ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಒಡೆವ ಕೆಲಸದ ಪರಿಣಾಮ ಕಾಂಗ್ರೆಸ್‌ಗೆ ಸೋಲು

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆರೋಪ
Last Updated 23 ಆಗಸ್ಟ್ 2021, 14:36 IST
ಅಕ್ಷರ ಗಾತ್ರ

ವಿಜಯಪುರ: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ ಆಡಳಿತ ಇತಿಹಾಸ ನಿರ್ಮಾಣವಾಗುವಂತಿತ್ತು. ಆದರೆ, ಧರ್ಮ ಒಡೆಯುವ ಕೆಲಸಕ್ಕೆ ಎಂ.ಬಿ.ಪಾಟೀಲ ಅಂಥವರು ಕೈಹಾಕಿದ ಪರಿಣಾಮ 25ರಿಂದ 30 ಹಾಲಿ ಶಾಸಕರು ಸೋಲಬೇಕಾಯಿತು. ಕಾಂಗ್ರೆಸ್‌ ಸರ್ಕಾರ ರಚನೆಗೆ ಹಿನ್ನೆಡೆಯಾಯಿತು’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಪಾದಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮದೇ ಪಕ್ಷದ ಶಾಸಕ ಎಂ.ಬಿ.ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಸಿದ್ದರಾಮಯ್ಯ ಅವಧಿಯಲ್ಲಿ ಜಿಲ್ಲೆಯಿಂದ ಮಂತ್ರಿಯಾಗುವ ಅವಕಾಶ ಅನೇಕರಿಗೆ ಇತ್ತು. ಆದರೆ, ಮುಖ್ಯಮಂತ್ರಿ ಅವರ ಸಲಹೆ ಮೇರೆಗೆ ನಿಮ್ಮನ್ನು ಸಚಿವರನ್ನಾಗಿ ಮಾಡಲು ಒಪ್ಪಿದೆವು. ನಾವು ಮಾಡಿರುವ ಸಹಕಾರದ ಅರಿವು ನಿಮಗಿರಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದೀರಿ. ವಿಜಯಪುರ ನಗರ ಕ್ಷೇತ್ರ ಒಳಗೊಂಡು ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಯಾರಾರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದೀರಿ ಎಂಬುದನ್ನುಬಿಚ್ಚಿಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಬೇರೆಯವರ ಕ್ಷೇತ್ರಗಳಲ್ಲಿ ಕೈ ಹಾಕುವ ಕೆಲಸ ನೀವು ಮುಂದುವರಿದರೆ ಬಿಎಲ್‌ಡಿಇ ಇತಿಹಾಸ ಕೆಣಕಬೇಕಾಗುತ್ತದೆ. ಬಂಥನಾಳ ಸಂಗನಬಸವ ಮಹಾಸ್ವಾಮಿಗಳು ಕಂಡ ಕನಸುಗಳಿಗೆ ವಿರುದ್ಧವಾಗಿ ನಿಮ್ಮ ವೈಯಕ್ತಿಕ ಆಸ್ತಿಯನ್ನಾಗಿ ಮಾಡಿಕೊಂಡಿದ್ದೀರಿ.ಜಾತ್ಯತೀತ ಚಳವಳಿಗೆ ವಿರುದ್ಧವಾಗಿ, ನಿಮ್ಮ ರಾಜಕಾರಣದ ಅನುಕೂಲಕ್ಕೆ ತಕ್ಕಂತೆ ಸಂಸ್ಥೆಯ ಹೆಸರನ್ನು ಬದಲಾಯಿಸಿಕೊಂಡಿದ್ದೀರಿ’ ಎಂದು ಆರೋಪಿಸಿದರು.

‘ನೀರಾವರಿ ಸಚಿವರಾಗಿದ್ದಾಗಒಂದು ರೂಪಾಯಿಯಷ್ಟೂ ಆರ್ ಅಂಡ್ ಆರ್ ಕೆಲಸ ಮಾಡಲಿಲ್ಲ. ಅದರಿಂದ ನಿಮಗೆ ಏನೂ ಬರುತ್ತಿರಲಿಲ್ಲ. ನಿಮ್ಮ ಅನುಕೂಲ, ಗುತ್ತಿಗೆದಾರರ ಅನುಕೂಲಕ್ಕಾಗಿ ಬೇಕಾದ ಕೆಲಸ ಮಾಡಿದ್ದೀರಿ’ ಎಂದು ಆರೋಪಿಸಿದರು.

‘ಅವಳಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನವಾಗಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಾಧನೆಯೇ ಹೊರತು, ನಿಮ್ಮ ವೈಯಕ್ತಿಕ ಸಾಧನೆಯಲ್ಲ’ ಎಂದರು.

‘ಸಕ್ಕರೆ ಕಾರ್ಖಾನೆ ಆರಂಭಿಸಲು ನನಗೆ ಅಸಹಕಾರ ಮಾಡಿದಿರಿ. 2008, 2013 ಮತ್ತು 2018ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ನೀವು ಯಾರಿಗೆ ಸಹಾಯ ಮಾಡಿದ್ದೀರಿ ಎಂಬುದು ತಿಳಿದಿದೆ. 2023ರಲ್ಲಿ ಇದೇ ರೀತಿ ಮಾಡಿದರೂ ಎದುರಿಸುವ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ನಿಮಗೆ ಏನು ಮಾಡುತ್ತೇನೆ ಎಂಬುದನ್ನು 2023ರಲ್ಲಿ ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.

‘ನನ್ನ ಕ್ಷೇತ್ರಕ್ಕೆ, ಜನರಿಗೆ ಏನು ಮಾಡಬೇಕು ಎಂಬ ಸೂಕ್ಷ್ಮ ಅರವಿವು ನನಗಿದೆ. ನಿಮ್ಮಿಂದ ಕೇಳಿ ಕಲಿಯುವ ಅವಶ್ಯಕತೆ ಇಲ್ಲ’ ಎಂದರು.

‘ನಿಮ್ಮಿಂದ ಬಹಳ ಜನ ಮನಸ್ಸು ನೋಯಿಸಿಕೊಂಡಿದ್ದಾರೆ. ಆ ನೊಂದ ಎಲ್ಲ ಮನಸುಗಳ ಪರವಾಗಿ ನಿಮ್ಮ ವಿರುದ್ಧ ಹೋರಾಟಕ್ಕೆ ಬರುತ್ತೇನೆ. ಇದಕ್ಕೊಂದು ತಾತ್ವಿಕ ಅಂತ್ಯ ಸಿಗುವವರೆಗೂ ಬಿಡುವುದಿಲ್ಲ’ ಎಂದರು

‘ಹೊರ್ತಿ ಗ್ರಾಮದ ರೈತ ಮುಖಂಡರು ನಡೆಸಿದ ಹೋರಾಟದ ಫಲವಾಗಿ ಕೆರೆಗಳನ್ನು ತುಂಬಿಸುವ ಯೋಜನೆ ಪ್ರಾರಂಭವಾಯಿತೇ ಹೊರತು ನಿಮ್ಮಿಂದಲ್ಲ. ಕೆರೆ ತುಂಬುವ ಯೋಜನೆ ನಿಮ್ಮ ಕನಸಿನ ಕೂಸಲ್ಲ. ಕನಸಿನಲ್ಲಿ ಕೂಸು ಹುಟ್ಟಲ್ಲ. ಅದಕ್ಕೂ ಪರಿಶ್ರಮ ಪಡಬೇಕು. 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಯಾರ್ಯಾರು ಪ್ರಯತ್ನ ಮಾಡಿದ್ದೇವೆ ಎಂಬುದನ್ನು ಆತ್ಮ ಮುಟ್ಟಿ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಚಡಚಣ ಕ್ಷೇತ್ರದ 124 ಹಳ್ಳಿಗಳಲ್ಲಿ 59 ಹಳ್ಳಿಗಳಿಗೆ ನೀರು ಮಾತ್ರ ಸಿಕ್ಕಿದೆ. ಸಮಗ್ರ ನೀರಾವರಿ ಎಲ್ಲಿ ಆಗಿದೆ. ಅಲ್ಲದೇ, ನೀರಾವರಿ ಕ್ಷೇತ್ರ ಹೆಚ್ಚಿಳವಾಗಲು ಕೇವಲ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಅಲ್ಲ, ಅಂತರ್ಜಲ ಹೆಚ್ಚಳವಾಗಲು ನಿಸರ್ಗದ ಪಾತ್ರವೂ ಇದೆ. 59 ವರ್ಷಗಳ ಬಳಿಕ ವಿಜಯಪುರದಲ್ಲಿ ಹೆಚ್ಚು ಮಳೆಯಾಗಿದೆ. ಆದರೆ, ನೀವು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ’ ಎಂದು ಆರೋಪಿಸಿದರು.

***

ಕೋವಿಡ್‌ ಸಾವು: ₹5 ಲಕ್ಷ ಪರಿಹಾರಕ್ಕೆ ಮನವಿ

ವಿಜಯಪುರ:ಕೋವಿಡ್‌ನಿಂದ ಸಾವಿಗೀಡಾದ ಬಿಪಿಎಲ್‌ ಕುಟುಂಬದವರಿಗೆ ಸರ್ಕಾರ ತಲಾ ₹ 5 ಲಕ್ಷ ಪರಿಹಾರ ನೀಡಬೇಕುಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿರುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

ಆಲಮಟ್ಟಿಯಲ್ಲಿ ನಡೆದ ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಕೋವಿಡ್‌ ಎರಡನೇ ಅಲೆಯಲ್ಲಿ ಸಾವಿಗೀಡಾದವರ ಸಂಖ್ಯೆಗೂ ಸರ್ಕಾರ ನೀಡುವ ಅಂಕಿ–ಅಂಶಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಸಾವಿನ ನಿಖರತೆ ತಿಳಿಯಲು ಡೆತ್‌ ಆಡಿಟ್‌ ಆಗಬೇಕುಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಕೃಷ್ಣಾ, ಭೀಮಾ ನದಿಗಳ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದ ವರ್ಷ ಪ್ರವಾಹ, ಹಾನಿ ಉಂಟಾಗುವುದು ಸಹಜವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸುವ ಜೊತೆಗೆ ಯುಕೆಪಿ ಮೂರನೇ ಹಂತವನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸುವ ಬಗ್ಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಹಾಗೂ ಮುಳುಗಡೆ ಬಾಧಿತರ ಪುನರ್ವಸತಿ, ಪುನರ್‌ ನಿರ್ಮಾಣ, ಭೂಸ್ವಾಧೀನಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿರುವುದಾಗಿ ತಿಳಿಸಿದರು.

***

ಇಂದು ಊದಿರುವ ರಣಕಹಳೆ ಚುನಾವಣೆ ಮುಗಿಯುವವರೆಗೂ ನಿಮಗೆ, ನಮಗೆ ನಡೆಯಲಿದೆ. ಜಿಲ್ಲೆಯ ಜನ ತೀರ್ಮಾನಿಸಲಿ
–ಯಶವಂತರಾಯಗೌಡ ಪಾಟೀಲ, ಶಾಸಕ ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT