ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಕಲಹ: ಪತ್ನಿ ಕೊಲೆಗೈದು ಹೊಲದಲ್ಲಿ ಹೂತ ಪತಿ

Last Updated 28 ಆಗಸ್ಟ್ 2021, 15:34 IST
ಅಕ್ಷರ ಗಾತ್ರ

ಕೊಲ್ಹಾರ(ವಿಜಯಪುರ): ಕೌಟುಂಬಿಕ ಕಲಹ ಹಿನ್ನೆಲೆ ಪತಿ ತನ್ನ ಪತ್ನಿಯನ್ನು ಹೊಲಕ್ಕೆ ಕರೆದೊಯ್ದು ಕೊಲೆ ಮಾಡಿ ಅಲ್ಲಿಯೇ ಹೂತು ಹಾಕಿದ ಹೃದಯವಿದ್ರಾವಕ ಘಟನೆ ತಾಲ್ಲೂಕಿನ ತಡಲಗಿ ಗ್ರಾಮದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ತಡಲಗಿ ಗ್ರಾಮದ ದ್ರಾಕ್ಷಾಯಿಣಿ ರಾಚಯ್ಯ ಬನ್ನಿಗೋಳಮಠ (36) ಕೊಲೆಯಾದ ದುರ್ದೈವಿ. ಪತಿ ರಾಚಯ್ಯ ಬನ್ನಿಗೋಳಮಠ ಕೊಲೆ ಮಾಡಿದ ಆರೋಪಿ.

ಪತಿಯ ಕಿರುಕುಳಕ್ಕೆ ಬೇಸತ್ತು ಎಂಟು ತಿಂಗಳ ಹಿಂದೆ ಮೂವರು ಮಕ್ಕಳ ಸಮೇತ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ತನ್ನ ತವರು ಮನೆಯಲ್ಲಿ ದ್ರಾಕ್ಷಾಯಿಣಿ ವಾಸವಿದ್ದರು.

ತನ್ನ ಮಕ್ಕಳನ್ನು ಶಾಲೆಗೆ ಸೇರಿಸಲು ಅವಶ್ಯಕವಾದ ಆಧಾರ್ ಕಾರ್ಡ್ ಇನ್ನಿತರೆ ದಾಖಲೆಗಳನ್ನು ತರಲು ಪತಿ ಮನೆಗೆ ಬಂದಾಗ ರಾಚಯ್ಯ ಆಕೆಯನ್ನು ಜಮೀನಿಗೆ ಕರೆದೊಯ್ದು, ಕೊಲೆ ಮಾಡಿ ಜಮೀನಿನ ದಂಡೆಯಲ್ಲಿ ಹೂತು ಹಾಕಿದ್ದಾನೆ. ಅಲ್ಲದೇ, ಆಕೆಯ ಮೊಬೈಲ್‌ನಿಂದ ತವರಿನವರಿಗೆ ಹಾಗೂ ಕಂಡ ಕಂಡವರಿಗೆ ಕರೆ ಮಾಡಿದ್ದಾನೆ. ಇದರಿಂದ ಸಂಶಯಗೊಂಡ ತವರು ಮನೆಯವರು ಬಂದು ಕೊಲ್ಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಆರೋಪಿ ರಾಚಯ್ಯನನ್ನು ಕರೆತಂದು ವಿಚಾರಿಸಿದಾಗ ಸುಮಾರು ಐದು ದಿನಗಳ ಕಾಲ ಗೊಂದಲದ ಹೇಳಿಕೆಗಳನ್ನು ನೀಡುತ್ತಾ ಪೊಲೀಸರನ್ನು ಸತಾಯಿಸಿ ಶುಕ್ರವಾರ ರಾತ್ರಿ ಸತ್ಯ ಬಾಯ್ಬಿಟ್ಟಿದ್ದಾನೆ.

‘ತಾಯಿಯನ್ನು ಕಳೆದುಕೊಂಡು‌‌ ಮೂರು ಮಕ್ಕಳು ಅನಾಥವಾಗಿವೆ. ತವರೂರಲ್ಲೇ ದ್ರಾಕ್ಷಾಯಿಣಿಗೆ ನೆಲೆ ಮಾಡಿಕೊಟ್ಟಿದ್ದೇವು. ಆಕೆ ಇಲ್ಲಿಗೆ ಬರದಿದ್ದರೆ ಬದುಕುಳಿಯುತ್ತಿದ್ದಳು’ ಎಂದು ದ್ರಾಕ್ಷಾಯಿಣಿ ತಾಯಿ, ಸಹೋದರರು ‌ಆಕ್ರಂದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಕೊಲ್ಹಾರ ತಹಶೀಲ್ದಾರ ಎಸ್. ಡಿ‌. ಮುರಾಳ ಸಮ್ಮುಖದಲ್ಲಿ ಡಿವೈಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಸೋಮಶೇಖರ್ ಜುಟ್ಟಲ್ ಹಾಗೂ ಕೊಲ್ಹಾರ ಪಿಎಸ್ಐ ಸಿದ್ದಪ್ಪ ಯಡಹಳ್ಳಿ ಘಟನಾ ಸ್ಥಳಕ್ಕೆ ಆರೋಪಿ ರಾಚಯ್ಯನ ಜೊತೆಗೆ ‌ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.‌

ಕೊಲೆ ಮಾಡಿ ಹೂತು ಹಾಕಿದ್ದ ಸ್ಥಳದಿಂದ ಶವವನ್ನು ಹೊರ ತೆಗೆದರು.‌ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಿದರು. ಆರೋಪಿಯನ್ನು‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT