ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹ

‘ಭಾರತ್‌ ಬಂದ್’ ಬೆಂಬಲಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ 
Last Updated 26 ಮಾರ್ಚ್ 2021, 14:26 IST
ಅಕ್ಷರ ಗಾತ್ರ

ವಿಜಯಪುರ:ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಶುಕ್ರವಾರ ಕರೆ ನೀಡಲಾಗಿದ್ದ ‘ಭಾರತ್‌ ಬಂದ್‌ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿನಡೆದ ಪ್ರತಿಭಟನೆಯಲ್ಲಿರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ, ಅಲ್ಪಸಂಖ್ಯಾತ, ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ದೆಹಲಿಯಲ್ಲಿ ಹೋರಾಟ ನಿರತ ರೈತರೊಂದಿಗೆ ನಾವಿದ್ದೇವೆ, ರೈತ ವಿರೋಧಿ ಕರಾಳ ಕೃಷಿ ಕಾಯ್ದೆ ರದ್ದಾಗಲಿ, ಜನ ವಿರೋಧಿ, ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಬಂಡವಾಳಶಾಹಿ ಸೇವೆ ಮಾಡುವ ಸರ್ಕಾರಕ್ಕೆ ಧಿಕ್ಕಾರ, ರೈತರಹೋರಾಟಕ್ಕೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಕೂಗಿದರು.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕುತ್ತಿರುವ ಮತ್ತು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.

ದೇಶದ ಪ್ರತಿಯೊಬ್ಬ ಅನ್ನ ತಿನ್ನುವ ಪ್ರಜೆ ರೈತ ಹೋರಾಟವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ಕೀಳಾಗಿ ಮಾತನಾಡುವ ಪಕ್ಷಗಳಿಗೆ ಹಾಗೂ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಪಂಜಾಬ್‌, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಂದ ಲಕ್ಷಾಂತರ ರೈತರು, ಮಹಿಳೆಯರು ತಮ್ಮ ಮಕ್ಕಳೊಂದಿಗೆ ದೆಹಲಿಯಲ್ಲಿ ನಾಲ್ಕು ತಿಂಗಳಿಂದ ಕೊರೆಯುವ ಚಳಿಯಲ್ಲಿ, ಸುಡುವ ಬಿಸಿಲಿನಲ್ಲಿ ಪ್ರತಿಭಟನೆ ಮಾಡುತ್ತಿರುವುದು ಇಡೀ ದೇಶದ ರೈತರಿಗೆ ಆದರ್ಶ ಮತ್ತು ಸ್ಫೂರ್ತಿಯ ಹೋರಾಟವಾಗಿದೆ. ರೈತರ ಬೇಡಿಕೆ ಈಡೇರಿಸುವವರೆಗೂ ಧಣಿವರಿಯದ ಹೋರಾಟಕ್ಕೆ ಸಜ್ಜಾಗುತ್ತಾರೆ ಎಂದು ಹೇಳಿದರು.

ಅಗತ್ಯ ಸರಕುಗಳ ಕಾಯ್ದೆ 1955ರ ತಿದ್ದುಪಡಿ ಕೈಬಿಡಬೇಕು, ರೈತರ ಉತ್ಪನ್ನದ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ)ಸುಗ್ರೀವಾಜ್ಞೆ 2020ನ್ನು ಕೈಬಿಡಬೇಕು, ಬೆಲೆಗಳು ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದ (ಸಬಲೀಕರಣ ಮತ್ತು ರಕ್ಷಣೆ) ಸುಗ್ರೀವಾಜ್ಞೆ 2020 ಕೈಬಿಡಬೇಕು, ಭೂಸುಧಾರಣಾ ಕಾನೂನುಗಳನ್ನು ಸಂಪೂರ್ಣ ನಾಶ ಮಾಡಲು ಹೊರಟಿವ ಕರ್ನಾಟಕ ಭೂಸುಧಾರಣಾ ಕಾಯ್ದೆ-1961ಕ್ಕೆ ತಿದ್ದುಪಡಿಯನ್ನು ಕೈಬಿಡಬೇಕು, ಬೀಜೋದ್ದಿಮೆಯನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ಬೀಜ ಕಾಯ್ದೆ-2019 ತಿದ್ದುಪಡಿ ರದ್ದುಗೊಳಿಸಬೇಕು, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು, ವಿದ್ಯುತ್ ಕಾಯ್ದೆ-2003ಕ್ಕೆ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಭೀಮಶಿ ಕಲಾದಗಿ, ಚಂದ್ರಗೌಡ ಪಾಟೀಲ, ಭಿ. ಭಗವಾನ್ ರೆಡ್ಡಿ, ಅಕ್ರಂ ಮಾಶ್ಯಾಳಕರ, ಶ್ರೀನಾಥ ಪೂಜಾರಿ, ರಿಜ್ವಾನ್ ಮುಲ್ಲಾ, ನಿರ್ಮಲಾ ಹೊಸಮನಿ, ಸುರೇಖಾ ರಜಪೂತ, ಅಪ್ಪಾಸಾಬ್‌ ಯರನಾಳ, ಬಾಳು ಜೇವೂರ, ಅಣ್ಣಾರಾಯ ಈಳಗೇರ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ, ಮಲ್ಲಿಕಾರ್ಜುನ್ ಎಚ್.ಟಿ, ಇರ್ಪಾನ್ ಶೇಖ್, ಕಾವೇರಿ ರಜಪೂತ, ದೀಪಾ, ದಸ್ತಗೀರ ಉಕ್ಕಲಿ, ಸದಾನಂದ ಮೋದಿ, ರಾಕೇಶ್, ಅಕ್ಷಯ್, ಸುಜಾತಾ ಶಿಂಧೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT