ಗುರುವಾರ , ಜೂನ್ 24, 2021
29 °C

‘ತಜ್ಞರ ಎಚ್ಚರಿಕೆ ಕಡೆಗಣಿಸಿದ ಪರಿಣಾಮ ಕೋವಿಡ್‌ ಹೆಚ್ಚಳ’-ಡಾ.ಎಂ.ಚಂದ್ರ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೇಂದ್ರ ಸರ್ಕಾರವು ತಜ್ಞರು ನೀಡಿದ ಎಲ್ಲ ಎಚ್ಚರಿಕೆಗಳನ್ನು ಕಡೆಗಣಿಸಿದ ಪರಿಣಾಮ ದೇಶದೆಲ್ಲೆಡೆ ಕೋವಿಡ್‌ ವ್ಯಾಪಕವಾಗಿ ಹರಡಲು, ಆರೋಗ್ಯ ವ್ಯವಸ್ಥೆ ಹದಗೆಡಲು ಮೂಲ ಕಾರಣವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು.

ಆಲ್ ಇಂಡಿಯ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ರಾಜ್ಯ ಸಮಿತಿ ವತಿಯಿಂದ ಹದಗೆಟ್ಟ ಆರೋಗ್ಯ ವ್ಯವಸ್ಥೆ: ಕಾರಣವೇನು? ಎಂಬ ವಿಷಯದ ಕುರಿತು ನಡೆಸಲಾದ ರಾಜ್ಯಮಟ್ಟದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ತಜ್ಞರ ಸಮಿತಿಯ ಎಚ್ಚರಿಕೆ ನೀಡಿದ್ದರೂ ಕೇಂದ್ರ ಸರ್ಕಾರವು ಮುಂಜಾಗೃತಾ ಕ್ರಮ ತೆಗೆದುಕೊಳ್ಳುವ ಬದಲಿಗೆ ಪಂಚರಾಜ್ಯಗಳ ಚುನಾವಣೆಯಲ್ಲಿ ತಲ್ಲೀನವಾಗಿತ್ತು. ಜನದಟ್ಟಣೆಗಳನ್ನು ತಪ್ಪಿಸುವ ಬದಲು ತಾನೇ ಮುಂದೆ ನಿಂತು ಚುನಾವಣಾ ರ‍್ಯಾಲಿಗಳನ್ನು ನಡೆಸಿತು ಮತ್ತು ಕುಂಭಮೇಳದಂತಹ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಕ್ಕೆ  ಅವಕಾಶ ಮಾಡಿಕೊಟ್ಟಿತು. ಅಲ್ಲಿಂದ ಸೋಂಕು ಇಡೀ ದೇಶವ್ಯಾಪಿ ಪಸರಿಸಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ರೂ 20 ಸಾವಿರ ಕೋಟಿ ವೆಚ್ಚದಲ್ಲಿ ಸೆಂಟ್ರಲ್ ವಿಸ್ತಾ ಯೋಜನೆ, ರಾಮಮಂದಿರ ನಿರ್ಮಾಣ, ಬೃಹತ್ ಮೂರ್ತಿ ಸ್ಥಾಪನೆಗೆ ನೀಡುತ್ತಿರುವ ಗಮನವನ್ನು ದೇಶದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ನೀಡುತ್ತಿಲ್ಲ ಎಂದು ಆರೋಪಿಸಿದರು.

ಎಐಡಿವೈಓ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ದೇಶದ ಪ್ರತೀ ಹಳ್ಳಿಗೊಂದು ಆರೋಗ್ಯ ಕೇಂದ್ರ, ನಗರದ ಪ್ರತಿ ವಾರ್ಡ್‍ಗೊಂದು ಆರೋಗ್ಯ ಘಟಕ ಬೇಕೆಂಬ ಘೋಷಣೆಯೊಂದಿಗೆ ನಮ್ಮ ಹೋರಾಟವನ್ನು ಕಟ್ಟಬೇಕು ಎಂದರು.

ಕೋವಿಡ್ ಮೊದಲ ಅಲೆಯ ಹೊಡೆತದಿಂದ ಜನತೆ ನಿರುದ್ಯೋಗ ಮತ್ತು ಬಡತನದಿಂದ ಬಳಲುತ್ತಿದ್ದಾರೆ. ಜನಸಾಮಾನ್ಯರ ತಲಾ ಆದಾಯ ಪಾತಾಳಕ್ಕೆ ಕುಸಿದಿದೆ ಎಂದರು.

ಇಂದು ದೇಶದಲ್ಲಿ 70ರಷ್ಟು ಆಸ್ಪತ್ರೆಗಳನ್ನು ಖಾಸಗಿಯವರು ನಡೆಸುತ್ತಿದ್ದಾರೆ. ಕೇವಲ 30 ರಷ್ಟನ್ನು ಮಾತ್ರ ಸರ್ಕಾರ ಏದುಸಿರು ಬಿಡುತ್ತಾ ನಿರ್ವಹಿಸುತ್ತಿದೆ. ಈ ಬಲಹೀನ ವ್ಯವಸ್ಥೆಯಿಂದ ಜನರಿಗೆ ಆರೋಗ್ಯವನ್ನು ಒದಗಿಸಲು ಸಾಧ್ಯವಿಲ್ಲ. ಎಂದು ಹೇಳಿದರು.

ಎಐಡಿವೈಓನ ರಾಜ್ಯ ಘಟಕದ ಅಧ್ಯಕ್ಷರಾದ ಎಂ.ಉಮಾದೇವಿ ಮಾತನಾಡಿ, ಹದಗೆಟ್ಟ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ ಮೊದಲು ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿಮಾಡಬೇಕು. ತಜ್ಞ ವೈದ್ಯರನ್ನು, ಶುಶ್ರೂಷಕರನ್ನು ಮತ್ತು ಇನ್ನಿತರ ತಂತ್ರಜ್ಞರನ್ನು ಕಾಯಂ ಆಗಿ ನೇಮಿಸಬೇಕು ಎಂದರು.

ಎಐಡಿವೈಓ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು