಿನೇಶನ್ ಅಧಿಕಾರಿಗಳು ತಪ್ಪದೇ ತಮಗೆ ವಹಿಸಿದ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT