ಬುಧವಾರ, ಜುಲೈ 6, 2022
23 °C

ವಿಜಯಪುರ: ಠೇವಣಿ ವಂಚಿತ ಗ್ರಾಹಕರಿಗೆ ಹಣ ಮರುಪಾವತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಎಸ್.ಎಂ.ಎನ್. ಕ್ರೆಡಿಟ್ ಸೌಹಾರ್ದದಲ್ಲಿ ಠೇವಣಿ ಇಟ್ಟು ವಂಚನೆಗೊಳಗಾದ ಖಾತೆದಾರರಿಗೆ ಅವರ ಹಣ ಜಮಾ ಮಾಡಲು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೆಡಿಟ್‌ ಸೌಹಾರ್ದದಲ್ಲಿ ಗ್ರಾಹಕರು ತೊಡಗಿಸಿದ ₹ 30 ಕೋಟಿ ಹಣವನ್ನು ಅವಧಿ ಮುಗಿದರೂ ಮರು ಪಾವತಿಸದೇ ಸೌಹಾರ್ದದ ಅಧ್ಯಕ್ಷರು, ಉಪಾಧ್ಯಕ್ಷರು ದುರುಪಯೋಗ ಪಡಿಸಿಕೊಂಡು, ವಂಚನೆ ಮಾಡಿದ್ದರು ಎಂದು ಹೇಳಿದರು.

ಈ ಸಂಬಂಧ ನೊಂದ ಗ್ರಾಹಕರು ಧರಣಿ ಸತ್ಯಾಗ್ರಹ ನಡೆಸಿದ ಪ್ರತಿಫಲವಾಗಿ ಸರ್ಕಾರ ವಿಜಯಪುರ ಉಪ ವಿಭಾಗಾಧಿಕಾರಿ ಅವರಿಗೆ ಸಕ್ಷಮ ಪ್ರಾಧಿಕಾರ ಎಂದು ನೇಮಕಮಾಡಿ ಆದೇಶ ಹೊರಡಿಸಿತ್ತು. ಈಗಾಗಲೇ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ವಂಚನೆ ಮಾಡಿದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ನಿರ್ದೇಶಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿ ವಂಚಿತ ಗ್ರಾಹಕರಿಗೆ ಹಣ ಹಿಂದುರುಗಿಸಲು ಆದೇಶ ನೀಡಿದೆ. ಈಗ ಸಕ್ಷಮ ಪ್ರಾಧಿಕಾರಿಯಾದ ಉಪ ವಿಭಾಗಾಧಿಕಾರಿ ಅವರು ಬ್ಯಾಂಕ್ ಖಾತೆ ತೆಗೆದಿದ್ದಾರೆ ಎಂದರು.

ಪ್ರಕರಣದಲ್ಲಿ ಸಚಿವ ಮುರುಗೇಶ ನಿರಾಣಿ ಅವರ ಪಾತ್ರವು ಇದೆ. ಆದ್ದರಿಂದ ವಂಚನೆಗೊಳಗಾದ ಎಸ್.ಎಂ.ಎನ್. ಗ್ರಾಹಕರಿಗೆ ಶೀಘ್ರದಲ್ಲಿ ನ್ಯಾಯ ದೊರಕಿಸಿಕೊಡಲು ಡಿ.13 ರಂದು ನಡೆಯಲಿರುವ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಗ್ರಾಹಕರಿಗೆ ಹಣ ಮರಳಿ ಪಾವತಿಸುವಂತಾಬೇಕು ಎಂದು ಆಗ್ರಹಿಸಿದರು.

ಈ ವಿಷಯದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಅಧಿವೇಶನದಲ್ಲಿ ಚರ್ಚಿಸಿ ಶೀಘ್ರದಲ್ಲಿ ಗ್ರಾಹಕರಿಗೆ ಮರಳಿ ಹಣ ಕೊಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಹಾರ್ದ ಸಂಯುಕ್ತ ಸಹಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೊಂದ ಗ್ರಾಹಕರ ಪರವಾಗಿ ಸಹಕಾರ ಮಹಾಮಂಡಳ ಕೆಲಸ ಮಾಡದಿದ್ದರೆ ಸಂಯುಕ್ತ ಸಹಕಾರ ಮಂಡಳವನ್ನೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸಚಿವ ನಿರಾಣಿ ಅವರ ಮನೆ ಮುಂದೆ ಮತ್ತು ಬೆಳಗಾವಿ ಸುವರ್ಣಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕುಲಕರ್ಣಿ ಎಚ್ಚರಿಕೆ ನೀಡಿದರು.

ಹೋರಾಟ ಸಮಿತಿ ಪ್ರಮುಖರಾದ ಎನ್.ಕೆ. ಮನಗೊಂಡ, ಡಾ. ರವಿ ಕಲ್ಲೂರ, ಐ.ಬಿ.ಸಾರವಾಡ, ಎಸ್.ಜಿ.ಸಂಗೊದಿಮಠ, ಕುಷಾಲ ಸಿಂಗ್ ನರಗುಂದ, ಬಸವರಾಜ ಅವಟಿ, ರಾಜು ಕ್ಷೀರಸಾಗರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು