ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ: ರೈತ ಸಂಘದ ಪ್ರತಿಭಟನೆ

ಬಾಲಾಜಿ ಸಕ್ಕರೆ ಕಾರ್ಖಾನೆ ಎಫ್‌ಆರ್‌ಪಿ ದರ ನೀಡದ ಆರೋಪ
Last Updated 28 ಅಕ್ಟೋಬರ್ 2020, 2:57 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನ ಯರಗಲ್ಲ-ಮದರಿ ಗ್ರಾಮದ ಬಳಿ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಯವರು ರೈತರಿಗೆ ಸರ್ಕಾರ ಕಬ್ಬಿಗೆ ನಿಗದಿಪಡಿಸಿದ ಎಫ್.ಆರ್.ಪಿ. ಬೆಂಬಲ ಬೆಲೆ ನೀಡಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಬೆಂಬಲ ಬೆಲೆಯನ್ನು ಪೂರ್ತಿ ಕೊಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಹಲಗೆ ಮೆರವಣಿಗೆ ನಡೆಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಸಲ್ಲಿಸಲಾಯಿತು. ಸರ್ಕಾರ ಒಂದು ಟನ್ ಕಬ್ಬಿಗೆ ಎಫ್.ಆರ್.ಪಿ. ಅನ್ವಯ ₹ 2500 ಬೆಂಬಲ ಬೆಲೆ ನಿಗದಿಪಡಿಸಿದೆ. ಬಾಲಾಜಿ ಕಾರ್ಖಾನೆಯವರು ರೈತರಿಗೆ ಕ್ವಿಂಟಲ್‌ಗೆ ₹ 2250 ಮಾತ್ರ ಪಾವತಿಸಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ತಾಲ್ಲೂಕಿನ ರೈತರಿಗೆ ಅನ್ಯಾಯ ಆದಂತಾಗಿದೆ. ಜಿಲ್ಲಾಧಿಕಾರಿ ನವೆಂಬರ್ 2ರೊಳಗೆ ಈ ತಾರತಮ್ಯ ನಿವಾರಿಸಬೇಕು. ಇನ್ನುಳಿದ ₹ 250 ಮೊತ್ತವನ್ನು ಫಲಾನುಭವಿ ರೈತರ ಖಾತೆಗೆ ಜಮಾ ಮಾಡುವಂತೆ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಕಾರ್ಖಾನೆಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ವಕೀಲರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಅಯ್ಯಣ್ಣ ಬಿದರಕುಂದಿ, ಕಾರ್ಯದರ್ಶಿ ವೈ.ಎಲ್.ಬಿರಾದಾರ, ಸಂಗಪ್ಪ ಕತ್ತಿ, ಪ್ರಗತಿಪರ ರೈತರಾದ ಅರವಿಂದ ಕೊಪ್ಪ, ವಿವಿಧೆಡೆಯಿಂದ ಬಂದಿದ್ದ ರೈತರು ಪಾಲ್ಗೊಂಡಿದ್ದರು.

ಅನ್ಯಾಯ ಮಾಡಿಲ್ಲ, ಎಂಡಿ ಸ್ಪಷ್ಟನೆ: ರೈತ ಸಂಘದವರು ಬೇರೆ ಜಿಲ್ಲೆಗೂ ನಮ್ಮ ಜಿಲ್ಲೆಗೂ ತಳಕು ಹಾಕಿ ತಪ್ಪು ಕಲ್ಪನೆಯಿಂದ ಪ್ರತಿಭಟಿಸಿದ್ದಾರೆ. ಸರ್ಕಾರವು ನಮಗೆ ಎಫ್‌ಆರ್‌ಡಿ ಪ್ರಕಾರ ಟನ್ ಕಬ್ಬಿಗೆ ₹ 2256 ಹಾಗೂ ಸದಾಶಿವ ಸಕ್ಕರೆ ಕಾರ್ಖಾನೆಗೆ ₹ 2250 ನಿಗದಿಪಡಿಸಿದೆ. ಸರ್ಕಾರ ನಿಗದಿಪಡಿಸಿದ್ದನ್ನೇ ನಾವು ಎಲ್ಲ ರೈತರಿಗೆ ನೀಡಿದ್ದೇವೆ. ಇದರಲ್ಲಿ ಅನ್ಯಾಯ ಆಗಿಲ್ಲ ಎಂದು ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಯ ಎಂ.ಡಿ. ವೆಂಕಟೇಶ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT