ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಟಾಪರ್‌ಗಳಿಗೆ ಶೈಕ್ಷಣಿಕ ಪ್ರವಾಸ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪ್ರವಾಸಕ್ಕೆ ಡಿಸಿ, ಸಿಇಒ ಚಾಲನೆ
Published 1 ಜೂನ್ 2023, 15:31 IST
Last Updated 1 ಜೂನ್ 2023, 15:31 IST
ಅಕ್ಷರ ಗಾತ್ರ

ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಮಾಹಿತಿಯ ಅರಿವು ಅತ್ಯವಶ್ಯಕ. ಈ ಎಲ್ಲ ಮಾಹಿತಿ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ 60 ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಮಕ್ಕಳಿಗೆ ಪ್ರವಾಸ ಕಿಟ್ ವಿತರಿಸಿ ಮಾತನಾಡಿದರು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯು 11ನೇ ಸ್ಥಾನ ಪಡೆದಿದ್ದು, ಶೈಕ್ಷಣಿಕ ಬೆಳವಣಿಗೆಗೆ, ಮಕ್ಕಳ ಅಭಿವೃದ್ಧಿಗಾಗಿ ಹಲವರ ಶ್ರಮಕ್ಕೆ ಸಾರ್ಥಕತೆ ದೊರೆತಿದಂತಾಗಿದೆ. ಜಿಲ್ಲೆಯ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಮಿಷನ್ ವಿದ್ಯಾಪುರ, ಆನ್‍ಲೈನ್ ಕೋಚಿಂಗ್ ಸೇರಿದಂತೆ ಉತ್ತಮ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪ್ರವಾಸ ಕಾರ್ಯಕ್ರಮ ಇನ್ನಷ್ಟು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಾಧನೆ ಮಾಡಲು ಪ್ರೇರಣೆಯಾಗಬೇಕು. ವಿವಿಧ ಸಮಸ್ಯೆಗಳಿಂದ ಹೊರಬರಲು ಶಿಕ್ಷಣ ಅಗತ್ಯ. ಪ್ರವಾಸದಿಂದ ವಿಶೇಷ ಅನುಭವ ಪಡೆದು ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆಗೇರಬೇಕು. ಕೋಶ ಓದು, ದೇಶ ಸುತ್ತು ಎನ್ನುವಂತೆ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನ ಹೊಂದಲು ಪ್ರವಾಸದಂತಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಯೂ ಅತ್ಯವಶ್ಯಕವಾಗಿದೆ. ಶೈಕ್ಷಣಿಕ ಪ್ರವಾಸದಂತಹ ಕಾರ್ಯಕ್ರಮಗಳ ಅನುಭವ ಜೀವನದ ಸಮಸ್ಯೆಗಳ ನಿವಾರಣೆ ಸಹಕಾರಿಯಾಗಲಿದೆ ಎಂದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತು ಉನ್ನತ್ತ ದರ್ಜೆಯಲ್ಲಿ ಪಾಸಾದ ಜಿಲ್ಲಾ ವ್ಯಾಪ್ತಿಯಲ್ಲಿ ಟಾಪ್ ಆದ 60 ವಿದ್ಯಾರ್ಥಿಳು ಬೆಂಗಳೂರಿಗೆ ಶೈಕ್ಷಣಿಕ ಪ್ರವಾಸಕ್ಕೆ ಹೊರಡುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ 30 ಮಕ್ಕಳು ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾಂತರ ಇಲಾಖೆಯಿಂದ ಸಾಧನೆ ಮಾಡಿದ 30 ಜನ ಮಕ್ಕಳೂ ಸೇರಿದಂತೆ 60 ಜನ ಮಕ್ಕಳು ಆಯ್ಕೆಯಾಗಿದ್ದಾರೆ ಎಂದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸರ್ಕಾರಿ ಶಾಲೆಯಲ್ಲಿ ಕಲಿತು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಜೊತೆ ಸಂವಾದ, ಮಕ್ಕಳಿಗೆ ಮೇಟ್ರೋ ರೈಲಿನ ಪ್ರವಾಸವೂ ಇದೆ.  9 ಮತ್ತು 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಓದಿನೆಡೆಗೆ ಒಲವು ಹೆಚ್ಚಿಸಿಕೊಳ್ಳಲು ಈ ಪ್ರವಾಸ ಕಾರ್ಯಕ್ರಮ ಸಹಾಯಕಾರಿಯಾಗಲಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಯಲ್ಲಮ್ಮ ಪಡೇಸೂರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿರಹಟ್ಟಿಮಠ, ಜಿ.ಪಂ.ನಿಂಗಪ್ಪ ಗೋಠೆ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಇದ್ದರು.

60 ವಿದ್ಯಾರ್ಥಿಗಳಿಗೆ ಪ್ರವಾಸ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಪ್ರೇರಣೆ ಮಕ್ಕಳ ಸರ್ವೊತೋಮುಖ ಅಭಿವೃದ್ಧಿಗೆ ಸಹಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT