ಶುಕ್ರವಾರ, ಅಕ್ಟೋಬರ್ 22, 2021
28 °C
ಪಂಚಮಸಾಲಿ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

ಪಂಚಮಸಾಲಿ ಸಮಾಜ ಬಯಸಿದರೆ ಮೂರನೇ ಪೀಠ ಸ್ಥಾಪನೆ; ಬಬಲೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಧರ್ಮದ ಆಧಾರದ ಮೇಲೆ ಪಂಚಮಸಾಲಿ ಸಮಾಜವನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಸಮಾಜದ 52 ಮಠಾಧೀಶರನ್ನು ಒಳಗೊಂಡ ಪಂಚಮಸಾಲಿ ಮಠಾಧೀಶರ ಒಕ್ಕೂಟ ಸ್ಥಾಪಿಸಲಾಗಿದೆ. ಸಮಾಜದ ಜನರು ಬಯಸಿದರೆ ಮಾತ್ರ ಮೂರನೇ ಪೀಠ ಸ್ಥಾಪಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರಾದ ಬಬಲೇಶ್ವರದ ಬೃಹನ್‌ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಈಗಿರುವ ಕೂಡಲಸಂಗಮ ಮತ್ತು ಹರಿಹರ ಪೀಠಗಳು ಧರ್ಮ ಮಾರ್ಗ ಬಿಟ್ಟು ತಮ್ಮದೇ ಆದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿವೆ. ಇದರಿಂದ ಸಮಾಜದವರಿಗೆ ಬೇಷರವಾಗಿದೆ. ಹೀಗಾಗಿ ಸಮಾಜಕ್ಕೆ ನ್ಯಾಯ ಒದಗಿಸಲು ಮಠಾಧೀಶರ ಒಕ್ಕೂಟ ಕಟ್ಟಿಕೊಂಡಿದ್ದೇವೆ ಎಂದು ಹೇಳಿದರು.

ಪಂಚಮಸಾಲಿ ಸಮಾಜವು ವೀರಶೈವ ಲಿಂಗಾಯತ ಸಮಾಜದ ಒಂದು ಪಂಗಡವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಧಾರ್ಮಿಕ ಸಂಪ್ರದಾಯಗಳನ್ನು ಬಿಟ್ಟು ನಾಸ್ತಿಕರಾಗುತ್ತಿದ್ದಾರೆ. ಇವರನ್ನು ಧರ್ಮ, ಆಧ್ಯಾತ್ಮದ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಉದ್ದೇಶ ನಮ್ಮ ಒಕ್ಕೂಟದ್ದಾಗಿದೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜದ ಮಕ್ಕಳಿಗೆ ಲಿಂಗದೀಕ್ಷೆ, ಅಯ್ಯಾಚಾರ ನೀಡುವ ಮೂಲಕ ವೈದಿಕ ಪದ್ಧತಿ ಅನುಸಾರ ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 23ರಂದು ಜಮಖಂಡಿಯಲ್ಲಿ 100 ಬಾಲಕರಿಗೆ ಲಿಂಗದೀಕ್ಷೆ, ಅಯ್ಯಾಚಾರ ನೀಡಲಾಗುವುದು ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಸುಸಂಸ್ಕೃತ ಮಹಿಳೆ. ಅವರ ರಾಜಕೀಯ ಏಳಿಗೆ ಸಹಿಸದೇ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಖಂಡನೀಯ.ಎಂದರು.

ಪಂಚಮಸಾಲಿ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿಯಾದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ,  ಜಮಖಂಡಿ ತಾಲ್ಲೂಕಿನ ಕಮರಿಮಠದ ಸಿದ್ಧಲಿಂಗ ದೇವರು, ಆಲಗೂರಿನ ಶಾಂತಮೂರ್ತಿ ಸ್ವಾಮೀಜಿ, ಬುರಾಣಾಪುರ ಆರೂಡ ಆಶ್ರಯಮದ ಯೋಗೇಶ್ವರಿ ಮಾತಾಜಿ ಮತ್ತು ಬಸವರಾಜ ಕಾನಗೊಂಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಪಂಚಮಸಾಲಿ ಮಠಾಧೀಶರ ಒಕ್ಕೂಟದ ಬಗ್ಗೆ ಕೆಲವರು ಲಘುವಾಗಿ ಮಾತನಾಡುತ್ತಿದ್ದಾರೆ. ಒಕ್ಕೂಟವನ್ನು ಲಘುವಾಗಿ ‍ಪರಿಗಣಿಸಿದರೆ ನಾವು ಏನು ಎಂಬುದನ್ನು ಮಾಡಿ ತೋರಿಸುತ್ತೇವೆ

–ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ

 ಅಧ್ಯಕ್ಷ, ಪಂಚಮಸಾಲಿ ಮಠಾಧೀಶರ ಒಕ್ಕೂಟ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು