ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪರಿಸರ ಪ್ರೇಮಿ ಪಾಟೀಲಗೆ ರಾಜ್ಯೋತ್ಸವ ಗರಿ

ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಸರ್ಕಾರಿ ನಿವೃತ್ತ ಉದ್ಯೋಗಿ
Last Updated 28 ಅಕ್ಟೋಬರ್ 2020, 13:02 IST
ಅಕ್ಷರ ಗಾತ್ರ

ವಿಜಯಪುರ: ‘ಗುಮ್ಮಟ ನಗರಿ’ ನಗರಿ ವಿಜಯಪುರ ಸೇರಿದಂತೆ ಜಿಲ್ಲೆಯ ಬರಡು ಭೂಮಿಯಲ್ಲಿ ಸಾವಿರಾರು ಗಿಡಮರಗಳನ್ನು ನೆಟ್ಟು, ಪೋಷಿಸಿ ಹಸಿರಿನ ಪರಿಸರವನ್ನು ನಿರ್ಮಿಸಿರುವ ಪರಿಸರ ಪ್ರೇಮಿ ಎನ್‌.ಡಿ.ಪಾಟೀಲ(ನಾನಾ ಸಾಹೇಬ ದ್ಯಾಮನಗೌಡ ಪಾಟೀಲ) ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.

38 ವರ್ಷಗಳ ಕಾಲ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ, ಉಪ ತಹಶೀಲ್ದಾರ್‌ ಆಗಿನಿವೃತ್ತರಾಗಿರುವ ಎನ್‌.ಡಿ.ಪಾಟೀಲರು ಇಳಿ ವಯಸ್ಸಿನಲ್ಲೂ ಗಿಡ,ಮರಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡುವ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಪರಿಸರ ಕ್ಷೇತ್ರದಲ್ಲಿ ನಾನು ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆಯೇ ಹೊರತು; ಪ್ರಶಸ್ತಿಗಾಗಿ ಕೆಲಸ ಮಾಡಿರಲಿಲ್ಲ. ಅರ್ಜಿ ಹಾಕದಿದ್ದರೂ ನನ್ನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ’ ಎಂದರು.

ಮೂಲತಃ ವಿಜಯಪುರ ತಾಲ್ಲೂಕಿನ ಡೊಮನಾಳ ಗ್ರಾಮದವರಾದ ಇವರು ಸರ್ಕಾರಿ ಕೆಲಸದಿಂದ ನಿವೃತ್ತರಾದ ಬಳಿಕ ಪರಿಸರ ಪೂರಕ ಮತ್ತು ಗೋರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ.

ವಿಜಯಪುರ ತಾಲ್ಲೂಕಿನ ಶೇಗುಣಸಿ ಗ್ರಾಮದ ಹರಳಯ್ಯನ ಗುಡ್ಡದಲ್ಲಿ 2011ರಿಂದ ಈವರೆಗೆ ಸುಮಾರು 200 ಪ್ರಭೇದದ ಔಷಧ, ಹಣ್ಣು ಮತ್ತು ಅಲಂಕಾರಿಕ ಹಾಗೂ ಕಾಡು ಗಿಡ, ಮರಗಳು ಸೇರಿದಂತೆ ಮೂರು ಸಾವಿರ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದ ಶ್ರೀ ಗುರುದೇವ ರಾನಡೆ ಆಶ್ರಮದಲ್ಲಿ ಸುಮಾರು 25 ಪ್ರಭೇದದ ಐದು ಸಾವಿರ ಸಸಿ, ಶ್ರೀ ಸಿದ್ದೇಶ್ವರ ತಪೋವನದಲ್ಲಿ ಸುಮಾರು 50 ಪ್ರಭೇದದ 1 ಸಾವಿರ ಸಸಿ ಹಾಗೂವಿಜಯಪುರ ತಾಲ್ಲೂಕಿನ ನಾಗರಾಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸುಮಾರು 500 ಸಸಿಗಳನ್ನು ನೆಟ್ಟು ನೀರೆರೆದು ಬೆಳೆಸಿದ್ದಾರೆ.

ವಿಜಯಪುರ ಮಹಾನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಸುಮಾರು 500 ಸಸಿಗಳನ್ನು ಹಾಗೂತಮ್ಮ ಸ್ವಗ್ರಾಮ ಡೊಮನಾಳದ ಶ್ರೀ ದಾವಲ್‌ ಮಲ್ಲಿಕ್‌ ಗುಡ್ಡದಲ್ಲಿ 50 ಪ್ರಬೇಧದ ಸುಮಾರು 9326 ಸಸಿಗಳನ್ನು ಹಾಗೂ ಈಶಾನ್ಯ ಸಾರಿಗೆ ಸಂಸ್ಥೆ ವಿಜಯಪುರದ ಘಟಕ 3ರಲ್ಲಿ ಸುಮಾರು 500 ಗಿಡಗಳನ್ನು ಫೋಷಣೆ ಮಾಡುತ್ತಿದ್ದಾರೆ.

ವಿಜಯಪುರ ತಾಲ್ಲೂಕಿನ ಶೇಗುಣಸಿ ಗ್ರಾಮದ ಹರಳಯ್ಯನ ಗುಡದಲ್ಲಿ ನಾಲ್ಕು ಗೋವುಗಳನ್ನು ಸಾಕಿ, ಗೋಸಂತತಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದ ಕೆಂಪೇಗೌಡ ಸರೋವರದಲ್ಲಿ ಸುಮಾರು 330 ಸಸಿಗಳನ್ನು ನೆಟ್ಟು ಸುಮಾರು 8 ತಿಂಗಳು ಪೋಷಣೆ ಮಾಡಿ, ಬಿಬಿಎಂಪಿಗೆ ವಹಿಸಿದ್ದಾರೆ.

ಪ್ರಶಸ್ತಿಗಳು:

ಎನ್‌.ಡಿ.ಪಾಟೀಲರ ಪರಿಸರ ಪ್ರೇಮ ಮತ್ತು ಕಾಳಜಿಯನ್ನು ಗುರುತಿಸಿ2014ರಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ‘ಜಿಲ್ಲಾ ಮಟ್ಟದ ಪರಿಸರ ಪ್ರಶಸ್ತಿ, 2015ರಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ಕಾಯಕಯೋಗಿ ಪ್ರಶಸ್ತಿ, 2017ರಲ್ಲಿ ಹುಬ್ಬಳ್ಳಿಯ ರಾಷ್ಟ್ರೀಯ ಸೇವಾ ಭಾರತಿಯಿಂದ ಸನ್ಮಾನ ಮಾಡಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಲು ನನಗೆ ಪ್ರೇರೇಪಣೆ ಸಿಕ್ಕಿದೆ
-ಎನ್‌.ಡಿ.ಪಾಟೀಲ
ಪರಿಸರ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT