ಬುಧವಾರ, ಮೇ 12, 2021
27 °C

ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಡಿಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ಭರ್ತಿಗೆ ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಸೂಚನೆ ನೀಡಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಕುರಿತು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ಬಹು ಹಳ್ಳಿಗಳಿಗೆ ಅನುಕೂಲವಾಗುವ ಅರೇಶಂಕರ ಕೆರೆಯನ್ನು ಬರುವ ಮೇ 25 ರಿಂದ ಭರ್ತಿ ಮಾಡುವ ಕುರಿತಂತೆ ಪ್ರಾದೇಶಿಕ ಆಯುಕ್ತರನ್ನು ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು. ಅರೇಶಂಕರ ಕೆರೆ ನೀರು ಪೋಲಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗಾಗಿ ನಾರಾಯಣಪುರ ಹಿನ್ನೀರಿನ ಅವಶ್ಯಕತೆಯಿದ್ದು, ನೀರಿನ ನಿರ್ವಹಣೆಗಾಗಿ ಆಲಮಟ್ಟಿಯಿಂದ ನೀರು ಬಿಡುಗಡೆ ಮಾಡುವಂತೆಯೂ ಕೋರಲು ನಿರ್ಧರಿಸಲಾಯಿತು.

ಮುಂಬರುವ ದಿನಗಳಲ್ಲಿ ಭೀಮಾನದಿಯಲ್ಲಿ ನೀರು ಕಡಿಮೆಯಾದಲ್ಲಿ ಮಹಾರಾಷ್ಟ್ರದ ಮೂಲಕ ಸೊಲ್ಲಾಪುರ ಹಾಗೂ ಅಕ್ಕಲಕೋಟಗಳಿಗೆ ನೀರು ಬಿಡುಗಡೆಯಾದಲ್ಲಿ ಆ ನೀರು ಬಳಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸೂಚನೆ ನೀಡಿದರು.

ಮುಂಬರುವ ದಿನಗಳಲ್ಲಿ ನಗರ, ಹಳ್ಳಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಆದ್ಯತೆ ನೀಡಬೇಕು. ಉಪವಿಭಾಗಾಧಿಕಾರಿಗಳ ಅನುಮೋದನೆ ಮೇಲೆ  ಟ್ಯಾಂಕರ್ ಮೂಲಕ ನೀರು ಸರಬರಾಜುಗೆ ಕ್ರಮ ಕೈಗೊಳ್ಳಬೇಕು ಎಂದರು.

ಬಾಡಿಗೆ ಆಧಾರಿತ ಕೊಳವೆಬಾವಿಗಳಿಗೆ ನಿಗದಿತ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ, ಬಲರಾಮ ಲಮಾಣಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.