ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಡೋಣಿ ನದಿ ಆರ್ಭಟ: ಜಮೀನು ಜಲಾವೃತ, ಹಲವೆಡೆ ಬೆಳೆ ನಾಶ

ಮುಳುಗಿದ ಸಾತಿಹಾಳ ಸೇತುವೆ; ಉಕ್ಕಿ ಹರಿದ ಸಂಗಮನಾಥ ಹಳ್ಳ
Last Updated 5 ಆಗಸ್ಟ್ 2022, 14:03 IST
ಅಕ್ಷರ ಗಾತ್ರ

ವಿಜಯಪುರ/ದೇವರ ಹಿಪ್ಪರಗಿ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆ ವರೆಗೆ ಗುಡುಗು, ಸಿಡಿಲಿನೊಂದಿಗೆ ಸುರಿದ ಭಾರೀ ಮಳೆಗೆ ಡೋಣಿ ನದಿ ಉಕ್ಕಿ ಹರಿದಿದೆ.

ಬಹುತೇಕಹಳ್ಳ ಕೊಳ್ಳ, ಬಾಂದಾರ ಹಾಗೂ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಡೋಣಿ ನದಿ ವ್ಯಾಪ್ತಿಯ ಸಾವಿರಾರು ಎಕರೆ ಜಮೀನು ಪ್ರವಾಹದಲ್ಲಿ ಮುಳುಗಡೆಯಾಗಿದೆ. ಮತ್ತೆ ಕೆಲವೆಡೆ ಬೆಳೆ ನಾಶವಾಗಿದೆ.

ಬಸವನಬಾಗೇವಾಡಿ-ಮುದ್ದೇಬಿಹಾಳ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಸಾತಿಹಾಳ ಗ್ರಾಮದ ಹತ್ತಿರದಲ್ಲಿರುವ ಡೋಣಿ ನದಿಯ ಸೇತುವೆ ಪ್ರವಾಹದಲ್ಲಿ ಮುಳುಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತು.ಬಸ್ ಸೇರಿದಂತೆ ಭಾರಿ ವಾಹನಗಳು ಮಾತ್ರ ಪ್ರವಾಹದ ನೀರಿನಲ್ಲಿಯೇ ಸಂಚರಿಸಿದವು. ಮಧ್ಯಾಹ್ನದ ನಂತರ ಪ್ರವಾಹ ಮತ್ತಷ್ಟು ಏರಿಕೆಯಾದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಯಿತು. ಸೇತುವೆಯ ಎರಡು ಕಡೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

ದೇವರ ಹಿಪ್ಪರಗಿ ಪಟ್ಟಣದಲ್ಲಿಯೂ ಸಹ ಗುರುವಾರ ರಾತ್ರಿ ಹೊಸೂರಹಳ್ಳ ತುಂಬಿ ತಾಳಿಕೋಟೆ ಸೇತುವೆ ಮೇಲೆ ನೀರು ಹರಿಯಿತು. ಐತಿಹಾಸಿಕ ಮಲ್ಲಯ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ಪ್ರವೇಶಿಸಿತು. ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕೆಸರು ನೀರಿನಲ್ಲಿ ತೊಯ್ದವು. ನಂತರ ಅರ್ಚಕರು ಹಾಗೂ ಟ್ರಸ್ಟ್ ಸದಸ್ಯರು ತೊಯ್ದ ನೋಟುಗಳನ್ನು ಸ್ವಚ್ಛಗೊಳಿಸಿ ಬಿಸಿಹಂಚಿನ ಮೇಲೆ ಒಣಗಿಸಿದರು.

2009ರಲ್ಲಿ ಗರ್ಭಗುಡಿ ಪ್ರವೇಶಿಸಿದ್ದ ನೀರು ಈಗ ಪುನ: ದೇವಸ್ಥಾನದ ಒಳಗೆ ಪ್ರವೇಶಿಸಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಜಡಗೊಂಡ ಮಾಹಿತಿ ನೀಡಿದರು.

ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ, ಧನ್ಯಾಳ, ದಾಸ್ಯಾಳ, ಕೊಟ್ಯಾಳ ಗ್ರಾಮಗಳು ಈ ನದಿ ದಡದಲ್ಲಿಯೇ ಇದ್ದು, ಮುಳುಗಡೆಯ ಭೀತಿ ಎದುರಿಸುತ್ತಿವೆ.

ಹೊನವಾಡ ಗ್ರಾಮದ ಭಗವಂತ ತಿಪ್ಪಣ್ಣ ಮಾಲಗಾರ ಅವರ ತೋಟದಲ್ಲಿ ಇದ್ದ ಕಬ್ಬಿನ ಬೆಳೆಯೂ ನಾಶವಾಗಿದೆ. ಕಬ್ಬಿನ ತೋಟದಲ್ಲಿ ಎರಡು ಅಡಿಯಷ್ಟು ಮಣ್ಣು ಕೊಚ್ಚಿಕೊಂಡು ಹೋಗಿ ಕಬ್ಬು ವಾಲಿ‌ ನೆಲಕ್ಕುರುಳಿದೆ. ಹಲವು ರೈತರ ಜಮೀನುಗಳಿಗೆ ನುಗ್ಗಿದ ಮಳೆ‌ ನೀರಿನಿಂದ ತೊಗರಿ, ಉದ್ದು, ಹೆಸರು ಬೆಳೆಗಳನ್ನು ನೀರಲ್ಲಿ ನಿಂತು ಹಾಳಾಗಿವೆ.

ಶಾಸಕ ಚವ್ಹಾಣ ಭೇಟಿ:

ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ಉಕುಮನಾಳ ಗ್ರಾಮಕ್ಕೆ ಶಾಸಕ ದೇವಾನಂದ ಚವ್ಹಾಣ ಅವರು ಅಧಿಕಾರಿಗಳೊಂದಿಗೆ ಡೋಣಿ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಖಂಡರಾದಸಂತೋಷ್ ಬಿರಾದಾರ, ಶೈಲ ಬಿರಾದಾರ, ಸಂಗಪ್ಪ ಇಂಡಿ, ಭೀಮಸಿಂಗ್ ಹಿಪ್ಪರಗಿ, ಸದಾಶಿವ ಸಾರವಾಡ, ಬಸವರಾಜ ಬನಜಗಿ, ರಾಮಗೊಂಡ ಬಿರಾದಾರ, ಶಿವಮೂರ್ತಿ ಸಾರವಾಡ, ಮಡಿವಾಳ ಬಿರಾದಾರ ಇದ್ದರು.

ಶಾಸಕ ಎಂ.ಬಿ.ಪಾಟೀಲರ ಪುತ್ರ, ಬಿ.ಎಲ್.ಡಿ.ಇ ನಿರ್ದೇಶಕ ಬಸನಗೌಡ ಎಂ.ಪಾಟೀಲ ಅವರು ಕೋಟ್ಯಾಳ, ಧನ್ಯಾಳ, ದಾಶ್ಯಾಳ ಹಾಗೂ ಸಾರವಾಡ ಗ್ರಾಮಗಳ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿದರು.

ಡೋಣಿ ನದಿ ತಟಕ್ಕೆ ತೆರಳದಂತೆ ಸೂಚನೆ
ವಿಜಯಪುರ:
ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರು ನೆರೆಹಾವಳಿ ಪ್ರದೇಶಗಳಾದ ಕೋಟ್ಯಾಳ, ಧನ್ಯಾಳ, ದಾಶ್ಯಾಳ ಹಾಗೂ ಸಾರವಾಡ ಗ್ರಾಮಗಳಿಗೆ ತೆರಳಿ, ವಸ್ತುಸ್ಥಿತಿ ಅವಲೋಕಿಸಿದರು.

ಡೋಣಿ ನದಿ ತಟಕ್ಕೆ ಜನರು ಹೋಗದಂತೆಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾನಿಗೊಳಗಾಗಿರುವ ಪ್ರದೇಶಗಳನ್ನು ಸಮೀಕ್ಷೆ ಮಾಡಿ, ರೈತರಿಗೆ ಸೂಕ್ತ ಪರಿಹಾರ ದೊರಕುವಂತೆ ಮಾಡುವುದಾಗಿ ಭರವಸೆ ನೀಡಿದರು.

ಬಬಲೇಶ್ವರ ತಹಶೀಲ್ದಾರ್‌ ಸಂತೋಷ ಮ್ಯಾಗೇರಿ, ತಿಕೋಟಾ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ, ಬಬಲೇಶ್ವರ ತಾ.ಪಂ. ಇಒ ಜುಬೇರ ಪಠಾಣ, ತಿಕೋಟಾ ತಾ.ಪಂ. ಇಒ ಕಾರ್ಯನಿರ್ವಾಹಕ ರಾಜೇಶ ಎಸ್.ಡಿ. ಇದ್ದರು.

ಬಬಲೇಶ್ವರದಲ್ಲಿ 13.24 ಸೆಂ.ಮೀ.ಮಳೆ
ವಿಜಯಪುರ:
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮುಂಜಾನೆ 8ರ ವರೆಗೆ ಸುರಿದ ಮಳೆ ವಿವರ ಇಂತಿದೆ.

ಬಬಲೇಶ್ವರದಲ್ಲಿ ಅತೀ ಹೆಚ್ಚು ಮಳೆ ಅಂದರೆ 13.24 ಸೆಂ.ಮೀ.ಮಳೆಯಾಗಿದೆ. ಉಳಿದಂತೆದೇವರ ಹಿಪ್ಪರಗಿಯಲ್ಲಿ 10.52,ಭೂತನಾಳ 8.84,ತಿಕೋಟಾ 8.52,ನಾಗಠಾಣ 5.4,ಹಿಟ್ನಳ್ಳಿ 5.32,ಕನ್ನೂರ 2.69, ಬಸವನ ಬಾಗೇವಾಡಿ 2.3, ಮನಗೂಳಿ 2.23,ನಾಲತವಾಡ 2.36 ಸೆಂ.ಮೀ.ಮಳೆಯಾಗಿದೆ.

ಉಳಿದಂತೆವಿಜಯಪುರ ನಗರದಲ್ಲಿ 9.2 ಮಿ.ಮೀ., ಕುಮಟಗಿ 2.4, ಹೂವಿನ ಹಿಪ್ಪರಗಿ 9.8, ಆಲಮಟ್ಟಿ 4.2, ಅರೇಶಂಕರ 2, ಮುದ್ದೇಬಿಹಾಳ 7.1, ತಾಳಿಕೋಟೆ 7.3, ಢವಳಗಿ 8.4, ನಾದ ಬಿ.ಕೆ. 2, ಆಗರಖೇಡ 14.2, ಹಲಸಂಗಿ 3, ಚಡಚಣ 16.4, ಝಳಕಿ 1.3, ಸಿಂದಗಿ 14, ಆಲಮೇಲ 7, ಸಾಸಬಾಳ 18.3, ರಾಮನಹಳ್ಳಿ 6.2, ಕೊಂಡಗುಳಿ 6.6, ಕಡ್ಲೆವಾಡ 12.1 ಮಿ.ಮೀ. ಮಳೆಯಾಗಿದೆ.

ಜಲಪಾತದ ವೈಭವ ಸೃಷ್ಟಿ!
ತಿಕೋಟಾ:
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳವು ಮಳೆಯ ನೀರಿನ ಜೊತೆಗೆ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ಹರಿಯುವ ಕೃಷ್ಣಾ ನದಿ ನೀರು ಸೇರಿ ಬೊರ್ಗರೆಯುತ್ತಾ ಹರಿಯುತ್ತಿದೆ. ಬಾಂದಾರ ಮೇಲಿಂದ ಬೀಳುವ ನೀರು ಜಲಪಾತದ ವೈಭವ ಸೃಷ್ಟಿಸಿ ನೋಡುಗರನ್ನು ಆಕರ್ಷಿಸುತ್ತಿದೆ.

ಹಳ್ಳದಡಿಯಲ್ಲಿರುವ ಸಂಗಮನಾಥ ದೇಗುಲದ ಗರ್ಭ ಗುಡಿಯ ಒಳಗೆ ನೀರು ಹೊಕ್ಕಿದ್ದು, ಮೂರ್ನಾಲ್ಕು ಅಡಿ ನೀರು ನಿಂತಿದೆ. ದೇಗುಲದ ಹೊರ ಆವರಣದಲ್ಲಿ ಎರಡು ಅಡಿಯಷ್ಟು ನೀರು ನಿಂತಿದ್ದು, ಭಕ್ತರು ನೀರಿನಲ್ಲೆ ಬಂದು ಸಂಗಮನಾಥನ ದರ್ಶನ ಪಡೆಯುತ್ತಿದ್ದಾರೆ. ಅರ್ಚಕ ಮಲ್ಲಯ್ಯ ಹಿರೇಮಠ ಎಂದಿನಂತೆ ಗರ್ಭಗುಡಿಯಲ್ಲಿ ಪೂಜೆ ನೆರವೇರಿಸಿದ್ದಾರೆ.

ಶ್ರಾವಣ ಮಾಸದ ನಿಮಿತ್ಯ ದೇಗುಲದ ಆವರಣದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಪ್ರತಿದಿನ ಪ್ರವಚನ ಇರುತ್ತಿದ್ದು, ಮಳೆಯ ಆವಾಂತರದಿಂದ ಕಟ್ಟೆಯ ಮೇಲೆ ನೀರು ಬಂದಿರುವದರಿಂದ ಗಿರಿಜಾಮಾತೆ ದೇಗುಲದ ಎತ್ತರದ ಕಟ್ಟೆಯ ಮೇಲೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT