ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ 1.09

ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಮುರುಗೇಶ ನಿರಾಣಿ
Last Updated 3 ಮೇ 2021, 16:24 IST
ಅಕ್ಷರ ಗಾತ್ರ

ವಿಜಯಪುರ: ‘ಕೋವಿಡ್‌ನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಶೇ 1.09 ರಷ್ಟು ಮಾತ್ರ ಇದ್ದು, ರಾಜ್ಯದಲ್ಲಿ 27ನೇ ಸ್ಥಾನದಲ್ಲಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಳ್ಳಾರಿ, ಚಾಮರಾಜನಗರ, ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಈವರೆಗೆ 19 ಸಾವಿರ ಕೋವಿಡ್ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿ, ಆಸ್ಪತ್ರೆಗಳಿಂದ ಬಿಡುಗಡೆಮಾಡಲಾಗಿದೆ. ಪ್ರತಿ ದಿನ 350 ರಿಂದ 400 ಕೋವಿಡ್ ಸೋಂಕಿತರಾಗುತ್ತಿದ್ದು, ತೀವ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು. ಆಕ್ಸಿಜನ್ ಹಾಗೂ ರೆಮ್ ಡಿಸಿವಿರ್ ಲಸಿಕೆ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಅಧಿಕಾರಿಗಳನ್ನು ನೇಮಿಸಿ ಔಷಧಿಗಳ ಸಮಸ್ಯೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ರೆಮ್ ಡಿಸಿವಿರ್ ಲಸಿಕೆಯ ಕೊರತೆಯಾಗಿಲ್ಲ. ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಮಾತ್ರ ಈ ಲಸಿಕೆ ಪಡೆಯುವಂತೆ ಕೋವಿಡ್ ಸೋಂಕಿತರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನಿವಾರಣೆಗೆ ಅವಶ್ಯಕ ಕ್ರಮಕೈಗೊಳ್ಳಲಾಗುತ್ತಿದೆ. ಆಮ್ಲಜನಕ ಅಧಿಕ ಪ್ರಮಾಣದಲ್ಲಿದ್ದರೂ ಖಾಲಿ ಸಿಲಿಂಡರ್‌ಗಳ ಕೊರತೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯವಾಗಿ, ಧಾರವಾಡ ಹಾಗೂ ಬಳ್ಳಾರಿಗಳಿಂದ ಆಮ್ಲಜನಕ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಏಕಕಾಲಕ್ಕೆ ಎರಡು ಸಲಕರಣೆಗಳನ್ನು ಹೊಂದಿರುವ ಆಮ್ಲಜನಕ ಪೂರೈಕೆ ಯಂತ್ರವನ್ನು ಪ್ರತಿ ಜಿಲ್ಲೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಹಾಗೂ ನರ್ಸ್‌ಗಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದು, ಜಿಲ್ಲಾಡಳಿತ ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರೆಮ್‌ಡಿಸಿವಿರ್ ಲಸಿಕೆ ಪ್ರತಿಯೊಬ್ಬ ಕೋವಿಡ್ ಸೋಂಕಿತರಿಗೆ ಹಾಕಿಸಬೇಕು ಎಂಬ ಬೇಡಿಕೆ ಸರಿಯಲ್ಲ. ವೈದ್ಯರ ಸಲಹೆ ಮೇರೆಗೆ ಮಾತ್ರ ಪಡೆಯಬೇಕು. ಗರಿಷ್ಠ ಪ್ರಮಾಣದಲ್ಲಿ ಈ ಲಸಿಕೆ ಪಡೆಯಲು ಪ್ರಯತ್ನಿಸಲಾಗುವುದು. ಪ್ರತಿದಿನ ಜಿಲ್ಲಾಧಿಕಾರಿಗಳ ಮೂಲಕ ಕೋವಿಡ್ ನಿಯಂತ್ರಣ ಕುರಿತು ಮಾಹಿತಿ ಸಹ ಪಡೆಯಲಾಗುತ್ತಿದ್ದು, ವಿವಿಧ ಕೊರತೆಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದಾಗಿ ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ, ಡಾ.ಔದ್ರಾಮ್‌ ಉಪಸ್ಥಿತರಿದ್ದರು.

**

ಸಕ್ಕರೆ ಕಾರ್ಖಾನೆ ಮತ್ತು ಡಿಸ್ಟಿಲರಿ ಮೂಲಕ ಆಮ್ಲಜನಕ ತಯಾರಿಕೆಗೂ ಕೋರಲಾಗಿದೆ. ಮುಧೋಳದಲ್ಲಿ ತಮ್ಮ ಕಾರ್ಖಾನೆಗಳಲ್ಲಿ ಕೂಡ ಮುಂದಿನ ಮೂರು ತಿಂಗಳಲ್ಲಿ ಆಮ್ಲಜನಕ ತಯಾರಿಸುವ ಘಟಕ ಸಹ ಸ್ಥಾಪನೆಯಾಗಲಿದೆ

ಮುರುಗೇಶ ನಿರಾಣಿ

ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT