ಬುಧವಾರ, ಜುಲೈ 6, 2022
23 °C
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ

ವಿಜಯಪುರ: ಕೃಷಿ ಕಾಯ್ದೆ ವಾಪಸ್ಸಿಗೆ ಆಗ್ರಹಿಸಿ ರೈತ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಸಂಬಂಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಲು ಮಾರ್ಚ್ 28ರಂದು ಬೆಂಗಳೂರಿನಲ್ಲಿ ರೈತರ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದ ಮಾದರಿಯಲ್ಲೇ ರಾಜ್ಯ ಸರ್ಕಾರವೂ ಬೇಷರತ್‌ ಆಗಿ ಹಿಂಡೆಯಬೇಕು ಎಂದು ಆಗ್ರಹಿಸಿದರು.

ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದಾಗಿ ಸಾಕಷ್ಟು ಭೂಮಿ ಖರೀದಿಗಳು ನಡೆಯುತ್ತಿದ್ದು, ಬಡವರು ಭೂಮಿ ಕಳೆದುಕೊಂಡು ಹಳ್ಳಿಗಳನ್ನು ಖಾಲಿ ಮಾಡುತ್ತಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರಾಜ್ಯದ ಹಲವು ಎಪಿಎಂಸಿಗಳಿಗೆ ಬರಬೇಕಿದ್ದ ವರಮಾನದಲ್ಲಿ ಶೇ 90ರಷ್ಟು ಕಡಿಮೆಯಾಗಿದೆ ಎಂದರು.

ರೈತರ ಉತ್ಪನ್ನಗಳನ್ನು ಮಾರಲು ಇದ್ದ ಕೇಂದ್ರೀಕೃತ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ. ಜಾನುವಾರು ಸಂರಕ್ಷಣೆ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ್ದರಿಂದ ರೈತರ ಆರ್ಥಿಕತೆಗೆ ತೀವ್ರ ಪೆಟ್ಟು ಬಿದ್ದಿದೆ. ಬರೀ ಗೋವಿನ ಪೂಜೆ ಮಾಡಿದರೆ ಸಾಕಾಗದು. ರೈತರ ಆರ್ಥಕತೆ ಜಾನುವಾರುಗಳ ಮೇಲೆ ನಿಂತಿದ್ದು, ರಾಜ್ಯ ಸರ್ಕಾರದ ತಪ್ಪು ನಿರ್ಧಾರದಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟ ಎದುರಿಸುತ್ತಿದೆ ಎಂದರು.

ಕೇಂದ್ರ ಸರ್ಕಾರವು ರೈತರ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ವಾಪಸ್ ಪಡೆಯಿತು. ರಾಜ್ಯ ಸರ್ಕಾರವೂ ನೈತಿಕ ನೆಲೆಗಟ್ಟಿನಲ್ಲಿ ಈ ಬಗ್ಗೆ ವಿಚಾರಿಸಿ ಬೇಷರತ್‌ ಆಗಿ ವಾಪಸ್ ಪಡೆಯಬೇಕಿತ್ತು. ಸುಗ್ರೀವಾಜ್ಞೆಗಳನ್ನು ತಂದಾಗಲೇ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿ ಒತ್ತಾಯಿಸಿದ್ದೆವು. ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿದರು.

ರೈತರನ್ನು ಕೃಷಿಯಿಂದ ಹೊರದಬ್ಬಲು ಸಂಚು ರೂಪಿಸಿದ್ದಾರೆ. ಇದರ ಹಿಂದೆ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು ರೈತರನ್ನು  ಮೂಲೆಗುಂಪು ಮಾಡುವ ಸಂಚು ಇದೆ ಎಂದು ಆರೋಪಿಸಿದರು.

ಸಗರ ನೇಮಕ:

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವಿಜಯಪುರ ಜಿಲ್ಲಾ ಘಟಕಕ್ಕೆ ನೂತನ  ಅಧ್ಯಕ್ಷರನ್ನಾಗಿ ಕಲಕೇರಿಯ ಸಂಗಮೆಶ ಸಗರ ಅವರನ್ನು ನೇಮಕ ಮಾಡಲಾಗಿದೆ ಎಂದು  ಕೋಡಿಹಳ್ಳಿ ಚಂದ್ರಶೇಖರ್‌ ಘೋಷಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ್ರ, ಮಾಲತೇಶ ಪೂಜಾರ, ಜೆ. ಕಾರ್ತಿಕ, ಹಣಮಂತಪ್ಪ ಹೊಳೆಯಾಚೆ, ರಾಜ್ಯ ಸಂಚಾಲಕ ಶಾಂತರೆಡ್ಡಿ ಪೊಲೀಸ್‌ ಪಾಟೀಲ,  ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಗೌಡ ಸುಬೇದಾರ, ಶಿವರಾಜ ಕಲಕೇರಿ, ಗಗನ ಕೆರೂರ, ಪರಶುರಾಮ ಅಡಗಿಮನಿ, ಶಿವಶಂಕರ ಸಜ್ಜನ, ಗೋಲ್ಲಾಳಪ್ಪಗೌಡ ಅಂಗಡಿ, ಬೀರಪ್ಪ ಪೂಜಾರಿ, ವಿರೇಶ ಗೊಬ್ಬರ, ಸೋಮಶೇಖರ ಸಜ್ಜನ, ಶ್ರೀಶೈಲ ವಾಲಿಕಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಮುಂದುವರಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ರೈತ ಮುಖಂಡರು ಕಣಕ್ಕಿಳಿಯುವ ಮೂಲಕ ಉತ್ತರ ನೀಡಬೇಕಾಗುತ್ತದೆ

–ಕೋಡಿಹಳ್ಳಿ ಚಂದ್ರಶೇಖರ, ಅಧ್ಯಕ್ಷ,

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು