ಗುರುವಾರ , ಜನವರಿ 21, 2021
18 °C
ಮೂರು ಹಂತಗಳಲ್ಲಿ ಲಸಿಕಾ ವಿತರಣೆಗೆ ಕ್ರಿಯಾಯೋಜನೆ

ಕೋವಿಡ್ ಲಸಿಕೆ ಜನವರಿಗೆ ಲಭಿಸುವ ಸಾಧ್ಯತೆ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜನವರಿಯಲ್ಲಿ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿದ್ದು, ಲಸಿಕೆ ವಿತರಣಾ ಕಾರ್ಯಕ್ಕೆ ಈಗಿನಿಂದಲೇ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ -19 ಲಸಿಕಾ ವಿತರಣಾ ಸಿದ್ಧತೆಗಳ ಬಗ್ಗೆ ಸಭೆ ನಡೆಸಿದ ಅವರು, ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಬಹುದಾದ ಈ ಕೋವಿಡ್ ಲಸಿಕಾ ವಿತರಣೆಗೆ ಸಂಬಂಧಿಸಿದಂತೆ ಸಮಗ್ರವಾದ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಿದರು.

ಮೊದಲ ಹಂತದಲ್ಲಿ ಜಿಲ್ಲೆಯ ಅಂದಾಜು 12,618 ಸರ್ಕಾರಿ ಹಾಗೂ ಖಾಸಗಿ ಒಳಗೊಂಡ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ಗುರುತಿಸಲಾಗಿದ್ದು, ಕೋವಿನ್ ಪೋರ್ಟಲ್‌ನಲ್ಲಿಯೂ ಅಪ್‍ಲೋಡ್ ಮಾಡಲಾಗಿದೆ. ಲಸಿಕೆ ನೀಡುವವರು ಹಾಗೂ ಫಲಾನುಭವಿ ಎರಡು ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳು, ಆಯುರ್ವೇದ ವೈದ್ಯ ಸಿಬ್ಬಂದಿ ಮತ್ತು ಇತರೆ ಫಲಾನುಭವಿಗಳು ಒಳಗೊಂಡಂತೆ 2051 ಲಸಿಕೆದಾರರನ್ನು (ವ್ಯಾಕ್ಸಿನೇಟರ್ಸ್) ಸಹ ಗುರುತಿಸಲಾಗಿದೆ ಎಂದು ಹೇಳಿದರು.

ಎರಡನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಹಾಗೂ ಪೊಲೀಸ್ ಸೇರಿದಂತೆ ಕೋವಿಡ್ ವಾರಿಯರ್ಸ್‍ಗಳಿಗೆ ನೀಡಬೇಕಾದ ಲಸಿಕಾ ಸಿದ್ಧತೆಗಳ ಬಗ್ಗೆ ಕ್ರಿಯಾಯೋಜನೆ ಸಿದ್ಧಗೊಳಿಸಬೇಕು ಎಂದರು.

ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಮತ್ತು 50 ವರ್ಷದೊಳಗಿನ ಕೋಮಾರ್ಬಿಡಿಟಿ ಇದ್ದವರಿಗೂ ಲಸಿಕೆ ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅವರು ಸೂಚನೆ ನೀಡಿದರು.

ತಕ್ಷಣ ವಾರ್ ರೂಂ ಸಿದ್ಧಪಡಿಸಿಕೊಳ್ಳಬೇಕು. ಲಸಿಕೆ ನೀಡುವ ಮತ್ತು ಇತರೆ ಸಹಾಯಕ್ಕಾಗಿ 24X7 ಕಾರ್ಯನಿರ್ವಹಿಸಬೇಕು. ಕೋ - ವಿನ್ ಪೋರ್ಟಲ್ ಅನುಷ್ಠಾನಕ್ಕಾಗಿ ಆರ್‌ಸಿಎಚ್, ಕಾರ್ಯಕ್ರಮ ಅಧಿಕಾರಿ, ಒಬ್ಬ ಆರೋಗ್ಯ ಇಲಾಖೆ ಸಿಬ್ಬಂದಿ, ಮೂವೂರು ಐಟಿ ಇಲಾಖೆ ಸಿಬ್ಬಂದಿಗಳು (ಎನ್‍ಐಸಿ, ಅಂಕಿ ಸಂಖ್ಯೆ ಇಲಾಖೆ, ನಗರ ಸ್ಥಳೀಯ ಸಂಸ್ಥೆ), ಒಬ್ಬರು ವ್ಯಾಕ್ಸಿನ್ ಕೋಲ್ಡ್ ಚೈನ್ ಮ್ಯಾನೇಜರ್ ಮತ್ತು ಎನ್‍ಆರ್‌ಡಿ ಎಂಎಸ್ ಸಿಬ್ಬಂದಿಯನ್ನು ಒಳಗೊಂಡಂತೆ ಕಾರ್ಯನಿರ್ವಹಿಸಲು ಅವರು ಸೂಚನೆ ನೀಡಿದರು.

ತಾಲ್ಲೂಕುಮಟ್ಟದಲ್ಲಿ ತಕ್ಷಣ ಆಯಾ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಮಿತಿ ಸಭೆಗಳನ್ನು ನಡೆಸಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಚರ್ಚಿಸುವಂತೆ ತಿಳಿಸಿದರು.

ಈಗಾಗಲೇ ಜಿಲ್ಲೆಯ 1410 ಸ್ಥಳಗಳನ್ನು ಗುರುತಿಸಲಾಗಿದ್ದು, ಚುನಾವಣಾ ಮಾದರಿಯಲ್ಲಿ ಮೂರು ಕೊಠಡಿಗಳನ್ನು ಸ್ಥಾಪಿಸಬೇಕು. ವೇಟಿಂಗ್ ರೂಂ, ಲಸಿಕಾ ಕೊಠಡಿ ಹಾಗೂ 30 ನಿಮಿಷಗಳ ಆಬ್ಸರ್ವೇಶನ್‌ಗಾಗಿ ಕೊಠಡಿಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ತಿಳಿಸಿದರು.

ಪ್ರತಿ ಲಸಿಕಾ ಬೂತ್‍ಗಳಲ್ಲಿ 5 ಸದಸ್ಯರನ್ನು ಒಳಗೊಂಡ ತಂಡಗಳನ್ನು ಸಹ ರಚಿಸಿಕೊಳ್ಳುವಂತೆ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಮಹಾನಗರ ಪಾಲಿಕೆ ಆಯಕ್ತ ಶ್ರೀಹರ್ಷಾ ಶೆಟ್ಟಿ, ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ ಗುಣಾರೆ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಾಗರಬೆಟ್ಟ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.