ಸೋಮವಾರ, ನವೆಂಬರ್ 30, 2020
24 °C
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ

ಅನ್ನದಾತರ ಜೀವಾಳ ಸಹಕಾರ ಕ್ಷೇತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರು’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಹಕಾರ ಕ್ಷೇತ್ರವು ನಾಡಿನ ಅನ್ನದಾತರ ಜೀವಾಳವಾಗಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.

ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸರ್ಕಾರ ಮಾಡಬೇಕಾದ ಕೆಲಸವನ್ನು ಸಹಕಾರ ಕ್ಷೇತ್ರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಟ್‌ನಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದು  ಪ್ರತಿಪಾದಿಸಿದರು.

ರಾಜ್ಯದಲ್ಲಿ ಸಹಕಾರ ಕ್ಷೇತ್ರ ಹೆಮ್ಮರವಾಗಿ ಬೆಳೆದುನಿಂತಿದೆ. ಸಮಾಜದಲ್ಲಿ ಇಂದು ಸಹಕಾರ ಕ್ಷೇತ್ರದ ಕಡೆ ಜನರ ಒಲವು ಹೆಚ್ಚಾಗಿದೆ. ಸಹಕಾರ ಕ್ಷೇತ್ರದಿಂದ ಆರ್ಥಿಕ ಸೌಲಭ್ಯ ಮತ್ತು ಅಭಿವೃದ್ಧಿ ಸಾಧ್ಯ ಎಂಬ ಅಭಿಪ್ರಾಯ ಬಲವಾಗಿದೆ ಎಂದು ಹೇಳಿದರು.

ದೇಶದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರು ಅವರನ್ನು ಹೊರತು ಪಡಿಸಿ ಬಳಿಕ ಬಂದ ಯಾವೊಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ, ಮಹತ್ವ ನೀಡದಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಸಹಕಾರ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಗುಜರಾತ್‌, ಮಹಾರಾಷ್ಟ್ರ ಹೊರತು ಪಡಿಸಿದರೆ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಶರದ್‌ ಪವಾರ್‌ ಹಾಗೂ ಗುಜರಾತ್‌ನಲ್ಲಿ ವರ್ಗೀಸ್‌ ಕುರಿಯನ್‌ ಅವರನ್ನು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಯಾರೂ ಹೆಚ್ಚಿನ ಕೊಡುಗೆ ನೀಡಿಲ್ಲ ಎಂದರು.

ಕೋವಿಡ್‌ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮೊತ್ತದ ಕೊಡುಗೆಯನ್ನು ಸಹಕಾರಿ ಕ್ಷೇತ್ರ ನೀಡಿದೆ. ದಾನದ ವಿಷಯದಲ್ಲಿ ಸಾಫ್ಟ್‌ವೇರ್‌ ದೈತ್ಯ ಅಜಿಂ ಪ್ರೇಮ್‌ಜಿಗೆ ಹೋಲಿಸಿದರೆ ಸಹಕಾರ ಕ್ಷೇತ್ರದ ಕೊಡುಗೆ ಚಿಕ್ಕದು. ಆದರೆ, ಉಳಿದ ಕ್ಷೇತ್ರಗಳಿಗಿಂತ ದೊಡ್ಡದು ಎಂದು ವಿಶ್ಲೇಷಿಸಿದರು.

ಯಾವುದೇ ಭದ್ರತೆ ಇಲ್ಲದೇ ರೈತರಿಗೆ ದೊಡ್ಡ ಮಟ್ಟದಲ್ಲಿ ಸಾಲಸೌಲಭ್ಯ ನೀಡುತ್ತಿರುವ ಕ್ಷೇತ್ರ ಯಾವುದಾದರೂ ಇದೆ ಎಂದಾದರೆ ಅದು ಸಹಕಾರ ಕ್ಷೇತ್ರವಾಗಿದೆ. ರಾಜ್ಯದಲ್ಲಿ ಇರುವ 64 ಲಕ್ಷ ರೈತರಲ್ಲಿ ಶೇ 50ಕ್ಕಿಂತ ಅಧಿಕ ರೈತರಿಗೆ ಸಹಕಾರ ಕ್ಷೇತ್ರದಿಂದ ಸಾಲಸೌಲಭ್ಯ ಸೇರಿದಂತೆ ಇನ್ನಿತರ ಪ್ರಯೋಜನ ಲಭ್ಯವಾಗುತ್ತಿದೆ ಎಂದರು.

ಕೋವಿಡ್‌ ಕರಿನೆರಳು ಸಹಕಾರಿ ಕ್ಷೇತ್ರದ ಮೇಲೂ ಬಿದ್ದಿದೆ. ಆದರೂ ಸಂಕಷ್ಟದಲ್ಲಿರುವ ರೈತರ ಕೈಹಿಡಿಯುವ ಕೆಲಸ ಸಹಕಾರಿ ಕ್ಷೇತ್ರದಿಂದ ಆಗುತ್ತಿದೆ ಎಂದು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಹಾಗೂ ಆರ್‌ಬಿಐನ ಅತಿಯಾದ ಹಸ್ತಕ್ಷೇಪ ಸರಿಯಲ್ಲ. ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಮಾರ್ಗದರ್ಶನ ಮಾತ್ರ ನೀಡಬೇಕೇ ವಿನಃ ಹಸ್ತಕ್ಷೇಪ ಮಾಡುವ ಮೂಲಕ ಕ್ಷೇತ್ರವನ್ನು ಬಲಹೀನ ಮಾಡಬಾರದು ಎಂದು ಅಭಿಪ್ರಾಯಪಟ್ಟರು.

ಸಹಕಾರ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡಮಟ್ಟದ ಕ್ರಾಂತಿಯಾಗುತ್ತಿದೆ. ಅದರಲ್ಲೂ ಕ್ಷೀರಕ್ರಾಂತಿ ದೊಡ್ಡಮಟ್ಟದಲ್ಲಿ ಆಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ಕೊಡಲು ಸಾಧ್ಯವಾಗಿದೆ. ಕರ್ನಾಟಕದ ಈ ಯೋಜನೆಯು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನೆರವು:

ವಿಜಯಪುರ ಕೇಂದ್ರ ಸಹಕಾರಿ ಬ್ಯಾಂಕ್‌ ಮುಖ್ಯಮಂತ್ರಿ ಕೋವಿಡ್‌ ನಿಧಿಗೆ ₹1 ಕೋಟಿ, ಮುಖ್ಯಮಂತ್ರಿಗಳ ನೈಸರ್ಗಿಕ ವಿಕೋಪ ಪರಿಹಾರನಿಧಿಗೆ ₹50 ಲಕ್ಷ, ಜಿಲ್ಲೆಯ 500 ಆಶಾ ಕಾರ್ಯಕರ್ತೆಯರಿಗೆ ₹15 ಲಕ್ಷ ಪ್ರೋತ್ಸಾಹಧನ ಹಾಗೂ ಆಹಾರ ಕಿಟ್‌ ವಿತರಣೆ ಮಾಡುವ ಮೂಲಕ ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನ ಜವಾಬ್ದಾರಿ ಮೆರೆದಿದೆ ಎಂದು ಶ್ಲಾಘಿಸಿದರು.

ಸಹಕಾರ ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಸಹಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಸಹಕಾರ ಸಪ್ತಾಹ ಸಮಾರೋಪಕ್ಕೆ ವಿಜಯಪುರ ಸಜ್ಜು

ವಿಜಯಪುರ: ರಾಜ್ಯಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020 ಸಮಾರೋಪ ಸಮಾರಂಭಕ್ಕೆ ‘ಗುಮ್ಮಟನಗರಿ’ ವಿಜಯಪುರ ಸಜ್ಜಾಗಿದೆ.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೇತೃತ್ವದಲ್ಲಿ ನ.20ರಂದು ಬೆಳಿಗ್ಗೆ 11ಕ್ಕೆ ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಸಮಾರೋಪ ಸಮಾರಂಭ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಾನಂದ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಸಾಧನೆಗೈದ ರಾಜ್ಯದ ಸಹಕಾರಿಗಳಿಗೆ ಸನ್ಮಾನ ನಡೆಯಲಿದೆ.

***

ರಾಜ್ಯದಲ್ಲಿ ಅರೋಗ್ಯ ಮತ್ತು ಶಿಕ್ಷಣ ವಲಯವನ್ನು ಹೊರತು ಪಡಿಸಿದರೆ ಮೂರನೇ ಅತೀ ದೊಡ್ಡ  ವಲಯವೆಂದರೆ ಅದು ಸಹಕಾರ ವಲಯವಾಗಿದೆ
-ಶಿವಾನಂದ ಪಾಟೀಲ,ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.