ಶನಿವಾರ, ಅಕ್ಟೋಬರ್ 23, 2021
22 °C
ಬೆಳೆ ಬದಲಾವಣೆಗೆ ಕೃಷಿ ಅಧಿಕಾರಿಗಳು, ವಿಜ್ಞಾನಿಗಳ ಸಲಹೆ 

ತೊಗರಿಗೆ ‘ಗೊಡ್ಡು’, ಈರುಳ್ಳಿಗೆ ‘ತಿರುಗುಣಿ’ ಭೀತಿ: ಬೆಳೆ ಬದಲಾವಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡಿರುವ ತೊಗರಿ, ಕಬ್ಬು, ಹತ್ತಿ, ಉಳ್ಳಾಗಡ್ಡಿ, ಶೇಂಗಾ, ಸಜ್ಜಿ, ಮೆಕ್ಕೆಜೋಳ, ಸೂರ್ಯಕಾಂತಿ ಮುಂತಾದ ಬೆಳೆಗಳಿಗೆ ವಿವಿಧ ರೋಗಗಳು ಅಂಟಿಕೊಂಡಿದ್ದು, ರೈತರು ಅವುಗಳ ಹತೋಟಿಗಾಗಿ ಹರಸಾಹಸ ಪಡುತ್ತಿದ್ದಾರೆ.

ಕಬ್ಬು ಮತ್ತು ತೊಗರಿ ಬೆಳೆಗೆ ಗೊಣ್ಣೆ ಕೀಟಗಳ ಕಾಟ ಹೆಚ್ಚಾಗಿದೆ. ಗೊಣ್ಣೆ ಕೀಟಗಳು ನೆಲದೊಳಗೆ ಇದ್ದು ಬೆಳೆಗಳ ಬೇರು ತಿನ್ನುತ್ತಿವೆ. ಇದರಿಂದ ಬೆಳೆಗಳು ಒಣಗಿಹೋಗುತ್ತಿವೆ. ಉಳ್ಳಾಗಡ್ಡಿಗೆ ತಿರುಗುಣಿ(ಮುರುಟು) ರೋಗ ಅಂಟಿಕೊಂಡಿದೆ. ಮೆಕ್ಕೆಜೋಳ ಬೆಳೆಗೆ ಎಲೆಗಳನ್ನು ತೂತು ಹಾಕುವ ಕೀಟಗಳು ಬಾಧಿಸುತ್ತಿವೆ. ಇವೆಲ್ಲ ರೋಗಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಪರೀಕ್ಷಿಸಿ ಔಷಧ ಸಿಂಪರಣೆಗೆ ಸೂಚನೆ ನೀಡುತ್ತಿದ್ದಾರೆ. ಆದರೆ, ರೋಗ ಮಾತ್ರ ಹತೋಟಿಗೆ ಬರುತ್ತಿಲ್ಲ.

ಗೊಣ್ಣೆ ಕೀಟಗಳನ್ನು ಹತೋಟಿಗೆ ತರಬೇಕೆಂದರೆ ಬೆಳೆಗಳಿಗೆ ಹೆಚ್ಚು ನೀರು ಹಾಯಿಸಬೇಕೆಂದು ರೈತರು ಹೇಳುತ್ತಿದ್ದು, ಹೆಚ್ಚಿನ ನೀರು ಹಾಯಿಸಲು ವಿದ್ಯುತ್ ಕೊರತೆಯಾಗುತ್ತಿದೆ. ಆದರೂ ರೈತರು ಹಗಲು ರಾತ್ರಿ ಎನ್ನದೇ ಬೆಳೆಗಳ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. 

ಜಿಲ್ಲೆಯ ‘ಈರುಳ್ಳಿ ಕಣಜ’ ಎಂದೇ ಕರೆಸಿಕೊಳ್ಳುವ ಕೊಲ್ಹಾರ ಭಾಗದ ಈರುಳ್ಳಿ ಬೆಳೆಗಳಿಗೆ ಮಳೆಗಾಲದಲ್ಲಿ ಅಂಟಿಕೊಳ್ಳುವ ‘ಹಳದಿ’ ರೋಗ ಹಾಗೂ ಇತರೆ ರೋಗಗಳಿಂದ ಬೆಳೆಗಳು ಹಾಳಾಗುತ್ತಿದ್ದು, ರೈತರ ನಿದ್ದೆಗೆಡಿಸಿದೆ. ರೈತರು ಈರುಳ್ಳಿ ಬೆಳೆಗೆ ಎಷ್ಟೇ ಔಷಧೋಪಚಾರ ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಲ್ಲದೇ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಸಹ ಸಿಗುತ್ತಿಲ್ಲ.

‘ಈರುಳ್ಳಿ ಬೆಳೆಗಳಿಗೆ ಅಂಟಿಕೊಂಡಿರುವ ಹಳದಿ ರೋಗದ ಕುರಿತು ರೈತರು ನಮಗೆ ಕರೆ ಮಾಡಿ ಸಲಹೆ ಪಡೆಯುತ್ತಿದ್ದಾರೆ. ನಾವು ಕೃಷಿ ವಿಜ್ಞಾನಿಗಳು ಸೇರಿ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರೀಕ್ಷಿಸಿ ಸೂಕ್ತ ಔಷದೋಪಚಾರ ಹಾಗೂ ರೋಗ ನಿಯಂತ್ರಣದ ಕುರಿತು ಸಲಹೆ ನೀಡುತ್ತಿದ್ದೇವೆ. ಮಳೆಗಾಲದಲ್ಲಿ ತೇವ ಹೆಚ್ಚಾಗಿರುವ ಕಾರಣ ಈರುಳ್ಳಿಗೆ ಕಾಣಿಸಿಕೊಳ್ಳುವ ಹಳದಿ ರೋಗಕ್ಕೆ ವಾತಾವರಣ ಪೂರಕವಾಗಿರುತ್ತದೆ. ಹಾಗಾಗಿ ರೋಗ ನಿಯಂತ್ರಣ ಕಷ್ಟಸಾಧ್ಯ ಎನ್ನುತ್ತಾರೆ ಕೊಲ್ಹಾರದ  ಹಿರಿಯ ತೋಟಗಾರಿಕಾ ಅಧಿಕಾರಿ ಸಿ.ಬಿ.ಪಾಟೀಲ.

ಹಿಂಗಾರಿನಲ್ಲಿ ರೈತರು ಈರುಳ್ಳಿಯನ್ನು ಅಗಿ ಹಾಕಿ ನಾಟಿ ಮಾಡಿದರೆ ಸೂಕ್ತ. ಸಸಿ ಹಾಗೂ ಮಡಿ ಹಂತದಲ್ಲೇ ಹೆಚ್ಚಿನ ಜಾಗೃತಿವಹಿಸಬೇಕು. ಆದರೆ, ಮುಂಗಾರಿನಲ್ಲಿ ಬಿತ್ತನೆ ಮಾಡಿದ ಈರುಳ್ಳಿ ಬೆಳೆಗಳಲ್ಲಿ ಈ ರೋಗ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಅವರು.

ಬೆಳೆ ಬದಲಾವಣೆಗೆ ಸಲಹೆ:

‘ಪ್ರತಿ ವರ್ಷ ಮಣ್ಣಿನ ಫಲವತ್ತತೆ ಹೆಚ್ಚಿಸಲು ಬೆಳೆ ಬದಲಾವಣೆ ಮಾಡಬೇಕು. ಇದು ಮಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಂದರೆ, ಒಂದು ವರ್ಷ ತೊಗರಿ (ದ್ವಿದಳ) ಬೆಳೆದರೆ, ಮರು ವರ್ಷ ಸಜ್ಜೆ, ಜೋಳ ( ಏಕದಳ)ದ ಬೆಳೆಯನ್ನು ಬೆಳೆಯಬೇಕು. ಆದರೆ, ರೈತರು ಭೂಮಿಯ ಫಲವತ್ತತೆಯ ಕಡೆ ಗಮನ ನೀಡದೇ ಹಣ ಗಳಿಸುವ ಆಸೆಯಿಂದ ನಿರಂತರವಾಗಿ ತೊಗರಿ ಬೆಳೆಗೆ ಆದ್ಯತೆ ನೀಡುತ್ತಿದ್ದಾರೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್‌.

ನಮ್ಮ ಹಿರಿಯರು ಯಾವಾಗಲೂ ಅಂತರ ಬೆಳೆ ಬೆಳೆಯುತ್ತಿದ್ದರಿಂದ ಭೂಮಿಗೆ ಲಘು ಪೋಷಕಾಂಶಗಳು ಪರಸ್ಪರ ಹಂಚಿಕೆಯಾಗುವುದರಿಂದ ಇಳುವರಿ ಹೆಚ್ಚುವುದಲ್ಲದೇ ಕಳೆ ಮತ್ತು ಕೀಟ ಮತ್ತು ರೋಗಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತಿತ್ತು ಎನ್ನುತ್ತಾರೆ ಅವರು. 

ಮಳೆ ಸಾಥ್ ಕೊಟ್ಟಾಗ ಬೆಳೆ ಕೈಕೊಡುತ್ತದೆ, ಬೆಳೆ ಸಾಥ್ ಕೊಟ್ಟಾಗ ಮಳೆ ಕೈಕೊಡುತ್ತದೆ. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಉತ್ತಮ ಬೆಳೆ ನಿರೀಕ್ಷಿಸಲಾಗಿತ್ತು. ಆದರೆ, ರೋಗ ಬಂದು ಸಮಸ್ಯೆಯಾಗಿದೆ. ಹೀಗಾಗಿ ಅನೇಕ ಕಡೆ ರೈತರು ತೊಗರಿ ಗಿಡಗಳನ್ನು ಕಿತ್ತು ಹಾಕುತ್ತಿರುವುದು ಕಂಡುಬರುತ್ತಿದೆ.

ರೈತರಿಗೆ ಬೆಳೆಗಳ ಬೆಳೆಯುವಿಕೆಯಲ್ಲಿ ಮಾರ್ಗದರ್ಶನ ಸಿಗುತ್ತಿದೆಯಾದರೂ ಅದು ಸರ್ಕಾರಿ ಕಾರ್ಯಕ್ರಮವಾಗಿಯೇ ಮುಗಿಯುತ್ತಿದೆ. ರೈತರು ಅದನ್ನು ಪರಿಣಾಮಕಾರಿಯಾಗಿ ಕಿವಿಗೆ ಹಾಕಿಕೊಳ್ಳುತ್ತಿಲ್ಲ.

*****

ದ್ರಾಕ್ಷಿಗೆ ಕಾಡುತ್ತಿದೆ ದವಣಿ

ದ್ರಾಕ್ಷಿ ಬೆಳೆಗೆ ಪ್ರಸಿದ್ಧವಾದ ವಿಜಯಪುರ ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಲವು ರೋಗಗಳು ದ್ರಾಕ್ಷಿ ಪಡಕ್ಕೆ ಕಾಡಲಾರಂಬಿಸಿವೆ.

ಬೇಸಿಗೆ ಚಾಟ್ನಿ ಮಾಡಿದ ದ್ರಾಕ್ಷಿ ಪಡಗಳಿಗೆ ದವಣಿ, ಕರ್ಪಾ, ಬುರಿ ಸೇರಿದಂತೆ ಹಲವು ರೋಗಗಳು ಬಂದಿದ್ದರಿಂದ ಉತ್ತಮವಾದ ಕಡ್ಡಿಗಳು ತಯಾರಾಗಿಲ್ಲ ಹಾಗೂ ತಪ್ಪಲು ಉದುರಿ ಹೋಗಿವೆ. ಜೂನ್‌ಲ್ಲಿ ಅತಿ ಹೆಚ್ಚು ತಂಪಾದ ವಾತಾವರಣ ಇದ್ದುದರಿಂದ ಮೋಡ ಮುಸುಕಿದ ವಾತಾವರಣದಲ್ಲಿ ರೋಗಗಳು ಹತೋಟಿಗೆ ಬಂದಿಲ್ಲ. ಆಗ ಆಗಿದ್ದ ಈ ತೊಂದರೆಗೆ ಈಗ ಕಾಯಿ ಚಾಟ್ನಿ ಮಾಡಿದರೂ ಹೂವು ಬರುವ ಭರವಸೆ ಇಲ್ಲದಂತಾಗಿದೆ.

ಸದ್ಯ ಕಾಯಿ ಚಾಟ್ನಿ ಮಾಡಿದ ಪಡಗಳು ಹೂವು ಬಿಟ್ಟರೂ ಸಹ ಕರಗುತ್ತಿವೆ. ತಂಪಾಗಿ ಬಿಸುವ ಪಡುವಣ ಗಾಳಿಯಲ್ಲಿ ನೀರಿನ ತಂಪಾದ ತೇವಾಂಶ ಇರುವುದರಿಂದ ದ್ರಾಕ್ಷಿ ಪಡಗಳಿಗೆ ತಂಪು ಹೆಚ್ಚಾಗಿದೆ. ತಂಪು ಹೆಚ್ಚಾದಂತೆ ದವಣಿ ರೋಗ ಹತೋಟಿಗೆ ಬರಲಾರದೇ ದ್ರಾಕ್ಷಿ ಪಡಕ್ಕೆ ರೋಗ ಹೆಚ್ಚಾಗುತ್ತದೆ.

ದ್ರಾಕ್ಷಿ ಪಡಕ್ಕೆ ಉಡದೆ ಹುಳದ ಕಾಟ ಇದ್ದು, ತಪ್ಪಲು ಉದುರಿ ಹೋಗಿವೆ. ಇದರ ಜೊತೆಗೆ ಕಾಂಡ ಕೊರಕ ಹುಳು ಕಾಟ ಸಹ ಇದ್ದು ಕಾಂಡ ಕೊರೆಯತ್ತಾ ದ್ರಾಕ್ಷಿ ಬಳ್ಳಿಯನ್ನು ಸಂಪೂರ್ಣ ನಾಶ ಮಾಡಿ ಸಸಿ ಒಣಗಿಸುತ್ತಿದೆ.

ಪ್ರತಿ ವರ್ಷ ದ್ರಾಕ್ಷಿ ಬೆಳೆಗಾರನಿಗೆ ಸಂಕಷ್ಟ ಎದುರಾಗಿ ಸಾಲದ ಸುಳಿಗೆ ಸಿಲುಕಿ ನಲುಗಿ ಹೋಗಿದ್ದಾನೆ. ಸರ್ಕಾರ ಮಾತ್ರ ಯಾವುದೇ ಪರಿಹಾರ ಕೊಟ್ಟಿಲ್ಲ. ಬೆಳೆ ವಿಮೆ ಸಹ ಕೆಲವು ರೈತರಿಗೆ ಸರಿಯಾಗಿ ಜಮೆ ಆಗಿಲ್ಲ. ಕೊರೊನಾ ಸಮಯದಲ್ಲಿ ಸೂಕ್ತ ಬೆಲೆ ಕೂಡಾ ಸಿಕ್ಕಿಲ್ಲ. ದ್ರಾಕ್ಷಿ ಬೆಳೆಗಾರನ ಸಂಕಷ್ಟ ದೂರ ಮಾಡಲು ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಅಥವಾ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ತಿಕೋಟಾ ತಾಲ್ಲೂಕಿನ ಬಾಬಾನಗರದ ರೈತ ಶಂಕರಗೌಡ ಬಿರಾದಾರ ಆಗ್ರಹಿಸಿದ್ದಾರೆ.

***

ರೋಗ ನಿವಾರಣೆ; ರೈತರಿಗೆ ಸಲಹೆ‌

ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಯಾವುದೇ ಬೆಳೆಗೆ ರೋಗ ಬಾಧೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್‌.

ಪ್ರತಿ ವರ್ಷ ಒಂದೇ ಬೆಳೆ ಬೆಳೆಯುವುದು ಸಹ ರೋಗ ಬಾಧೆ ಹೆಚ್ಚಲು, ಇಳುವರಿ ಕಡಿಮೆಯಾಗಲು ಕಾರಣ. ಹೀಗಾಗಿ ರೈತರು ಬೆಳೆ ಬದಲಾವಣೆ ಮಾಡಬೇಕು ಎನ್ನುತ್ತಾರೆ ಅವರು.

ತೊಗರಿ ಗೊಡ್ಡು ರೋಗ ಕಂಡುಬಂದರೆ ಓಮೈಟ್‌ ಅಥವಾ ಮೆಜಿಸ್ಟಾರ್‌ ಔಷಧ ಒಂದು ಎಂಎಲ್‌ ಅನ್ನು ಪ್ರತಿ ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. 19:19:19 ಗೊಬ್ಬರವನ್ನು 5 ಗ್ರಾಂ ಪ್ರತಿ ಲೀಟರ್‌ಗೆ ಬೆರಸಿ ಸಿಂಪಡಿಸಬೇಕು.

ತೊಗರಿಗೆ ನೆಟ್ಟೆ ರೋಗ ಕಂಡುಬಂದರೆ ಕಾರ್ಬನ್‌ ಡೈಜಿನ್‌ ಮತ್ತು ಮ್ಯಾಂಕೋಜಬ್‌ 3 ಗ್ರಾಂ ಅನ್ನು ಪ್ರತಿ ಲೀಟರ್‌ಗೆ ಬೆರೆಸಿ ಗಿಡದ ಬುಡದಲ್ಲಿ ಸಿಂಪಡಿಸಬೇಕು.

ಕಬ್ಬಿಗೆ ಗೊಣ್ಣೆ ರೋಗ ಕಂಡುಬಂದಲ್ಲಿ ಒಂದು ದಿನ ಹೊಲದಲ್ಲಿ ನೀರು ನಿಲ್ಲಿಸಬೇಕು. ಆಗ ನಿಯಂತ್ರಣಕ್ಕೆ ಎಬರುತ್ತದೆ. ಸಾವಯವ ಗೊಬ್ಬರ ಮತ್ತು ಮೆಟಾರೈಸಿಯಂ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು.

ಈರುಳ್ಳಿಗೆ ತಿರುಗುಣಿ ರೋಗ ಕಂಡುಬಂದರೆ ಟೆಬಿಕ್ವಿನಾಜೋಲ್‌ ಪ್ರತಿ ಲೀಟರ್‌ಗೆ 1 ಎಂಎಲ್‌ ಮತ್ತು ಪೊಟಾಸಿಯಂ ನೈಟ್ರೇಟ್‌ 5 ಗ್ರಾಂ ಅನ್ನು ಪ್ರತಿ ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಡಪಡಿಸಬೇಕು.

‘ಕೃಷಿ ಸಂಜೀವಿನಿ’ ಸಹಾಯವಾಣಿ ಸಂಖ್ಯೆ 155313 ಕ್ಕೆ ಕರೆ ಮಾಡಿ ರೈತರು ಸಲಹೆ ಪಡೆಯಬಹುದಾಗಿದೆ.

______

ಜಿಲ್ಲೆಯಲ್ಲಿ ತೊಗರಿ, ಕಬ್ಬಿಗೆ ಕಂಡುಬಂದಿರುವ ರೋಗಬಾಧೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ, ರೈತರಿಗೆ ಸೂಕ್ತ ಸಲಹೆ ನೀಡುವಂತೆ ಧಾರವಾಡ ಕೃಷಿ ವಿವಿಗೆ ಪತ್ರ ಬರೆಯಲಾಗಿದೆ

–ಡಾ.ರಾಜಶೇಖರ ವಿಲಿಯಮ್ಸ್‌,
ಜಂಟಿ ಕೃಷಿ ನಿರ್ದೇಶಕ ವಿಜಯಪುರ

***

ಆಳೆತ್ತರಕ್ಕೆ ಬೆಳೆದ ತೊಗರಿ ಹೂಬಿಡದೇ ಗೊಡ್ಡು ರೋಗಕ್ಕೆ ತುತ್ತಾಗಿದ್ದು, ಈಗ ಅನಿವಾರ್ಯವಾಗಿ ಕಿತ್ತು ಹಾಕಲಾಗುತ್ತಿದೆ. ನಾಲ್ಕು ಎಕರೆ ಜಮೀನಿನಲ್ಲಿ ಬೀಜ ಗೊಬ್ಬರ,ಕಳೆ ತೆಗೆಯಲು ₹ 30 ಸಾವಿರ ಖರ್ಚು ಮಾಡಿದ್ದು, ಎಲ್ಲವೂ ಈ ಬಾರಿ ವ್ಯರ್ಥವಾಗಿದೆ.
–ಗಿರೀಶ ಅವುಟಿ,  ಯುವ ರೈತ, ದೇವರ ಹಿಪ್ಪರಗಿ

***

ಮುಂಗಾರಿನ ಬಹುತೇಕ ಬೆಳೆಗಳು ಇನ್ನೂ 45 ರಿಂದ 60 ದಿನದ ಬೆಳೆಗಳಾಗಿರುವುದರಿಂದ ಕೀಟ ಬಾಧೆ ಇನ್ನೂ ಶುರುವಾಗಿಲ್ಲ. ಇನ್ನೊಂದು ಹಂತದ ಮಳೆಯಾಗಿ, ಹೂ ಬಿಡುವ ಸಮಯದಲ್ಲಿ ಕೀಟಗಳ ಬಾಧೆ ಹೆಚ್ಚುತ್ತದೆ
–ಪ್ರಭುಗೌಡ ಕಿರದಳ್ಳಿ, ಢವಳಗಿ ರೈತ ಸಂಪರ್ಕ ಕೇಂದ್ರ ಅಧಿಕಾರಿ, ಮುದ್ದೇಬಿಹಾಳ  

***

ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ತೊಗರಿ ಸಂಪೂರ್ಣ ರೋಗಕ್ಕೆ ತುತ್ತಾಗಿ ಖರ್ಚು ಮಾಡಿರುವ ₹ 25 ಸಾವಿರ ಮರಳದಂತಾಗಿದೆ. ಈಗ ಅದನ್ನು ತೆಗೆದು ಮೆಕ್ಕೆಜೋಳ ಬಿತ್ತನೆ ಮಾಡಬೇಕಾಗಿದೆ. ಅದಕ್ಕೆ ಹಣ ಹೊಂದಿಸುವುದೇ ಚಿಂತೆಯಾಗಿದೆ 
–ನಾಗಪ್ಪ ನ್ಯಾರಗಿ, ದೇವರ ಹಿಪ್ಪರಗಿ

***

ದ್ರಾಕ್ಷಿಗೆ ಡೌಣಿ, ಕರ್ಪಾ, ಬುರಿ ಮತ್ತು ದಾಳಿಂಬೆಗೆ ದುಂಡಾಣು ರೋಗ ಸಾಮಾನ್ಯವಾಗಿ ಬರುತ್ತದೆ. ರೈತರು ಗಮನಕ್ಕೆ ತಂದರೆ ವಿಜ್ಞಾನಿಗಳೊಂದಿಗೆ ಜಮೀನಿಗೆ ಭೇಟಿ ಸಲಹೆ ನೀಡಲಾಗುವುದು
–ಎಸ್‌.ಎಂ. ಬರಗಿಮಠ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ವಿಜಯಪುರ

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಎ.ಸಿ.ಪಾಟೀಲ, ಶಾಂತೂ ಹಿರೇಮಠ,  ಮಹಾಬಲೇಶ್ವರ ಶಿ. ಗಡೇದ, ಪರಮೇಶ್ವರ ಗದ್ಯಾಳ, ಬಸವರಾಜ್‌ ಉಳ್ಳಾಗಡ್ಡಿ, ಬಾಬುಗೌಡ ರೋಡಗಿ, ಅಮರನಾಥ ಹಿರೇಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು