ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ ಉಲ್ ಫಿತ್ರ್; ಈದ್ಗಾ, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ಜಿಲ್ಲೆಯಾದ್ಯಂತ ರಂಜಾನ್‌ ಸಂಭ್ರಮ; ಮೊಳಗಿದ ಅಲ್ಲಾಹು ಅಕ್ಬರ್
Last Updated 3 ಮೇ 2022, 13:20 IST
ಅಕ್ಷರ ಗಾತ್ರ

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರುಮಂಗಳವಾರ ರಂಜಾನ್ ಅಂಗವಾಗಿ 'ಈದ್-ಉಲ್-ಫಿತ್ರ್' ಅನ್ನು ಸಂಭ್ರಮದಿಂದ ಆಚರಿಸಿದರು.

ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಮನೆಗಷ್ಟೇ ಸೀಮಿತವಾಗಿದ್ದ ಹಬ್ಬವನ್ನು ಈ ಬಾರಿ ಸಾಮೂಹಿಕವಾಗಿ ಆಚರಿಸುವ ಮೂಲಕ ಮುಸ್ಲಿಮರು ಸಂಭ್ರಮಿಸಿದರು. ಸಾಮೂಹಿಕ ಪ್ರಾರ್ಥನೆ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯಪುರದ ನಗರದ ಐತಿಹಾಸಿಕ ದಖನಿ ಈದ್ಗಾ ಮೈದಾನದಲ್ಲಿ ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಉಳಿದಂತೆದಾತ್ರಿ ಮಸೀದಿ, ಬುಖಾರಿ ಮಸೀದಿ, ನವಾಬ್ ಮಸೀದಿ, ಜಾಮೀಯಾ ಮಸೀದಿ, ಈದ್ಗಾ, ಇಬ್ರಾಹಿಂ ರೋಜಾ ಮಸೀದಿ, ಖಾಲಿ ಮಸೀದಿ, ಬಾರಾಟಾಂಗ್‌ ಮಸೀದಿ, ನೌ ಗುಂಬಜ್, ಖಾಜಾ ಅಮಿನ್‌ ದರ್ಗಾ ಮಸೀದಿ, ಹಾಸಿಂಪೀರ ದರ್ಗಾ ಮಸೀದಿ ಸೇರಿದಂತೆ ನಗರದ ಪ್ರಮುಖ ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ನಮಾಜ್ ನಂತರ ‘ಖುತ್ಬಾ’ ಹಾಗೂ ಧರ್ಮಗುರುಗಳಿಂದ ವಿಶೇಷ ಪ್ರವಚನ ನಡೆಯಿತು.

ಮುಸ್ಲಿಂ ಬಾಂಧವರು ‘ಅಲ್ಲಾಹು ಅಕ್ಬರ್....ಅಲ್ಲಾಹು ಅಕ್ಬರ್...’ ಎಂದು ತಖ್ಬೀರ್ ಹೇಳುತ್ತಾ ಮಸೀದಿಗಳಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯ ಎಲ್ಲೆಡೆ ಗೋಚರಿಸಿತು. ನಂತರ ಎಲ್ಲ ಮಸೀದಿಗಳಲ್ಲಿಯೂ ಭಾರತ ದೇಶದ ಪ್ರತಿಯೊಬ್ಬ ನಿವಾಸಿಗಳ ಕಲ್ಯಾಣಕ್ಕಾಗಿ ದುವಾ ಮಾಡಲಾಯಿತು.

ಹಾಲು, ಒಣ ಹಣ್ಣುಗಳಿಂದ ತಯಾರಿಸಿದ ವಿಶೇಷ ಪಾಯಸ ಸುರುಕುರ್ಮಾ,ಬಿರಿಯಾನಿ ಸೇರಿದಂತೆ ಬಗೆಬಗೆಯ ಭಕ್ಷ್ಯ ಭೋಜನ ಸವಿದರು. ಬಂಧು ಬಾಂದವರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ, ಆಥಿತ್ಯ ನೀಡಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷಎಂ.ಬಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮುಖಂಡ ಅಬ್ದುಲ್‍ಹಮೀದ್ ಮುಶ್ರೀಫ್ ಅವರು ದಖನಿ ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಷಯ ಕೋರಿದರು

‘ಹಲಾಲ್, ಹಿಜಾಬ್ ವಿವಾದ: ಧೃತಿಗೆಡಬೇಡಿ’
ವಿಜಯಪುರ:
ಹಲಾಲ್, ಹಿಜಾಬ್ ಮೊದಲಾದ ವಿಷಯವಾಗಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಆದರೆ, ಮುಸ್ಲಿಮರು ಇದಕ್ಕೆ ಧೃತಿಗೆಡಬಾರದು ಎಂದು ಮುಸ್ಲಿಂ ಧರ್ಮಗುರು ಹಜರತ್ ಸೈಯ್ಯದ್ ತನ್ವೀರಪೀರಾ ಹಾಶ್ಮೀ ಹೇಳಿದರು.

ದಖನಿ ಈದ್ಗಾದಲ್ಲಿ ಸಂಪ್ರದಾಯದಂತೆ ಈದ್-ಉಲ್-ಫಿತರ್ ಪ್ರಯುಕ್ತ ನಡೆದ ವಿಶೇಷ ವಾಜಿಬ್ ನಮಾಜ್ ನಂತರ ಪ್ರವಚನ ನೀಡಿದ ಅವರು, ಸಹೋದರರಂತಿರುವ ಹಿಂದೂ ಮುಸ್ಲಿಂರಲ್ಲಿ ದ್ವೇಷದ ಗೋಡೆ ನಿರ್ಮಾಣ ಮಾಡಲಾಗುತ್ತಿದೆ, ಈ ದ್ವೇಷದ ಗೋಡೆಯನ್ನು ಒಡೆದು ಹಾಕಬೇಕು.ಹಿಂದೂ-ಮುಸ್ಲಿಮರು ಎರಡು ಕಣ್ಣುಗಳಿದ್ದಂತೆ, ಸಹೋದರತೆ ಬದುಕಬೇಕುಎಂದರು.

ದೇಶದ ಸಂವಿಧಾನ, ಕಾನೂನು ಏನು ಹೇಳುತ್ತದೆಯೋ ಹಾಗೆ ಮಾಡಬೇಕು, ಭಾರತೀಯ ಸಂವಿಧಾನ ಶ್ರೇಷ್ಠ ಸಂವಿಧಾನ, ಈ ಸಂವಿಧಾನದ ಆಶಯಗಳನ್ನು ನಾವು ಈಡೇರಿಸುವ ಕೆಲಸ ಮಾಡೋಣ, ದೇಶದ ಪವಿತ್ರ ಕಾನೂನನ್ನು ಗೌರವಿಸೋಣ ಎಂದರು.

ಪ್ರವಾದಿ ಹಜರತ್ ಮೊಹ್ಮದ್‍ ಪೈಗಂಬರ್ ಅವರ ಆದರ್ಶ, ಚಿಂತನೆಗಳನ್ನು ನಾವು ಅಳವಡಿಸಿಕೊಂಡು ಮುನ್ನಡೆಯೋಣ, ಹಸಿದವನಿಗೆ ಊಟ ನೀಡಿ, ಎಲ್ಲರ ಮೇಲೆ ಶಾಂತಿ ಇರಲಿ ಎಂಬ ಪ್ರವಾದಿ ಅವರ ಉನ್ನತ ತತ್ವಗಳು ನಮ್ಮ ಜೀವನಮಂತ್ರವಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT