ವಿಜಯಪುರ: ಜಿಲ್ಲೆಯಲ್ಲಿ ಬರದ ಛಾಯೆ ಇರುವುದರಿಂದ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಅನುಷ್ಠಾನ ಕುರಿತ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಕುಡಿಯುವ ನೀರು ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಯ ಎಲ್ಲ ಕೆರೆಗಳಿಗೆ ನೀರು ಹರಿಸಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು, ಕುಡಿಯುವ ನೀರು ಬಿಟ್ಟು ಬೇರೆ ಕಾರ್ಯಗಳಿಗೆ ನೀರು ಉಪಯೋಗಿಸದಂತೆ ಜಾಗೃತಿ ಮೂಡಿಸುವುದರೊಂದಿಗೆ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿದುಹೋಗುವಂತೆ ನೋಡಿಕೊಳ್ಳಬೇಕು. ಈ ಕಾರ್ಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನವಣೆ ಮಾತನಾಡಿ, ಜಿಲ್ಲೆಯಲ್ಲಿ ಕಾಲುವೆ ಉದ್ದಕ್ಕೂ 144 ಕಲಂ ಜಾರಿಯಲ್ಲಿದ್ದು, ಮುಂಜಾಗೃತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನೀರು ಪೋಲಾಗದಂತೆ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಶ್ರೀನಿವಾಸ, ಕೃಷ್ಣಾ ಭಾಗ್ಯ ಜಲ ನಿಗಮದ ರಾಂಪುರ ವಿಭಾಗದ ಮುಖ್ಯ ಎಂಜಿನಿಯರ್ ಎಚ್. ರವಿಶಂಕರ, ಕರ್ನಾಟಕ ನೀರಾವರಿ ನಿಗಮದ ಇ.ಇ. ಎಚ್.ಜಿ ಶ್ರೀನಾಥ, ಡ್ಯಾಂ ವಿಭಾಗದ ಇ.ಇ. ಬಸವರಾಜ, ಹೆಸ್ಕಂ ಮುಖ್ಯ ಎಂಜಿನಿಯರ್ ಗೋಟ್ಯಾಳ, ಉಪವಿಭಾಗಾಧಿಕಾರಿ ಬಸವಣ್ಯಪ್ಪ ಕಲಶೆಟ್ಟಿ ಇದ್ದರು.
ಕಾಲುವೆಗೆ ಪಂಪ್‌ಸೆಟ್: ಕ್ರಮಕ್ಕೆ ಸೂಚನೆ
ಕುಡಿಯುವ ನೀರಿನ ಅಭಾವವಾಗಂತೆ ಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಕಾಲುವೆಗಳಿಂದ ನೀರು ಎತ್ತುತ್ತಿರುವ ಕುರಿತು ಕಂಡು ಬಂದಿದ್ದು, ತೀವ್ರ ನಿಗಾ ಇರಿಸಿ ಪಂಪಸೆಟ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಅಂತಹವರ ವಿರುದ್ಧ ದೂರು ದಾಖಲಿಸಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.