ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮ, ಪಕ್ಷ, ಸಿದ್ದಾಂತ ರಹಿತ ಶಿಕ್ಷಣ ಅಗತ್ಯ’

Last Updated 4 ಜುಲೈ 2022, 15:41 IST
ಅಕ್ಷರ ಗಾತ್ರ

ವಿಜಯಪುರ: ಶಿಕ್ಷಣ ಶಿಕ್ಷಣವಾಗಿಯೇ ಉಳಿಸಬೇಕಿದೆ. ಅದಕ್ಕೆ ಜನಿವಾರ, ಶಿವದಾರ ಅಥವಾ ಲಿಂಗದೀಕ್ಷೆಮಾಡಬಾರದು. ಯಾವೊಂದು ಧರ್ಮ, ಪಕ್ಷ, ಸಿದ್ದಾಂತ, ರಾಜಕೀಯ ಚಿಂತನೆಗಳನ್ನು ಶಿಕ್ಷಣರಂಗದಲ್ಲಿ ತೂರಿಸಬಾರದು ಎಂದು ಸಾಹಿತಿ ಸುಭಾಷ ಯಾದವಾಡ ಹೇಳಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಂಡ ಪಠ್ಯಕ್ರಮ ತಿರುಚುವಿಕೆಯ ಗೊಂದಲ ‘ಶಿಕ್ಷಣಪ್ರೇಮಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಐತಿಹಾಸಿಕವಾಗಿ ಧರ್ಮಗಳನ್ನು ತಿಳಿದುಕೊಳ್ಳುವುದು ಬೇರೆ ಮತ್ತು ಅವುಗಳನ್ನು ಮಕ್ಕಳ ಮನಸ್ಸಲ್ಲಿ ಉದ್ದೇಶಪೂರ್ವಕವಾಗಿ ಬಿತ್ತವುದೇ ಬೇರೆ. ಮಕ್ಕಳ ಮನಸ್ಸು ಸ್ವಚ್ಚ ಮತ್ತು ಶುಭ್ರವಾದ ಬಿಳಿ ಹಾಳೆ ಇದ್ದಂತೆ ಅಲ್ಲಿ ಒಳ್ಳೆಯತನ, ಆದರ್ಶಯುತವಾದ ಮೌಲ್ಯಗಳನ್ನು ಬಿತ್ತಬೇಕೇ ಹೊರತು ಕಲ್ಮಶವನ್ನು ಬಿತ್ತಬಾರದು ಎಂದರು.‌

‌ಪ್ರಗತಿಪರ ಚಿಂತಕ ಡಾ. ಜೆ.ಎಸ್.ಪಾಟೀಲ ಮಾತನಾಡಿ, ರೋಹಿತ್ ಚಕ್ರತಿರ್ಥ ಇಲ್ಲಿ ನೆಪ ಮಾತ್ರ ಇಂದಿನ ಎಲ್ಲಾ ನೀತಿಗಳು ಸರ್ಕಾರ ತೆಗೆದುಕೊಳ್ಳುತ್ತಿಲ್ಲ ಬದಲಾಗಿ ‘ಕೇಶವ ಕೃಪಾ’ ತೆಗೆದುಕೊಳ್ಳುತ್ತಿದೆ. ಪಠ್ಯಕ್ರಮ ಮರು ಪರಿಷ್ಕರಣೆಯ ಹೆಸರಲ್ಲಿ ಆರ್.ಎಸ್.ಎಸ್. ಶಾಖೆಗಳಲ್ಲಿ ಹೇಳುವ ಪಾಠಗಳನ್ನು ಜೊತೆಗೆ ಈ ಸಮಾಜವನ್ನು ಬೆಂಬಿಡದೆ ಕಾಡಿದ ಪುರೋಹಿತಶಾಹಿ ವಿಚಾರಗಳನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ ಎಂದರು.

ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷ ವಿ.ಎನ್. ರಾಜಶೇಖರ ಮಾತನಾಡಿ, ಶಿಕ್ಷಣ ಉಳಿಸಿ ಸಮಿತಿಯು ಈ ಹಿಂದೆ ಕಾಂಗ್ರೆಸ್ ಸರ್ಕಾರ ಪುಸ್ತಕ ತಿರುಚಿದಾಗಲೂ ದ್ವನಿ ಎತ್ತಿ ಸರಿಪಡಿಸಿದ್ದೇವು, ಇದೀಗ ಬಿಜೆಪಿ ಸರ್ಕಾರದ ವಿರುದ್ದವೂ ದ್ವನಿ ಎತ್ತುತ್ತಿದ್ದೇವೆ. ನಮ್ಮ ಹೋರಾಟ ಶಿಕ್ಷಣಕ್ಕಾಗಿಯೇ ಹೊರತು ಯಾವುದೇ ರಾಜಕೀಯಕ್ಕಾಗಿ ಅಲ್ಲ ಎಂದರು.

ಭಗತ್‍ಸಿಂಗ್‍ರವರ ಪಾಠವನ್ನು ಕೈ ಬಿಟ್ಟ ಸರ್ಕಾರ ರಾಷ್ಟ್ರಮಟ್ಟದಲ್ಲಿ ಛೀಮಾರಿಹಾಕಿಸಿಕೊಂಡು ಮತ್ತೆ ಅದನ್ನು ಅಳವಡಿಸಿಕೊಂಡಿತು. ಆದರೆ, ಸಂಪೂರ್ಣವಾಗಿ ತಿರುಚಿರವ ಎಲ್ಲಾ ಭಾಗಗಳನ್ನು ಕೈ ಬಿಡಲಿಲ್ಲ ಬದಲಾಗಿ ಈಗ ಕಣ್ನೊರೆಸುವ ತಂತ್ರವಾಗಿ ‘ತಿದ್ದೋಲೆ’ಯಂಥ ಕ್ರಮ ಕೈಗೊಂಡಿದೆ. ಇದು ಕೂಡಾ ರಾಜ್ಯದ ಆಕ್ರೋಶಭರಿತ ಜನಗಳಿಗೆ ಕಣ್ಣೊರೆಸುವ ತಂತ್ರವಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ವಿ.ಎ.ಪಾಟೀಲ ಮಾತನಾಡಿ, ಸರ್ಕಾರ ಪರಿಷ್ಕರಣೆ ಮಾಡಲೇ ಬೇಕೆಂದಿದ್ದರೆ ಒಂದು ವೈಜ್ಞಾನಿಕ ಮತ್ತು ಪ್ರಜಾತಾಂತ್ರಿಕ ಪ್ರಕ್ರೀಯೆಯಲ್ಲಿ ಪರಿಷ್ಕರಣೆ ಮಾಡಿ ಪ್ರಕಟಿಸಲಿ ಆದರೆ, ತರಾತುರಿಯಲ್ಲಿ ಪರಿಷ್ಕರಣೆ ಮಾಡಿ ವಿದ್ಯಾರ್ಥಿಗಳಿಗೆ ಅಜ್ಞಾನವನ್ನು ಬೋಧಿಸುವಂತಾಗಬಾರದು ಎಂದರು.

ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಚ್.ಟಿ.ಭರತಕುಮಾರ, ಪಾಲಕರು, ಪೋಷಕರು, ಶಿಕ್ಷಣ ಪ್ರೇಮಿಗಳು, ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT