ಪರಮೇಶ್ವರ ಎಸ್. ಗದ್ಯಾಳ
ತಿಕೋಟಾ: ಸರ್ಕಾರಿ ಶಾಲೆಯ ಅಭಿವೃದ್ಧಿ ಹಾಗೂ ಉಳಿವಿಗಾಗಿ ಸರ್ಕಾರಿ ಶಾಲೆಗಳ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ‘ಜೇನುಗೂಡು’ ಎಂಬ ಶಿಕ್ಷಕರ ತಂಡವು ಪ್ರತಿ ತಿಂಗಳು ತಮ್ಮ ತಂಡದ ಸದಸ್ಯರಿಂದ ಹಣ ಸಂಗ್ರಹಿಸಿ ಆಯ್ದ ಶಾಲೆಗೆ ಅಗತ್ಯವಿರುವ ಸಾಮಗ್ರಿ ಖರೀದಿಸಿ ನೀಡುತ್ತ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ.
ವಿಜಯಪುರ ಗ್ರಾಮೀಣ ತಾಲ್ಲೂಕಿನ ಶಿವಣಗಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ 46 ಶಿಕ್ಷಕರು ಸೇರಿ ‘ಜೇನೂಗೂಡು’ ಎಂಬ ಹೆಸರಿನ ತಂಡ ಕಟ್ಟಿದ್ದಾರೆ. ತಂಡದ ಪ್ರತಿ ಶಿಕ್ಷಕರು ಪ್ರತಿ ತಿಂಗಳು ₹ 100 ರಂತೆ ಸಂಗ್ರಹಿಸಿ ಒಟ್ಟು 46 ಶಿಕ್ಷಕರು ₹ 4,600 ಸಂಗ್ರಹಿಸುತ್ತಾರೆ.
ಶಿವಣಗಿ ಕ್ಲಸ್ಟರದ ವ್ಯಾಪ್ತಿಯಲ್ಲಿ 12 ಸರ್ಕಾರಿ ಶಾಲೆಗಳಿವೆ. ಆ ಹನ್ನೆರಡು ಶಾಲೆಗಳ ಹೆಸರುಗಳ ಚೀಟಿಗಳನ್ನು ಹಾಕಿ ಒಂದು ಶಾಲೆಯ ಚೀಟಿಯನ್ನು ಎತ್ತಲಾಗುತ್ತದೆ. ಆ ಚೀಟಿಯಲ್ಲಿ ಆಯ್ಕೆಯಾದ ಶಾಲೆಗೆ ತೆರಳಿ ಈ ತಂಡವು ಆ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಶಾಲೆಯ ಮಕ್ಕಳ ಕಲಿಕೆಗೆ ಯಾವ ಅಗತ್ಯ ಸಾಮಗ್ರಿ ಬೇಕು ಎಂದು ಕೇಳಿ, ಅದನ್ನು ಖರೀದಿಸಿ ಕೊಡುವ ಕೆಲಸ ಮಾಡುತ್ತಿದೆ. ಹೀಗೆ ಪ್ರತಿ ತಿಂಗಳೂ ಬೇರೆ ಬೇರೆ ಶಾಲೆಗೆ ಕಲಿಕಾ ಸಾಮಗ್ರಿ ಪೂರೈಸುತ್ತಾರೆ.
ಇಲ್ಲಿಯವರೆಗೆ ಆರು ಶಾಲೆಗಳಿಗೆ ಪೂರೈಕೆ: ಜನೆವರಿ ತಿಂಗಳಲ್ಲಿ ಎಲ್.ಪಿ.ಎಸ್ ಹೂವಿನಹರಿ ಶಾಲೆಗೆ ಕುಡಿಯುವ ನೀರಿನ ಫಿಲ್ಟರ್, ಮಕ್ಕಳಿಗೆ ಆಟಿಕೆ ಸಾಮಗ್ರಿ, ಫೆಬ್ರುವರಿಯಲ್ಲಿ ಎಲ್.ಪಿ.ಎಸ್. ಶಿವಣಗಿ ಎಚ್.ಕೆ ಶಾಲೆಗೆ ಕುಕ್ಕರ್ ಹಾಗೂ ವಾಟರ್ ಫಿಲ್ಟರ್, ಮಾರ್ಚ್‌ದಲ್ಲಿ ಎಲ್.ಪಿ.ಎಸ್. ಜಿರಗಳ ಶಾಲೆಗೆ ವಾಟರ್ ಫಿಲ್ಟರ್ ಹಾಗೂ ಡ್ರ್ಂಸೆಟ್, ಏಪ್ರಿಲ್‌ನಲ್ಲಿ ಎಲ್.ಪಿ.ಎಸ್. ಹಡಗಲಿ ಎಲ್.ಟಿ ಶಾಲೆಗೆ ಅಡುಗೆ ಮಾಡಲು ಕುಕ್ಕರ್, ಮೇ ದಲ್ಲಿ ಎಚ್.ಪಿ.ಎಸ್ ಹಡಗಲಿ ಶಾಲೆಗೆ ಮೂರು ಜಮಖಾನೆ, ಜೂನ್‌ನಲ್ಲಿ ಎಂಪಿಎಸ್ ಶಿವಣಗಿ ಶಾಲೆಗೆ ನಲಿಕಲಿ ಮಕ್ಕಳಿಗೆ 33 ಕುರ್ಚಿಗಳನ್ನು ನೀಡಲಾಗಿದೆ.
ಆರಂಭದಲ್ಲಿ 22 ಶಿಕ್ಷಕರನ್ನು ಒಳಗೊಂಡು ಆರಂಭಿಸಿದ ಈ ಕಾರ್ಯ ಇಂದು 46 ಶಿಕ್ಷಕ ಸದಸ್ಯರನ್ನು ಹೊಂದಿದೆ. ಶಿವಣಗಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಈ ಸೇವೆ ನೀಡುತ್ತೇವೆ. ನಂತರ ಪ್ರತಿ ತಿಂಗಳು ಇನ್ನೂ ಹೆಚ್ಚು ಹಣ ಸಂಗ್ರಹ ಮಾಡಿ ಬೇರೆ ಬೇರೆ ಕ್ಲಸ್ಟರ್ ಶಾಲೆಗಳಿಗೂ ಅಗತ್ಯ ಸಾಮಗ್ರಿ ಪೂರೈಸಿ ಸೇವೆ ಸಲ್ಲಿಸುತ್ತೇವೆ. ಬೇರೆ ಕ್ಲಸ್ಟರ್ ಶಿಕ್ಷಕರು ಕೂಡ ನಮ್ಮ ‘ಜೇನುಗೂಡು’ ತಂಡದ ಸದಸ್ಯರಾಗುತ್ತಿರುವದರಿಂದ ತಂಡ ಬೆಳಯುತ್ತಿದೆ ಎಂದು ಶಿಕ್ಷಕ ಸಂತೋಷ ಹದರಿ, ವಸೀಂ ಚಟ್ಟರಕಿ, ಆನಂದ ಮೂಲಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜೇನೂಗೂಡು ಶಿಕ್ಷಕರ ತಂಡ ಮಾಡುವ ಈ ಕಾರ್ಯಕ್ಕೆ ಬಿಇಒ ಆಂಜನೇಯಲು ಆರ್.ಕೆ. ಎಂ.ಎ. ಗುಳೇದಗುಡ್ಡ, ಎಸ್.ಡಿ. ಮೊಸಲಗಿ ಶುಭ ಹಾರೈಸಿದ್ದಾರೆ.
ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ ಶಿಕ್ಷಕರ ಈ ಕಾರ್ಯ ಶ್ಲಾಘನೀಯ. ಈ ಗುರುಗಳಿಗೆ ಅಭಿನಂದನೆಗಳು.ಎನ್.ಎಚ್. ನಾಗೂರ ಡಿಡಿಪಿಐ ವಿಜಯಪುರ
ಸರ್ಕಾರಿ ಶಾಲೆಗಳಿಗೆ ಹೊಸತನದಿಂದ ಕೊಡುಗೆ ನೀಡುವ ಆಶಾಭಾವದಿಂದ ಮಕ್ಕಳ ಕಲಿಕೆಗೆ ಶಿಕ್ಷಕರ ಬೋಧನೆಗೆ ಹಾಗೂ ಶಾಲೆಗೆ ಅವಶ್ಯವಿರುವ ಸಾಮಗ್ರಿ ಖರೀದಿಗೆ ಕ್ಲಸ್ಟರ್ ಶಿಕ್ಷಕರ ಸ್ಪಂದನೆ ಉತ್ತಮವಾಗಿದೆಎಂ.ಎಸ್. ಗುಬಚಿ ಸಿಆರ್‌ಪಿ ಶಿವಣಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.