ಸಿಂದಗಿ: ಶಿಕ್ಷಕ ಅಜ್ಞಾನವೆಂಬ ಕತ್ತಲೆ ಹೋಗಲಾಡಿಸುವ ಜ್ಯೋತಿ ಎಂದು ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿ ಗೋಲಾ ಹೇಳಿದರು.
ಇಲ್ಲಿಯ ಹೊರವಲಯದ ರಾಂಪೂರ ರಸ್ತೆಯಲ್ಲಿನ ಪ್ರೇರಣಾ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುನಮನ ಗೌರವ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ವಿದ್ಯಾರ್ಥಿಗಳಿಗೆ ಬರೀ ಔಪಚಾರಿಕ ಶಿಕ್ಷಣ ಮಾತ್ರ ನೀಡದೇ ಸಂಸ್ಕಾರಯುತ ಬೋಧನೆಯೊಂದಿಗೆ ಬದುಕಿನ ಸವಾಲುಗಳನ್ನು ಎದುರಿಸಲು ಕೌಶಲಗಳನ್ನು ಕರಗತ ಮಾಡಿಕೊಡುತ್ತಾನೆ ಎಂದು ತಿಳಿಸಿದರು.
ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮರ್ಥ ವಿದ್ಯಾವಿಕಾಸ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕರಾದ ರೇಖಾ ಕುಲಕರ್ಣಿ, ಜೆ.ಪಿ.ಕುಲಕರ್ಣಿ, ಎಂ.ಎಂ.ಆಲಮೇಲ, ಮಹಾದೇವಿ ಪಾಟೀಲ, ವೈಜನಾಥ ಅಂಕಲಗಿ, ಎಸ್.ಎಸ್.ಮಾಣಸುಣಗಿ, ರಂಗರಾವ್ ಖೇಡಗಿಕರ ಅವರಿಗೆ ಗುರುನಮನ ಗೌರವ ಸಲ್ಲಿಸಲಾಯಿತು.
ಸಂಸ್ಥೆಯ ಪಿ.ಡಿ.ಕುಲಕರ್ಣಿ, ಮುಖ್ಯ ಶಿಕ್ಷಕಿಯರಾದ ಸಾವಿತ್ರಿ ಅಸ್ಕಿ, ಎಂ.ಪಿ.ಬುಕ್ಕಾ ಹಾಗೂ ಶಿಕ್ಷಕ ಸತೀಶ ಕುಲಕರ್ಣಿ, ವಿದ್ಯಾರ್ಥಿಗಳಾದ ಅನನ್ಯ ದೇವಣಗಾಂವ, ಯಶೋದ ಹಂಚಿನಾಳ, ಸಾನ್ವಿ ಬಾಗಲಕೋಟ ಉಪಸ್ಥಿತರಿದ್ದರು.