ವಿಜಯಪುರ: ‘ತಾಲ್ಲೂಕಿನ ಜಂಬಗಿ (ಆ) ಗ್ರಾಮದಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ದಾಳಿಂಬೆ (ಕ್ಯಾರರೋಗ) ದುಂಡಾಣು ಅಂಗ ಮಾರಿ ರೋಗಕ್ಕೆ ತುತ್ತಾಗಿ ಬೆಳೆಹಾನಿ ಆಗಿದೆ. ಇದಕ್ಕೆ ಪರಿಹಾರ ಘೋಷಣೆ ಹಾಗೂ ವಿಮಾ ಹಣ ಮಂಜೂರು ಮಾಡಬೇಕು’ ಎಂದು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
‘ಜಿಲ್ಲೆಯಲ್ಲೇ ಅತೀ ಹೆಚ್ಚು ದಾಳಿಂಬೆ ಬೆಳೆಯುವ ಗ್ರಾಮ ಇದಾಗಿದೆ. ಬೆಳೆ ಬೆಳೆದು 4 ತಿಂಗಳಾಗಿದ್ದು, ಇನ್ನೂ 2 ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಸಂಪೂರ್ಣ ಬೆಳೆ ರೋಗಕ್ಕೆ ತುತ್ತಾಗಿದೆ. ಪ್ರತಿ ರೈತರು ಬೆಳೆಗೆ ಔಷಧ ಮತ್ತು ರಸಗೊಬ್ಬರಕ್ಕಾಗಿ ₹3 ಲಕ್ಷದಿಂದ ₹5 ಲಕ್ಷ ವ್ಯಯ ಮಾಡಿದ್ದಾರೆ. ರೈತರ ಬೆಳೆಹಾನಿಗೆ ಸಂಬಂಧಿಸಿದಂತೆ ಇಲಾಖೆಗೆ ಸೂಕ್ತ ಆದೇಶ ನೀಡಿ ರೈತರಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
‘ರೈತರು ಬೆಳೆಯ ವಿಮಾ ಕಂತು ತುಂಬಿದ್ದಾರೆ. ಸಂಬಂಧಪಟ್ಟ ವಿಮೆ ಕಂಪನಿಗೆ ಸೂಕ್ತ ನಿರ್ದೇಶನ ನೀಡಿ ವಿಮಾ ಹಣ ಬರುವಂತೆ ಕ್ರಮ ಜರುಗಿಸಬೇಕು. ದಾಳಿಂಬೆ ಬೆಳೆಗೆ ಪರಿಹಾರ ನೀಡದೇ ಹೋದರೆ ರೈತರು ಧರಣಿ ಮಾಡಲಿದ್ದೇವೆ’ ಎಂದರು.