ಮಂಗಳವಾರ, ನವೆಂಬರ್ 24, 2020
22 °C
ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ಸ್ವಾಗತ

ನಿಗಮ ಸ್ಥಾಪನೆ: ಐತಿಹಾಸಿಕ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಸಮುದಾಯದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಸ್ಥಾಪಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ನಿಗಮ ಸ್ಥಾಪನೆ ಬಗ್ಗೆ ನಾನು ಸದನದಲ್ಲಿ ಹಕ್ಕೊತ್ತಾಯ ಮಾಡಿದ್ದೆ. ಇದಕ್ಕೆ ರಾಜ್ಯದ ವಿವಿಧ ಪಕ್ಷಗಳ ಶಾಸಕರು ಧ್ವನಿಗೂಡಿಸಿದ್ದರು. ಇದೀಗ ರಾಜ್ಯ ಸರ್ಕಾರ ನಿಗಮ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ಎಂದರು.

ಸದ್ಯ ಕೋವಿಡ್‌ ಸಂಕಷ್ಟ ಇರುವುದರಿಂದ ನಿಗಮಕ್ಕೆ ಅನುದಾನ ಮೀಸಲಿಟ್ಟಿಲ್ಲ. ಭವಿಷ್ಯದಲ್ಲಿ ಹೆಚ್ಚಿನ ಅನುದಾನವನ್ನು ನಿಗಮಕ್ಕೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ವೀರಶೈವ ಲಿಂಗಾಯತ ಸಮಾಜದಲ್ಲೂ ಅನೇಕ ಉಪಪಂಗಡಗಳಿವೆ, ಆರ್ಥಿಕವಾಗಿ ಬಹಳಷ್ಟು ಕಡುಬಡವರಿದ್ದಾರೆ. ಭವಿಷ್ಯದಲ್ಲಿ ಅವರು ಆರ್ಥಿಕವಾಗಿ ಸುಧಾರಣೆಯಾಗಲು, ಶೈಕ್ಷಣಿಕವಾಗಿ ಮುಂದೆ ಬರಲು ನಿಗಮದಿಂದ ಅನುಕೂಲವಾಗಲಿದೆ ಎಂದರು.

ನಿಗಮ ಸ್ಥಾಪನೆಗೆ ಸಾಕಷ್ಟು ಪರ, ವಿರೋಧ ವ್ಯಕ್ತವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶಾಸಕರು, ರಾಜ್ಯ ಸರ್ಕಾರ ಕೈಗೊಂಡಿರುವ ಒಳ್ಳೆಯ ನಿರ್ಣಯವನ್ನು ಪ್ರಾಂಜಲ ಮನಸ್ಸಿನಿಂದ ಸ್ವಾಗತಿಸೋಣ ಎಂದು ಹೇಳಿದರು.

ನಿಗಮ ಸ್ಥಾಪನೆಯು ಲಿಂಗಾಯತ ಸಮಾಜದ ಮುಂದುವರಿದವರಿಗೆ ಸಹಾಯ ಮಾಡಲು ಅಲ್ಲ, ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಅನುಕೂಲವಾಗಬೇಕು ಎಂದರು.

2 ‘ಎ’ಗೆ ಸೇರ್ಪಡೆಗೊಳಿಸಿ

ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಹಿಂದುಳಿದ ವರ್ಗಗಳ 2 ‘ಎ’ಗೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸೇರ್ಪಡೆಯಾದರೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಬೇಸರ: ಭೀಮಾ ನದಿ ಪ್ರವಾಹಕ್ಕೆ ತುತ್ತಾದ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು,  ಈ ಬಗ್ಗೆ ನೋವಿದೆ. ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಬೇಕಾಗಿತ್ತು ಎಂದು ಹೇಳಿದರು.

ಸೊನ್ನಾ ಬ್ಯಾರೇಜ್‌ ಅವೈಜ್ಞಾನಿಕ ನಿರ್ವಹಣೆಯಿಂದ ಭೀಮಾ ಪ್ರವಾಹಕ್ಕೆ ಕಾರಣವಾಯಿತು. ನೀರಾವರಿ ನಿಗಮದ ತಪ್ಪಿತಸ್ಥ ಎಂಜಿನಿಯರ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು. 

ಕೃಷ್ಣಾ ನದಿ ನೀರು ನಿರ್ವಹಣೆ ವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದೇ ರೀತಿ ಭೀಮಾ ನದಿ ನೀರು ನಿರ್ವಹಣೆಗೂ ವೈಜ್ಞಾನಿಕವಾಗಿ ನಡೆಯಬೇಕಾಗಿದೆ ಎಂದರು.

****

ರಾಜ್ಯದಲ್ಲಿ ಇನ್ನೂ ಅನೇಕ ಶೋಷಿತ ಸಮುದಾಯಗಳಿವೆ. ಅವುಗಳನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕು
–ಯಶವಂತರಾಯಗೌಡ ಪಾಟೀಲ
ಶಾಸಕ, ಇಂಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು