ಮಂಗಳವಾರ, ಮೇ 24, 2022
25 °C
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವರ ಬಣ)ಯಿಂದ ಆಯೋಜನೆ

ಡಿಎಸ್‌ಎಸ್‌ ಅಧ್ಯಯನ ಶಿಬಿರ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಚಿಂತಕರಾದ ಪ್ರೊ.ಜಿ.ಕೆ.ಗೋವಿಂದರಾವ್‌, ಡಾ.ಸಿದ್ದಲಿಂಗಯ್ಯ ಮತ್ತು ಸುರೇಶ ಮಣ್ಣೂರ ಅವರ ನೆನಪಿಗಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಏಪ್ರಿಲ್‌ 8ರಿಂದ 10ರ ವರೆಗೆ ಆಲಮಟ್ಟಿಯ ಕೆ.ಬಿ.ಜಿ.ಎನ್‌.ಎಲ್‌ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.

ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ದಸಂಸ ಪದಾಧಿಕಾರಿಗಳಾದ ಚನ್ನು ಕಟ್ಟಿಮನಿ, ಎಚ್‌.ಎಸ್‌.ತಳೊಳ್ಳಿ, ಶ್ರೀಶೈಲ ಬೂದಿಗಾಳ, ಚಂದ್ರಶೇಖರ ನಾಗೂರ, ಯಮನಪ್ಪ ಚಲವಾದಿ, ಅನಿಲ ಹೊಸಮನಿ, ಶೇಖರ ನಾಡಗೇರ ಅವರನ್ನೊಳಗೊಂಡ ತಂಡವು ಶಿಬಿರದ ಯಶಸ್ವಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 

ಈ ಅಧ್ಯಯನ ಶಿಬಿರದಲ್ಲಿ ರಾಜ್ಯದ ಸುಮಾರು 300 ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಉದ್ಘಾಟನೆ:

ಏಪ್ರಿಲ್‌ 8ರಂದು ಮಧ್ಯಾಹ್ನ 12.30ಕ್ಕೆ ಭಂತೆ ವರಜ್ಯೋತಿ ಅವರ ಸಾನ್ನಿಧ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅವರು ಅಧ್ಯಯನ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ಕೊಪ್ಪಳದ ಪ್ರಗತಿಪರ ಚಿಂತಕ ಅಲ್ಲಮಪ್ರಭು ಬೆಟ್ಟದೂರ ಅವರು ‘ಅಂಬೇಡ್ಕರ್‌ - ಲೋಹಿಯಾ ಚಿಂತನೆಗಳ ಮೂಲಕ ಜಾತಿ ವಿನಾಶ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.‌

ಸಂಜೆ 5ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ‘ಮಹಿಳೆಯರು ಮತ್ತು ಜಾತಿ, ನ್ಯಾಯ–ಲಿಂಗನ್ಯಾಯ’ ಎಂಬ ವಿಷಯದ ಕುರಿತು ಕೊಪ್ಪಳದ ಹೋರಾಟಗಾರ್ತಿ ಸಾವಿತ್ರಿ ಮಜುಮದಾರ ಉಪನ್ಯಾಸ ನೀಡಿಲಿದ್ದಾರೆ.

ಏಪ್ರಿಲ್‌ 9ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಮೂರನೇ ಗೋಷ್ಠಿಯಲ್ಲಿ ‘ಧರ್ಮಾಂತರ ಏಕೆ? ಮತಾಂತರ ನಿಷೇಧ ಕಾನೂನು ಹಿಂದಿರುವ ಹುನ್ನಾರ’ ಎಂಬ ವಿಷಯದ ಕುರಿತು ಬಾಗಲಕೋಟೆಯ ಪ್ರಗತಿಪರ ಚಿಂತಕ ಮಹೇಶ ತಿಪ್ಪಾಶೆಟ್ಟಿ ವಿಷಯ ಮಂಡಿಸಲಿದ್ದಾರೆ. 

ಬೆಳಿಗ್ಗೆ 11.30ಕ್ಕೆ ನಡೆಯುವ ನಾಲ್ಕನೇ ಗೋಷ್ಠಿಯಲ್ಲಿ  ಬೆಂಗಳೂರಿನ ಪ್ರಗತಿಪರ ಚಿಂತಕ ಶ್ರೀಪಾದ ಭಟ್‌ ಅವರು ‘ಹೊಸ ಶಿಕ್ಷಣ ನೀತಿ ಮೂಲಕ ಬ್ರಾಹ್ಮಣವಾದ ಮತ್ತು ಉನ್ನತ ಶಿಕ್ಷಣದಲ್ಲಿ ದಲಿತರ ಸ್ಥಿತಿಗತಿಗಳು’ ವಿಷಯ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 2ಕ್ಕೆ ನಡೆಯುವ ಐದನೇ ಗೋಷ್ಠಿಯಲ್ಲಿ ‘ಮೂಲ ನಿವಾಸಿಗಳೇ ನೀವೆಷ್ಟು ಬಲ್ಲಿರಿ ನಿಮ್ಮ ಇತಿಹಾಸ?’ ಎಂಬ ವಿಷಯದ ಕುರಿತು ಹಿರಿಯ ಪತ್ರಕರ್ತ ಸನತ್‌ಕುಮಾರ್‌ ಬೆಳಗಲಿ ವಿಷಯ ಮಂಡಿಸಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ನಡೆಯುವ ಆರನೇ ಗೋಷ್ಠಿಯಲ್ಲಿ ‘ದಲಿತ ಚಳವಳಿಯ ಮುಂದಿನ ಸವಾಲುಗಳು ಹಾಗೂ ಬಲವರ್ಧನೆ’ ಕುರಿತು ಮೈಸೂರಿನ ವಿಚಾರವಾದಿ ಡಾ.ತುಕಾರಾಂ ಉಪನ್ಯಾಸ ನೀಡಲಿದ್ದಾರೆ.

ಸಂಜೆ 5.30ಕ್ಕೆ ನಡೆಯುವ ಏಳನೇ ಗೋಷ್ಠಿಯಲ್ಲಿ ಪ್ರೊ.ಜಿ.ಕೆ.ಗೋವಿಂದರಾವ್‌ ಕುರಿತು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ವಿಕ್ರಂ ವಿಸಾಜೆ, ಡಾ. ಸಿದ್ದಲಿಂಗಯ್ಯ ಕುರಿತು ಕಲಬುರಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಡಾ.ಅಪ್ಪಗೆರೆ ಸೋಮಶೇಖರ ಮತ್ತು ಸುರೇಶ ಮಣ್ಣೂರ ಕುರಿತು ಹಿರಿಯ ಪತ್ರಕರ್ತ ಅನಿಲ ಹೊಸಮನಿ ಮಾತನಾಡಲಿದ್ದಾರೆ.

ಏಪ್ರಿಲ್‌ 10ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಎಂಟನೇ ಗೋಷ್ಠಿಯಲ್ಲಿ ‘ದಲಿತ ಸಮುದಾಯದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು’ ಕುರಿತು ತಾಳಿಕೋಟೆಯ ಎಸ್‌.ಕೆ.ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಸುಜಾತಾ ಚಲವಾದಿ ಉಪನ್ಯಾಸ ನೀಡಲಿದ್ದಾರೆ.

ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಒಂಬತ್ತನೇ ಗೋಷ್ಠಿಯಲ್ಲಿ ‘ಭೂಮಿ, ಉದ್ಯಮಶೀಲತೆ, ಕೈಗಾರಿಕರಣ, ಕೌಶಲ ಮತ್ತು ಮೀಸಲಾತಿ’ ಕುರಿತು ಬೆಂಗಳೂರಿನ ಎಸ್‌ಸಿ, ಎಸ್‌ಟಿ ಕೈಗಾರಿಕೋದ್ಯಮ ಸಂಘದ ಕಾರ್ಯದರ್ಶಿ ಸಿ.ಜಿ.ಶ್ರೀನಿವಾಸ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 1ಕ್ಕೆ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು