ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ: ಬಿ.ಎಸ್.ಯಡಿಯೂರಪ್ಪ ಭರವಸೆ

ಮೊರಟಗಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ
Last Updated 20 ಅಕ್ಟೋಬರ್ 2021, 17:03 IST
ಅಕ್ಷರ ಗಾತ್ರ

ವಿಜಯಪುರ: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಿಂದಗಿಯನ್ನು ಮಾದರಿ ಕ್ಷೇತ್ರ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಂದಗಿ ತಾಲ್ಲೂಕಿನ ಮೊರಟಗಿಯಲ್ಲಿ ಬುಧವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿಂದಗಿ, ಹಾನಗಲ್‌ ಮಹತ್ತರವಾದ ಉಪ ಚುನಾವಣೆ. ಬಹುದೊಡ್ಡ ಅಂತರದಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ನನಗೆ ಗೌರವ ತರುವ ಕೆಲಸ ಮಾಡಬೇಕು ಎಂದು ಮತದಾರರಲ್ಲಿ ವಿನಂತಿಸಿದರು.

ಹಣ, ಹೆಂಡ, ಅಧಿಕಾರ ಬಲದಿಂದ, ಜಾತಿ ವಿಷ ಬೀಜ ಬಿತ್ತಿ ಕಾಂಗ್ರೆಸ್‌ನವರು ಈ ಹಿಂದೆ ಚುನಾವಣೆ ಗೆದ್ದುಕೊಂಡು ಬಂದಿದ್ದಾರೆ. ಆದರೆ, ಈಗ ಅದು ನಡೆಯುವುದಿಲ್ಲ ಎಂದರು.

ಮುಂದಿನ ಎರಡು–ಮೂರು ವರ್ಷಗಳ ಒಳಗಾಗಿ ರಾಜ್ಯದ ಎಲ್ಲ ಬಡವರಿಗೆ ನಿವೇಶನ ಕೊಟ್ಟು, ಮನೆ‌ಕಟ್ಟಿಸಿಕೊಡಲು ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗಎಲ್ಲ ವರ್ಗದವರಿಗೆ ಸ್ಪಂದಿಸುವ ಕೆಲಸ‌ ಮಾಡಿದ್ದೇನೆ. ಕೋವಿಡ್‌ ನಿಂದ ಸಾವಿಗೀಡಾದವರಿಗೆ ₹1 ಲಕ್ಷ ಪರಿಹಾರ ನೀಡುತ್ತಿದೆ ನಮ್ಮ ಸರ್ಕಾರ‌. ಕ್ಷೌರಿಕರಿಗೆ, ಚಾಲಕರಿಗೆ ತರಕಾರಿ ಬೆಳೆಗಾರರಿಗೆ, ಸಮಾಜದ ಎಲ್ಲ ವರ್ಗದದ ಜನರಿಗೆ ಆರ್ಥಿಕ ಸಹಾಯ ಮಾಡಿದ್ದೇವೆ ಎಂದರು.

ಮುಸ್ಲಿಮರಿಗೆ ಮೋಸ ಮಾಡಿ, ಹಿಂದುಗಳಿಗೆ ಕೊಡುವ ಕೆಲಸ ಮಾಡಿಲ್ಲ. ಹಿಂದೂ-ಮುಸ್ಲಿಂ ಬೇಧಬಾವ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಸರ್ಕಾರಿ ಯೋಜನೆಗಳು ಈ ಮೊದಲು ಅರ್ಹ ಫಲಾನುಭವಿಗಲಿಗೆ ಲಭಿಸುತ್ತಿರಲಿಲ್ಲ. ಆದರೆ, ಮೋದಿ ಅವರು ಪ್ರಧಾನಿಯಾದ ಬಳಿಕ ಸರ್ಕಾರಿ ಸೌಲಭ್ಯ ಮನೆಬಾಗಿಲಗೆ ತಲುಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದರೆ ಸರ್ಕಾರಕ್ಕೆ ಮತ ಹಾಕಿದಂತೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ, ಯಡಿಯೂರಪ್ಪ ಕೈ ಬಲ ಪಡಿಸಿದಂತೆ ಆಗಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಸರ್ಕಾರದ ಭಾಗ ಆಗಲಿದ್ದಾರೆ. ಅಭಿವೃದ್ಧಿ ಆಗಲಿದೆ. ನಿಮ್ಮ ಮತ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದರು.

ದೇಶದ ಸಂವಿಧಾನ ರಕ್ಷಣೆ ಮಾಡುವುದು ಕಾಂಗ್ರೆಸ್ ಮಾತ್ರ ಎಂದು ಖರ್ಗೆ ಹೇಳಿದ್ದಾರೆ. ಆದರೆ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸಿದ್ದು ಏಕೆ? ದೆಹಲಿಯಲ್ಲಿ ಅವರ ಸಮಾಧಿಗೆ ಜಾಗ ಕೊಡಲಿಲ್ಲ ಏಕೆ ? ಭಾರತ ರತ್ನ ಏಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು.‌

ಕಾಂಗ್ರೆಸ್ ಆಡಳಿತ ದೇಶಕ್ಕೆ ವರ ಆಗಿಲ್ಲ, ಶಾಪ ಆಗಿತ್ತು. ಅವರ ಆಡಳಿತಾವಧಿಯಲ್ಲಿ ಊರು, ಕೇರಿಯಲ್ಲಿ ಕಾಂಗ್ರೆಸ್ ಏಜೆಂಟ್‌ರನ್ನು ಸೃಷ್ಟಿಸಿದ್ದರು. ಸರ್ಕಾರದ ಯೋಜನೆ ಪಡೆಯಬೇಕು ಎಂದರೆ ಅವರನ್ನು ಕರೆದುಕೊಂಡು ಹೋಗಬೇಕಿತ್ತು. ಆದರೆ, ಮೋದಿ ಅವರು ಫಲಾನುಭವಿಗಳಅಕೌಂಟ್‌ಗೆ ನೇರವಾಗಿ ಹಣ ಹೋಗುವಂತೆ ಮಾಡಿದ್ದಾರೆ. ಯಾರಿಗೂ ಲಂಚ ಕೊಡುವ ಅಗತ್ಯವಿಲ್ಲ. ಭ್ರಷ್ಟಾಚಾರ ನಿಲ್ಲಿಸಿದ್ದಾರೆ. ಮೋದಿ ಅವರಿಂದ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಉಚಿತ ಅಕ್ಕಿ ನೀಡಿದ್ದು ಕೇಂದ್ರದ್ದೇ ಹೊರತು ಸಿದ್ದರಾಮಯ್ಯ ಅವರದಲ್ಲ. ಅವರದ್ದು ಕೇವಲ ಚೀಲ ಮಾತ್ರ ಎಂದರು.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶರಣಪ್ಪ ಸಲಗರ, ಎಸ್.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕುಚಬಾಳ, ಕರ್ನಾಟಕ ರಾಜ್ಯ ಬೀಜ ಮತ್ತು ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ, ವಿಧಾನ ಪರಿಷತ್‌ ಮಾಜಿ ಸದಸ್ಯ ನ್ಯಾಮಗೌಡ, ಈರಣ್ಣ ರಾವೂರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT