ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಾಠಾ ಅಭಿವೃದ್ಧಿ ನಿಗಮಕ್ಕೆ ವಿರೋಧ ಬೇಡ‘

ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಚಾಲನೆ: ಉಪ ಮುಖ್ಯಮಂತ್ರಿ ಕಾರಜೋಳ ಮನವಿ
Last Updated 22 ನವೆಂಬರ್ 2020, 16:45 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಕಳೆದ ವರ್ಷ ಅತಿವೃಷ್ಟಿ, ಪ್ರವಾಹದಿಂದ 35 ಸಾವಿರ ಕೋಟಿ, ಈ ವರ್ಷವೂ ಮಳೆಯಿಂದ 25 ಸಾವಿರ ಕೋಟಿ ಹಾನಿಯ ಜೊತೆಗೆ ಕೊರೊನಾ ಆತಂಕ ಎದುರಾದರೂ ಯಡಿಯೂರಪ್ಪ ನೇತೃತ್ವದ ಸರ್ಕಾರ ರೈತರ ಪರವಾಗಿ ಹಾಗೂ ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡದೇ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಅವರು ಭಾನುವಾರ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕೃಷಿ ಮಾರುಕಟ್ಟೆ ಹಾಗೂ ಲೋಕೋಪಯೋಗಿ ಇಲಾಖೆಗಳ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಕೊರೊನಾ ಕಾರಣದಿಂದಾಗಿ ಸರ್ಕಾರದ ಆದಾಯ ಶೇ30ಕ್ಕೆ ಕುಸಿದಿದೆ. ಇಂಥ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿಯೂ ಸಹ ಚಿಕ್ಕ ಹಿಡುವಳಿದಾರರ ಖಾತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ವರ್ಷ ₹ 6,000 ಹಾಗೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ₹ 4,000 ಪ್ರೋತ್ಸಾಹ ಧನ ಹಾಕುತ್ತಿದೆ. ದೇಶದ 37 ಕೋಟಿ ಮಹಿಳೆಯರ ಜನಧನ ಖಾತೆಗೆ ₹ 500 ಜಮಾ ಮಾಡುವ ಮೂಲಕ ಜನಪರ ಕೆಲಸ ಮಾಡುತ್ತಿದೆ. ಬಡ ಜನರ ತೊಂದರೆ ತಾಪತ್ರಯ ಅರಿತಿದ್ದ ಮೋದಿ ಸರ್ಕಾರ ದೇಶದ 12 ಕೋಟಿ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ. ಗ್ಯಾಸ್ ನೀಡಿದೆ ಎಂದರು.

ರಾಜ್ಯದಲ್ಲಿರುವ ಮರಾಠಾ ಜನರ ಅಭಿವೃದ್ಧಿಗಾಗಿ ಪ್ರಾರಂಭಿಸಿರುವ ಮರಾಠಾ ಅಭಿವೃದ್ಧಿ ನಿಗಮಕ್ಕೆ ವಿರೋಧ ಮಾಡಬಾರದು ಎಂದವರು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಕೊರೊನಾ, ಮಳೆಯಿಂದಾಗಿ ಮತಕ್ಷೇತ್ರದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಒಂದೇ ವರ್ಷದಲ್ಲಿ ₹ 90 ಕೋಟಿ ಅನುದಾನವನ್ನು ಮೂಲಭೂತ ಸೌಲಭ್ಯಗಳಿಗಾಗಿ ಕಾರಜೋಳ ನೀಡಿದ್ದಾರೆ. ಅವಳಿ ಜಿಲ್ಲೆಗಳ ನೀರಾವರಿಗಾಗಿ ₹ 350 ಕೋಟಿ, ಜಲಜಾರಿ ಕುಡಿಯುವ ನೀರಿನ ಯೋಜನೆಗೆ ₹ 2,500 ಕೋಟಿ ಸರ್ಕಾರ ನೀಡಿದೆ ಎಂದರು.

ಕುಂಟೋಜಿಯ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಧಿಕಾರಿ ಸುನೀಲಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಬಾಯಿ ಹವಾಲ್ದಾರ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಸಗಿ, ತಾಳಿಕೋಟಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಲೋಕೋಪಯೋಗಿ ಇಲಾಖೆಯ ಇ.ಇ. ಬಿ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಶುರಾಮ ಪವಾರ ಸ್ವಾಗತಿಸಿದರು. ಗೋಪಾಲ ಹೂಗಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT