ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಬಿಜೆಪಿ ಹಾಲಿ ಶಾಸಕರಿಗೂ ಟಿಕೆಟ್ ಅನುಮಾನ?

ಬಬಲೇಶ್ವರ, ನಾಗಠಾಣ, ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಗೊಂದಲ
Last Updated 9 ಫೆಬ್ರುವರಿ 2023, 20:30 IST
ಅಕ್ಷರ ಗಾತ್ರ

ವಿಜಯಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಆಡಳಿತರೂಢ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಲಾಭಿ ಜೋರಾಗಿದೆ.

ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿರುವ ಹಾಲಿ ಶಾಸಕರು ಬಿಜೆಪಿಯಿಂದ ಮರು ಸ್ಪರ್ಧಿಸಲು ಅಣಿಯಾಗಿದ್ದಾರೆ. ಇನ್ನುಳಿದ ನಾಲ್ಕು ಕ್ಷೇತ್ರಗಳಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಲೆಕ್ಕಾಚಾರ ಜೋರಾಗಿ ನಡೆದಿದೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಸಿಂದಗಿಯಿಂದ ರಮೇಶ ಭೂಸನೂರ, ವಿಜಯಪುರ ನಗರ ಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಹಾಗೂ ದೇವರಹಿಪ್ಪರಗಿಯಿಂದ ಸೋಮನಗೌಡ ಪಾಟೀಲ ಸಾಸನೂರ ಅವರು ಕಣಕ್ಕಿಳಿಯಲು ಭಾರೀ ಸಿದ್ಧತೆ ನಡೆಸಿದ್ದಾರೆ. ಆದರೆ, ಅವರಿಗೆ ಟಿಕೆಟ್‌ ಸಿಗುವುದೇ ಎಂಬುದು ಇನ್ನೂ ಖಚಿತವಾಗಿಲ್ಲ.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ, ಇಂಡಿ, ಬಬಲೇಶ್ವರ ಮತ್ತು ಬಸವನ ಬಾಗೇವಾಡಿಗೆ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ರಾಜಕೀಯವಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನಾಗಠಾಣ ಮೀಸಲು ಕ್ಷೇತ್ರ:

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರರಾದ ಗೋಪಾಲ ಕಾರಜೋಳ ಅಥವಾ ಉಮೇಶ ಕಾರಜೋಳ ಸಹೋದರರಲ್ಲಿ ಒಬ್ಬರು ಬಿಜೆಪಿಯಿಂದ ಕಣಕ್ಕಿಳಿಯಲು ಅಣಿಯಾಗಿದ್ದಾರೆ. ಇದೇ ಕ್ಷೇತ್ರದಿಂದ ಅವಕಾಶ ಸಿಕ್ಕರೆ ಸ್ಪರ್ಧಿಸಲು ಸಂಸದ ರಮೇಶ ಜಿಗಜಿಗಣಗಿ, ಕುಡಚಿ ಶಾಸಕ ಪಿ.ರಾಜೀವ್‌ ಕೂಡ ಪ್ರಯತ್ನ ನಡೆಸಿದ್ದಾರೆ.

ನಾಗಠಾಣ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ‘ಕಮಲ’ ಅರಳಿಸಲು ಸಜ್ಜಾಗಿರುವ ಬಿಜೆಪಿಯು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನೇ ಕ್ಷೇತ್ರಕ್ಕೆ ಕರೆಯಿಸಿ, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಬಸವನ ಬಾಗೇವಾಡಿ:

ಈ ಕ್ಷೇತ್ರದಿಂದ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಮತ್ತು ಸೋಮನಗೌಡ ಪಾಟೀಲ ಮನಗೂಳಿ(ಅಪ್ಪುಗೌಡ ಪಾಟೀಲ) ಹೆಸರು ಬಲವಾಗಿ ಕೇಳಿಬರುತ್ತಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಮನಗೂಳಿ ಅವರು ಟಿಕೆಟ್‌ ಗಿಟ್ಟಿಸಲು ಲಾಭಿ ನಡೆಸಿದ್ದಾರೆ.

ಬೆಳ್ಳುಬ್ಬಿ ಅವರು ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವ ಮುರುಗೇಶ ನಿರಾಣಿ ಅವರನ್ನು ನಂಬಿಕೊಂಡು, ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್‌ ಲಭಿಸುತ್ತದೆ ಎಂಬುದು ಕಾದು ನೋಡಬೇಕಿದೆ.

ಬಬಲೇಶ್ವರ ಕ್ಷೇತ್ರ:

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಅವರು ಮತ್ತೊಮ್ಮೆ ಬಬಲೇಶ್ವರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಅಣಿಯಾಗಿದ್ದಾರೆ. ಆದರೆ, ಬಿಜೆಪಿ ಟಿಕೆಟ್‌ಗಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಮತ್ತು ಮುಖಂಡ ಗುರುಲಿಂಗಪ್ಪ ಅಂಗಡಿ ಅವರು ಕಣಕ್ಕಿಳಿಯಲು ಲಾಭಿ ನಡೆಸಿದ್ದಾರೆ. ಆದರೆ, ಇದುವರೆಗೂ ಕ್ಷೇತ್ರದಲ್ಲಿ ಯಾರೊಬ್ಬರೂ ಪಕ್ಷ ಸಂಘಟನೆ, ಪ್ರಚಾರದಲ್ಲಿ ತೊಡಗಿಲ್ಲ. ಈ ಮೂವರಲ್ಲಿ ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಮೂಡಿಸಿದೆ.

****

ಯತ್ನಾಳಗೆ ಟಿಕೆಟ್‌ ತಪ್ಪಿಸಲು ಯತ್ನ

ವಿಜಯಪುರ: ವಿಜಯಪುರ ನಗರ ಕ್ಷೇತ್ರದಿಂದ ಈ ಬಾರಿ ಯತ್ನಾಳ ಅವರಿಗೆ ಟಿಕೆಟ್‌ ತಪ್ಪಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆದಿದೆ.

ಪಕ್ಷದ ಪ್ರಮುಖ ನಾಯಕರ ಮೇಲೆ ಸದಾ ಕಾಲ ಟೀಕೆ, ಟಿಪ್ಪಣಿ, ಆರೋಪಗಳನ್ನು ಮಾಡುವ ಮೂಲಕ ಪಕ್ಷಕ್ಕೆ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ದೂಡುವ ಜೊತೆಗೆ ಮುಜುಗರ ಅನುಭವಿಸುವಂತೆ ಮಾಡಿರುವ ಶಾಸಕ ಯತ್ನಾಳ ಅವರಿಗೆ ವಿಜಯಪುರ ನಗರ ಕ್ಷೇತ್ರದಿಂದ ಟಿಕೆಟ್‌ ತಪ್ಪಿಸಲು ಸ್ವಪಕ್ಷದವರಿಂದಲೇ ಹೈಕಮಾಂಡ್‌ ಮೇಲೆ ಭಾರೀ ಒತ್ತಡ ಹೇರಲಾಗುತ್ತಿದೆ.

ಯತ್ನಾಳ ಅವರ ಬದಲಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಅವಕಾಶ ಒದಗಿಸಲು ಬಿಜೆಪಿಯ ಒಂದು ಗುಂಪು ಯತ್ನಿಸಿದೆ.

ಪಕ್ಷದ ಹೈಕಮಾಂಡ್‌ ಕೂಡ ಯತ್ನಾಳ ಅವರಿಗೆ ಟಿಕೆಟ್‌ ನೀಡಬೇಕೇ, ಬೇಡವೇ, ನೀಡಿದರೆ ಪಕ್ಷಕ್ಕೆ ಲಾಭವೇನು? ನೀಡದಿದ್ದರೆ ಪಕ್ಷಕ್ಕೆ ಆಗುವ ನಷ್ಟವೇನು? ಎಂಬುದನ್ನು ಅಳೆದು, ತೂಗುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ವರಿಷ್ಠರು ಗೊಂದಲಕ್ಕೆ ಒಳಗಾಗಿದ್ದಾರೆ.

ಯತ್ನಾಳ ಅವರನ್ನು ವಿರೋಧ ಹಾಕಿಕೊಂಡು ಪಕ್ಷಕ್ಕೆ ನಷ್ಠ ಮಾಡಿಕೊಳ್ಳುವ ಬದಲು ಅವರಿಗೆ ಟಿಕೆಟ್‌ ಕೊಟ್ಟು ತಾವೇ ಸೋಲಿಸಲು ಖೆಡ್ಡಾವನ್ನು ತೋಡುವ ಕಸರತ್ತು ಕೂಡ ನಡೆದಿದೆ ಎಂದು ಬಿಜೆಪಿ ಒಳಗೆ ಚರ್ಚೆಗಳು ನಡೆದಿವೆ ಎಂದು ಹೆಸರು ಹೇಳಲು ಇಚ್ಛಿಸದ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು.

****

ಯುಪಿ, ಗುಜರಾತ್‌ ಮಾದರಿ ಈ ಬಾರಿ ರಾಜ್ಯದಲ್ಲೂ ಟಿಕೆಟ್ ಹಂಚಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುತ್ತದೆ ಎಂದು ಖಚಿತವಾಗಿ ಹೇಳಲಾಗದು. ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ

–ಆರ್‌.ಎಸ್.ಪಾಟೀಲ ಕೂಚಬಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT