ಸೋಮವಾರ, ಸೆಪ್ಟೆಂಬರ್ 26, 2022
20 °C

ಡೋಣಿ ಪ್ರವಾಹ: ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಂ.ಬಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪ್ರತಿ ವರ್ಷ ಮಳೆಗಾಲದಲ್ಲಿ ಡೋಣಿ ನದಿ ಪ್ರವಾಹಕ್ಕೆ ಸಿಲುಕಿ ಬೆಳೆ, ಆಸ್ತಿ, ಪಾಸ್ತಿ ಕಳೆದುಕೊಂಡು ತೊಂದರೆಗೆ ಒಳಗಾಗುವ ಸಂತ್ರಸ್ತರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಸೇರಿದಂತೆ ಇತರೆ ನೀರಾವರಿ ಯೋಜನೆಗಳಲ್ಲಿ ನೀಡುವ ಪುನರ್ವಸತಿ, ಪುನರ್ ನಿರ್ಮಾಣ (ಆರ್ ಅಂಡ್ ಆರ್) ಮಾದರಿಯಲ್ಲಿ ವೈಜ್ಞಾನಿಕ,  ಶಾಶ್ವತ ಪರಿಹಾರ  ಕಲ್ಪಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ ಅವರು ಸರ್ಕಾರವನ್ನು ಒತ್ತಾಯಿಸಿದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಡೋಣಿ ನದಿ ಪ್ರವಾಹಕ್ಕೆ ಒಳಗಾದ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ನದಿ ಪ್ರವಾಹಕ್ಕೆ ಸಿಲುಕುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಮುನ್ನಾ ಅವರ ಭೂಮಿ, ಮನೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಅಲ್ಲದೇ, ಪರ್ಯಾಯ ವ್ಯವಸ್ಥೆ ಮಾಡಬೇಕು, ಪರಿಹಾರಧನ ನೀಡಬೇಕು ಎಂದರು.

ಡೋಣಿ ನದಿಯ ಹೂಳು ತೆಗೆದು, ನದಿ ತಿರುವುಗಳನ್ನು ನೇರವಾಗಿಸಿ, ಅಗತ್ಯ ಇರುವೆಡೆ ನದಿ ಆಸುಪಾಸು ತಡೆಗೋಡೆ ನಿರ್ಮಿಸಿದರೆ ಮಾತ್ರ ಡೋಣಿ ಪ್ರವಾಹ ತಡೆಗಟ್ಟಬಹುದು ಎಂದರು.

ಡೋಣಿ ನದಿ ಪ್ರವಾಹ ತಡೆಗೆ ಯೋಜನೆ ಜಾರಿಗೆ ತರಲು ದೊಡ್ಡ ಮೊತ್ತದ ಹಣಕಾಸಿನ ಅಗತ್ಯ ಇರುವುದರಿಂದ ಈ ಹಿಂದೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೇಂದ್ರ ಸರ್ಕಾರದ ವ್ಯಾಪ್ ಕೋಸ್ ಅಡಿ ₹2400 ಕೋಟಿ ಮೊತ್ತದ ಯೋಜನೆಗೆ ಡಿಪಿಆರ್ ಸಿದ್ದಪಡಿಸಿ, ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದು ಸದ್ಯ ನನೆಗುದಿಗೆ ಬಿದ್ದಿದೆ.‌ ಈ ಯೋಜನೆ ಜಾರಿಗೆ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಬಿಹಾರದಲ್ಲಿ ಕೋಶಿ ನದಿ ಪ್ರವಾಹ ತಡೆಗೆ ಕೇಂದ್ರ ಸರ್ಕಾರ ಅನುಸರಿಸಿದ ಮಾದರಿಯನ್ನು ಡೋಣಿ ನದಿ ವ್ಯಾಪ್ತಿಯಲ್ಲಿ ಜಾರಿಗೆ ತರುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.

ಮಳೆ,  ನೆರೆ ಸಂತ್ರಸ್ತರಿಗೆ ಎನ್ ಡಿಆರ್ ಎಫ್ ಅಡಿ ನೀಡುವ ಪರಿಹಾರ ಏತಕ್ಕೂ ಸಾಲದು. ಸಂತ್ರಸ್ತರ ಚಪ್ಪಲ್ಲಿ ಕಿಮ್ಮತ್ತು ಪರಿಹಾರ ಇರಲ್ಲ. ಹೀಗಾಗಿ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಹೊಸ ಹುರುಪು: ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ.‌ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆತ್ಮಸ್ಥೈರ್ಯ ಹೆಚ್ಚಳವಾಗಿದೆ ಎಂದರು.
ಸಿದ್ದರಾಮೋತ್ಸವಕ್ಕೆ ಪರ್ಯಾಯ ಸಮಾವೇಶ ಮಾಡಲು ಬಿಜೆಪಿಗೆ ಸಾಧ್ಯವಿಲ್ಲ.‌  ಒಂದು ವೇಳೆ ಮಾಡಿದರರೂ ಅರ್ಧದಷ್ಟು ಜನ ಸೇರಲು ಸಾಧ್ಯವೇ ಇಲ್ಲ. ಹಾಗೇನಾದರೂ ಬಿಜೆಪಿ ಸಮಾವೇಶ ಮಾಡುವ ದುಸ್ಸಾಹಸಕ್ಕೆ ಮುಂದಾದರೆ ನಗೆ ಪಾಟಲಿಗೆ ಈಡಾಗುತ್ತಾರೆ ಎಂದರು.

ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಆಲಿಂಗನವು ಪಕ್ಷದ ಒಗ್ಗಟ್ಟು ಹೆಚ್ಚಿಸಿದೆ. ಇದರಿಂದ ಬಿಜೆಪಿಯಲ್ಲಿ ತಳಮಳ ಸುರುವಾಗಿದೆ ಎಂದರು. ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಕರಿ ಬಗ್ಗೆ ಜನರಿಗೆ ಜಿಗುಪ್ಸೆ‌ ಬಂದಿದೆ ಎಂದರು.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್140 ಕ್ಷೇತ್ರಗಳಲ್ಲಿ ಜಯಗಳಿಸುವುದು ನಿಶ್ಚಿತ. ಬಳಿಕ ಶಾಸಕಾಂಗ ಪಕ್ಷದ ಸಭೆ ಮತ್ತು ಹೈಕಮಾಂಡ್, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ನಿರ್ಣಯದ ಮೇರೆಗೆ ‌‌ಮುಖ್ಯಮಂತ್ರಿ ನೇಮಕವಾಗಲಿದೆ ಎಂದು ಹೇಳಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು