ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಸಿಹಿ ಹಂಚಿ ಸಂಭ್ರಮಿಸಿದ ರೈತ ಹೋರಾಟಗಾರರು

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ
Last Updated 26 ಆಗಸ್ಟ್ 2022, 11:50 IST
ಅಕ್ಷರ ಗಾತ್ರ

ವಿಜಯಪುರ:ಇಂಡಿ, ನಾಗಠಾಣ, ವಿಜಯಪುರ ಮತ್ತು ಬಬಲೇಶ್ವರ ತಾಲ್ಲೂಕಿನ ರೈತರ ದಶಕಗಳ ಕಾಲದ ಬೇಡಿಕೆಯಾಗಿದ್ದ ಶ್ರೀ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡುರುವುದನ್ನು ಸ್ವಾಗತಿಸಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ ಕಾರಜೋಳ ನೇತೃತ್ವದಲ್ಲಿ ರೈತ ಮುಖಂಡರು, ಹೋರಾಟಗಾರು ನಗರದಲ್ಲಿ ಶುಕ್ರವಾರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ನೀರಾವರಿ ವಂಚಿತವಾಗಿದ್ದ ಇಂಡಿ ತಾಲ್ಲೂಕಿನ 56 ಹಳ್ಳಿಗಳ ರೈತರು ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಅನೇಕ ಧರಿಣಿ ಸತ್ಯಾಗ್ರಹದಂತಹ ಹೋರಾಟ ಮಾಡುತ್ತಲೇ ಬಂದಿದ್ದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಒತ್ತಾಸೆಯ ಮೇರೆಗೆ ₹ 2638 ಕೋಟಿ ವೆಚ್ಚದ ಈ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದುಉಮೇಶ ಕಾರಜೋಳ ಹೇಳಿದರು.

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯುಜಿಲ್ಲೆಯ ರೈತರ ಪಾಲಿಗೆ ದೊಡ್ಡ ಕೊಡುಗೆಯಾಗಿದೆ. 56 ಹಳ್ಳಿಗಳ 49,730 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಈ ಯೋಜನೆಯಿಂದ ಸಿಗಲಿದೆ. ಇದಕ್ಕಾಗಿ ಸರ್ಕಾರ ₹2638 ಕೋಟಿ ವೆಚ್ಚ ಮಾಡಲಿದೆ ಎಂದರು.

ಮೊದಲ ಹಂತದಲ್ಲಿ ₹760 ಕೋಟಿ ಅನುದಾನದಲ್ಲಿ 43 ಹಳ್ಳಿಗಳ 28 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಿದೆ.ಎರಡನೇ ಹಂತದಲ್ಲಿ ₹1274 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮೂರನೇ ಹಂತದಲ್ಲಿ₹605 ಕೋಟಿ ಅನುದಾನದಲ್ಲಿ 28 ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಲಭಿಸಲಿದೆ ಎಂದರು.

ಎರಡು, ಮೂರು ವರ್ಷದಲ್ಲಿ ಇಂಡಿ, ನಾಗಠಾಣ, ಹೊರ್ತಿ ಭಾಗ ಸಂಪೂರ್ಣ ನೀರಾವರಿ ಆಗಲಿದ್ದು, ಲಕ್ಷಾಂತರ ಜನರ ಬದುಕು ಹಸನಾಗಲಿದೆ ಎಂದರು.

ಭಾರತೀಯ ಕಿಸಾನ ಸಂಘದ ಪ್ರದೇಶ ಕಾರ್ಯದರ್ಶಿ ಗುರುನಾಥ ಬಗಲಿ ಮಾತನಾಡಿ, ಇಂಡಿ ಹಾಗೂ ಚಡಚಣ ತಾಲ್ಲೂಕುಗಳು ಜಿಲ್ಲೆಯಲ್ಲಿಯೇ ಅತ್ಯಂತ ಬರಗಾಲ ಪೀಡಿತವಾಗಿವೆ. ಸಾವಿರಾರು ಅಡಿ ಕೊಳಬಾವಿ ಕೊರೆದರೂ ಕುಡಿಯಲು ಸಹಿತ ನೀರು ದೊರಕುತ್ತಿರಲಿಲ್ಲ. ಬೇಸಿಗೆಯಲ್ಲಿ ಜನ, ಜಾನುವಾರಗಳು ಕುಡಿಯುವ ನೀರಿಗಾಗಿ ಪರದಾಡುವ ಪರಸ್ಥಿತಿ ಇತ್ತು. ಹಾಗಾಗಿಯೇ ನಾವು ರೇವಣಸಿದ್ದೇಶ್ವರ ಏತ ನೀರಾವರಿ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿದ್ದೇವು. ಜಲಸಂಪನ್ಮೂಲ ಸಚಿವರ ಕಾಳಜಿಯಿಂದಾಗಿ 55 ಗ್ರಾಮಗಳ ರೈತರು ಸಂತೋಷದಲ್ಲಿದ್ದೇವೆ ಎಂದರು.

ಝಳಕಿಯಲ್ಲಿ ನಾವು ನೀರಾವರಿ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿದ್ದಾಗ ವಿರೋಧ ಪಕ್ಷದಲ್ಲಿದ್ದ ಗೋವಿಂದ ಕಾರಜೋಳ ಅವರು ಭೇಟಿ ನೀಡಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನಾನು ಯೋಜನೆ ಅನುಷ್ಠಾನ ಮಾಡಿಯೇ ವಿಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದರು. ಇಂದು ಕಾರಜೋಳ ಅವರು ಕೊಟ್ಟ ಮಾತಿನಂತೆ ₹2638 ಕೋಟಿ ಮೊತ್ತದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಂಡಿದ್ದಾರೆ. ನಮ್ಮ ಭಾಗದ ರೈತರು ಇಂದು ಹಬ್ಬವನ್ನೇ ಮಾಡಿದ್ದಾರೆ. ಕಾರಜೋಳ ಅವರ ರೈತಪರ ಕಾಳಜಿಗೆ ಅವರನ್ನು ಹೊಗಳಲು ಪದಗಳಿಲ್ಲ. ಇಂಡಿ ಹಾಗೂ ಚಡಚಣ ಭಾಗದ ಸಮಸ್ತ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಅಕ್ತರ್ ಅಹ್ಮದ ಪಾಟೀಲ, ವಿಠ್ಠಲ ಏಣಗಿ, ಎಸ್.ಎಂ.ಬಿರಾದಾರ, ಮಲ್ಲಿಕಾರ್ಜುನ ಮೆಂಡೆಗಾರ, ಕಾಮಣ್ಣ ಬಗಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT