ವಿಜಯಪುರ: ಶಿಕ್ಷಣ ಎಂಬ ದಿವ್ಯ ಬೆಳಕನ್ನು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಗಿಸಿದ ಶ್ರೇಯಸ್ಸು ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ.ಪಾಟೀಲ ಸಮುದಾಯ ಭವನದಲ್ಲಿ ದಿ. ಶ್ರೀ ಲಿಂಗರಾಜ ವಿವಿಧೋದ್ಧೇಶ ಸಂಸ್ಥೆ, ಶ್ರೀ ಶಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘ ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿರಸಂಗಿ ಲಿಂಗರಾಜ ಮಹಾರಾಜರು ಶಿಕ್ಷಣವೇ ಶಕ್ತಿ ಎಂದು ತಿಳಿದಿದ್ದರು. ಹೀಗಾಗಿ ತಮ್ಮ ಅಪಾರ ಸಂಪತ್ತನ್ನು ಶಿಕ್ಷಣದ ಪವಿತ್ರ ಕಾರ್ಯಕ್ಕೆ ಬಳಕೆಯಾಗಬೇಕು ಎಂದು ದಾನ ಮಾಡಿದರು. ಪರಿಣಾಮವಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಬೆಳೆದು ಜ್ಞಾನ ದಾಸೋಹ ನೀಡಲು ಸಾಧ್ಯವಾಯಿತು ಎಂದರು.
ಅಂದು ಶಿರಸಂಗಿ ಲಿಂಗರಾಜ ಮಹಾರಾಜರ ದೂರದೃಷ್ಟಿ ಹಾಗೂ ತ್ಯಾಗಗುಣದ ಫಲವಾಗಿ ಲಕ್ಷಾಂತರ ಜನರಿಗೆ ಶಿಕ್ಷಣ ಎಂಬ ವರದಾನ ಪ್ರಾಪ್ತವಾಯಿತು. ಅವರ ತ್ಯಾಗ, ಶ್ರಮದ ಫಲವಾಗಿ ಕೆ.ಎಲ್.ಇ., ಬಿಎಲ್‌ಡಿಇ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ ಮಾತನಾಡಿ, ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರು ಶಿಕ್ಷಣಕ್ಕಾಗಿ ತಮ್ಮ ಸಂಪತ್ತು ದಾನ ಮಾಡಿದ ಮಹಾನ್ ಶಿಕ್ಷಣ ಪ್ರೇಮಿ, ಅವರ ತ್ಯಾಗ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ನಾವು ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ಜಿ.ಪಂ.ಮಾಜಿ ಸದಸ್ಯೆ ಪ್ರತಿಭಾಗೌಡತಿ ಪಾಟೀಲ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹ ಅಗತ್ಯ, ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡುವುದರಿಂದ ಇತರರಿಗೂ ಸ್ಪೂರ್ತಿ ದೊರಕುತ್ತದೆ, ಪ್ರತಿಭಾ ಪುರಸ್ಕಾರ ಒಂದು ಮಹತ್ವಪೂರ್ಣ ಕಾರ್ಯ ಎಂದರು.
ಇಂಡಿಯ ಸಿದ್ಧರಾಮೇಶ್ವರ ಮಠದ ಸದ್ಗುರು ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದರು. ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ, ಶಿರಸಂಗಿ ಲಿಂಗರಾಜ ಸಂಸ್ಥೆ ಅಧ್ಯಕ್ಷ ಸುರೇಶಗೌಡ ಪಾಟೀಲ, ಎಸ್. ಎ. ಬಿರಾದಾರ (ಕನ್ನಾಳ), ಆರ್. ಎಸ್. ಜನಗೊಂಡ ಇದ್ದರು.