ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ 10ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೆಪ್ಟೆಂಬರ್ 6ರಂದು ಮಧ್ಯಾಹ್ನ 3 ಗಂಟೆಗೆ ಚುನಾವಣೆ ನಿಗದಿಯಾಗಿದ್ದು, ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಭವನದಲ್ಲಿ ಜರುಗಲಿದೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಪ್ರಕಾಶ ಸಿಂದಗಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷರ ಹುದ್ದೆ ಹಿಂದುಳಿದ ವರ್ಗ(ಅ) ಮತ್ತು ಉಪಾಧ್ಯಕ್ಷರ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದ್ದು, ಸೆ.6ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗಾಗಿ ನಾಮಪತ್ರಗಳನ್ನು ಸಲ್ಲಿಸಬೇಕು. 3 ಗಂಟೆಗೆ ಸಭೆ ಪ್ರಾರಂಭವಾಗಿ ನಂತರ 3.10ರಿಂದ 3.20ರ ವರೆಗೆ ನಾಮಪತ್ರಗಳನ್ನು ಪರಿಶೀಲಿಸುವುದು. 3.20ರಿಂದ 3.25ರ ವರೆಗೆ ನಾಮಪತ್ರ ಹಿಂಪಡೆದುಕೊಳ್ಳುವುದು. ನಂತರ 3.30ಕ್ಕೆ ಕೈ ಎತ್ತುವ ಮೂಲಕ ಅಧ್ಯಕ್ಷರ ಸ್ಥಾನಕ್ಕಾಗಿ ಮತಗಳ ಚಲಾವಣೆ ಹಾಗೂ ಚುನಾವಣಾ ಪ್ರಕ್ರಿಯೆ ಜರುಗಲಿದೆ. ಅಧ್ಯಕ್ಷರ ಚುನಾವಣೆಯ ನಂತರ ಉಪಾಧ್ಯಕ್ಷರ ಸ್ಥಾನಕ್ಕಾಗಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಮತಗಳ ಚಲಾವಣೆ ಮುಗಿಯಲಿದೆ ಎಂದು ತಿಳಿಸಿದ್ದಾರೆ.
ಒಟ್ಟು 17 ಜನ ಸದಸ್ಯಬಲದ ಪಟ್ಟಣ ಪಂಚಾಯಿತಿಗೆ 2021ರ ಡಿಸೆಂಬರ್ ನಲ್ಲಿ ಸದಸ್ಯರಾಗಿ ಬಿಜೆಪಿಯಿಂದ 4, ಕಾಂಗ್ರೆಸ್‌ನಿಂದ 7, ಜೆಡಿಎಸ್‌ನಿಂದ 4 ಹಾಗೂ ಪಕ್ಷೇತರರಾಗಿ ಇಬ್ಬರು ಆಯ್ಕೆಯಾಗಿದ್ದರು.