ಬುಧವಾರ, ಜೂನ್ 29, 2022
21 °C
ಲಸಿಕೆ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಲು ಗ್ರಾಮ ಕೋವಿಡ್‌ ಕಾರ್ಯಪಡೆಗೆ ಸೂಚನೆ

ಅಪ ನಂಬಿಕೆ ಬಿಟ್ಟು ಲಸಿಕೆ ಹಾಕಿಸಿಕೊಳ್ಳಿ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಲಸಿಕೆ ಬಗ್ಗೆ ಹಳ್ಳಿ ಜನರು ಅಪನಂಬಿಕೆ, ಮೂಢನಂಬಿಕೆ  ಹೊರಬರಲು ತಿಳಿಸುವ ಜೊತೆಗೆ ಕೋವಿಡ್ ಲಸಿಕೆ ಹಾಕಿಕೊಳ್ಳಲು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಕೊರೊನಾ ಮುಕ್ತ ಗ್ರಾಮವನ್ನಾಗಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಸಲಹೆ ನೀಡಿದರು.

ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕೋವಿಡ್ 19 ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿರುವುದು ಕಂಡುಬರುತ್ತಿದ್ದು, ಹಳ್ಳಿಗಳಲ್ಲಿ ಗ್ರಾಮಸ್ಥರು ಇನ್ನು ಮೂಡ ನಂಬಿಕೆಗಳಿಂದ ಹೊರ ಬಂದಿರುವುದಿಲ್ಲ. ಕಾರಣ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಟಾಸ್ಕ್‌ ಪೋರ್ಸ್‌ ಸಮಿತಿ ಸದಸ್ಯರು ಗ್ರಾಮದ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸಬೇಕು ಎಂದು ತಿಳಿಸಿದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ದಿನ ಆರೋಗ್ಯ ಸರಿ ಇಲ್ಲದವರ, ಕೋವಿಡ್ ಲಕ್ಷಣವುಳ್ಳವರ ಮನೆಮನೆ ಸರ್ವೆ ಮಾಡಿ ವರದಿ ನೀಡಬೇಕು ಎಂದರು.

ಆರೋಗ್ಯ ಸರಿ ಇಲ್ಲದಿದ್ದರೂ ಸರಿ ಇದೆ ಎಂದು ತಪ್ಪು ಮಾಹಿತಿ ನೀಡುತ್ತಿರುವವರನ್ನು ಕೂಡಾ ಆಯಾ ವಾರ್ಡಿನ ಸದಸ್ಯರು, ಹಿರಿಯರು ಅವರಿಗೆ ಆರೋಗ್ಯದ ಬಗ್ಗೆ ಸರಿಯಾಗಿ ಮನವೊಲಿಸಿ, ಸೂಕ್ತ ಚಿಕಿತ್ಸೆ ಬಗ್ಗೆ ತಿಳಿ ಹೇಳಬೇಕು ಎಂದರು.

ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಸಂತೋಷ ಕಳಸಗೊಂಡ ಮಾತನಾಡಿ, ‘ಉಕ್ಕಲಿ ತಾಂಡಾದ ಜನರು ಲಸಿಕೆ ಪಡೆಯಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.  ಕೇವಲ 70 ಜನ ಮಾತ್ರ ಲಸಿಕೆ ಪಡೆಸಿದ್ದಾರೆ. ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈವರೆಗೆ ಶೇ 52ರಷ್ಟು ಮಾತ್ರ ಲಸಿಕಾ ಕಾರ್ಯ ಪೂರ್ಣಗೊಂಡಿದೆ’ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

ಗ್ರಾಮದಲ್ಲಿ 7 ಜನ ಕೋವಿಡ್ ರೋಗ ಲಕ್ಷಣವುಳ್ಳವರು ವರಿದಿಯಾಗಿದ್ದು, ಇದರಲ್ಲಿ 3 ಜನ ಕೋವಿಡ್ ಪಾಸಿಟಿವ್ ರೋಗಿಗಳು ಇದ್ದಾರೆ ಹಾಗೂ ಎಲ್ಲ ರೋಗಿಗಳಿಗೆ ಮೆಡಿಕಲ್ ಕಿಟ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಟಾಸ್ಕಪೋರ್ಸ್‌ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ದಿನ ಗ್ರಾಮದಲ್ಲಿ ಸರ್ವೆ ಕಾರ್ಯವನ್ನು ಮುಂದುವರಿಸಬೇಕು. ರೋಗದ ಲಕ್ಷಣ ಉಳ್ಳವರನ್ನು ಗುರುತಿಸಿ ಅವರಿಗೆ ಸೂಕ್ತವಾದ ಮೆಡಿಕಲ್ ಕಿಟ್ ಮತ್ತು ಆಹಾರ ಕಿಟ್‌ಗಳನ್ನು ನೀಡಬೇಕು ಎಂದು ತಿಳಿಸಿದರು.

ಮುಖಂಡರಾದ ಅಣ್ಣಾಸಾಹೇಬಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಶಬನಂ ಪಾಂಡುಗೋಳ, ಉಪಾಧ್ಯಕ್ಷ ಮಹೇಶ ತಾಮಗೊಂಡ, ಸದಸ್ಯರಾದ ಸಿವಿತಾ ಸಜ್ಜನ, ವಿಶ್ವನಾಥ ತಡಲಗಿ, ಲಾಲಸಾಬ, ಹಿರಿಯ ಆರೋಗ್ಯ ಸಹಾಯಕ ಶ್ರೀಕಾಂತ.ಎಚ್, ಪಿಎಸ್ಐ ಬಸವರಾಜ ಮಮದಾಪೂರ, ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಉದಯಕುಮಾರ, ಪಿಡಿಒ ಎಂ.ಟಿ.ಬಂಡಿವಡ್ಡರ ಇದ್ದರು.

***

ಲಸಿಕೆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ತಾಂಡಾದ ಜನರಿಗೆ ಅಲ್ಲಿನ ಗ್ರಾ.ಪಂ ಸದಸ್ಯರು ತಿಳಿವಳಿಕೆ ನೀಡಬೇಕು. ಹೋಂ ಐಸೊಲೇಷನಲ್ಲಿ ಇದ್ದವರು ಯಾರ ಸಂಪರ್ಕಕ್ಕೂ ಬಾರದಂತೆ ಎಚ್ಚರ ವಹಿಸಬೇಕು
– ಪಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು