ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ರೈತರ ವಿಜಯೋತ್ಸವ; ಅಧಿಕೃತ ಘೋಷಣೆಗೆ ಆಗ್ರಹ

ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ
Last Updated 19 ನವೆಂಬರ್ 2021, 12:58 IST
ಅಕ್ಷರ ಗಾತ್ರ

ವಿಜಯಪುರ: ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಘೋಷಿಸಿದ್ದನ್ನು ಸ್ವಾಗತಿಸಿ ರೈತ, ಪ್ರಗತಿಪರ ಸಂಘಟನೆಗಳ ವೇದಿಕೆ ಮುಖಂಡರು ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ಕೂಡಲೇ ಸಂಸದೀಯ ಪ್ರಕ್ರಿಯೆಗಳ ಮೂಲಕ ಈ ನಿರ್ಧಾರ ಕಾರ್ಯಗತಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ರೈತರು ಧೃಢ ಸಂಕಲ್ಪದೊಂದಿಗೆ ಸತತವಾಗಿ ಒಂದು ವರ್ಷ ನಡೆದ ಈ ಹೋರಾಟದಲ್ಲಿ ದೇಶದ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ, ಯುವಜನರು ಭಾಗಿಯಾಗಿ, ಬೆಂಬಲವಾಗಿ ನಿಂತಿದ್ದರು. ಈ ಒಗ್ಗಟ್ಟಿನ ಹೋರಾಟದ ಫಲವಾಗಿ ಪ್ರಧಾನಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ ಎಂದರು.

ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿ.ಭಗವಾನ್ ರೆಡ್ಡಿ ಮಾತನಾಡಿ, ಒಂದು ವರ್ಷದಿಂದ ದೇಶದಾದ್ಯಂತ ರೈತರು ನಡೆಸಿದ ಹೋರಾಟದ ಪ್ರತಿಫಲವಾಗಿ ಮೂರು ಕರಾಳ ಕೃಷಿ ಕಾಯ್ದೆಗಳು ವಾಪಸ್ಸಾಗಿವೆ ಎಂದರು.

ಮೂರು ಕರಾಳ ಕೃಷಿ ಕಾಯ್ದೆಗಳು, ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸುವವರೆಗೆ ಮತ್ತು ವಿದ್ಯುತ್ ಖಾಸಗೀಕರಣ ಕಾಯ್ದೆ ಲೋಕಸಭೆಯಲ್ಲಿ ರದ್ದಾಗುವವರೆಗೂ ಈ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

ಹೋರಾಟದ ಪ್ರಾರಂಭದಲ್ಲಿ ಸರ್ಕಾರ ರೈತರ ಬೇಡಿಕೆಗಳನ್ನು ಪರಿಗಣಿಸಿದ್ದರೆ ಹುತಾತ್ಮರಾದ 700 ಜನ ರೈತರ ಪ್ರಾಣ ಉಳಿಸಬಹುದಾಗಿತ್ತು. ಈ ಎಲ್ಲ ತಡೆಯಬಹುದಾಗಿದ್ದ ಸಾವುಗಳಿಗೆ ಕೇಂದ್ರದ ಕ್ರೂರ ಹಠಮಾರಿತನವೇ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಈ ಐತಿಹಾಸಿಕ ರೈತರ ಹೋರಾಟವು ಮುಂದಿನ ಎಲ್ಲ ಚಳವಳಿಗಳಿಗೆ ಮಾರ್ಗದರ್ಶನವಾಗಿದೆ ಎಂದರು.

ಪ್ರಗತಿಪರ ಸಂಘಟನೆಗಳ ವೇದಿಕೆ ಮುಖಂಡ ಅಕ್ರಮ ಮಾಶ್ಯಾಳಕರ, ಒಂದು ವರ್ಷದಿಂದ ಮೌನವಾಗಿದ್ದ ಪ್ರಧಾನಿ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎನ್ನುವ ಹೇಳಿಕೆಯ ಹಿಂದೆ ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ ಎದ್ದುಕಾಣುತ್ತಿದೆ ಎಂದರು.

ಪ್ರಗತಿಪರ ಸಂಘಟನೆಯ ಮುಖಂಡರಾದ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕಾರ್ಪೊರೇಟ್ ಕೃಷಿಯನ್ನು ದೇಶದ ಮೇಲೆ ಬಲವಂತವಾಗಿ ಹೇರಲು ಹಟಮಾರಿ ನಿಲುವನ್ನು ತಾಳಿದ್ದರಿಂದ, ಹೋರಾಟ ನಿರತ ಸಾವಿರಾರು ರೈತರು ಹೋರಾಟದ ಕಣದಲ್ಲಿಯೇ ಸಾವಿಗೀಡಾಗುವಂತಾಯಿತು. ಲಾಠಿ ಚಾರ್ಜ್‌, ಟಿಯರ್ ಗ್ಯಾಸ್ ಸಿಡಿಸಿದರು, ಲಖಿಂಪುರದಲ್ಲಿ ವಾಹನಗಳನ್ನು ಹಾಯಿಸಿ ಕೊಲ್ಲಲಾಯಿತು, ಗುಂಡಾಗಳಿಂದ ದಾಳಿ ನಡೆಸಿದರು, ಪೊಲೀಸರ ಹಿಂಸೆಗಳು, ಕೇಸುಗಳನ್ನು ಎದುರಿಸುವಂತಾಯಿತು. ಹೋರಾಟ ನಿರತರನ್ನು ನಕಲಿ ರೈತರೆಂದು ಅವಾಚ್ಯವಾಗಿ ನಿಂದಿಸಲಾಯಿತು ಎಂದು ಅವರು ಹೇಳಿದರು.

ಒಂದು ವರ್ಷದಿಂದ ನಡೆದ ರೈತರ ಹೋರಾಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕ ರೈತರಿಗೆ ಧನ್ಯವಾದ ಹೇಳಿದರು.

ಮುಖಂಡರಾದ ಎಚ್.ಟಿ.ಭರತ್ ಕುಮಾರ್‌, ಮಲ್ಲಿಕಾರ್ಜುನ ಎಚ್.ಟಿ, ದಸ್ತಗಿರ ಉಕ್ಕಲಿ, ಅಕ್ಷಯ, ಸುರೇಖಾ ಕಡಪಟ್ಟಿ, ಕಾವೇರಿ, ಜಮೀರ್ ಮತ್ತಿತರರು ಭಾಗವಹಿಸಿದ್ದರು.

****

ರೈತರ ಪ್ರತಿರೋಧಕ್ಕೆ ಮಣಿದ ಸರ್ಕಾರ

ವಿಜಯಪುರ: ದೇಶದ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುವ ನರೇಂದ್ರ ಮೋದಿ ಸರ್ಕಾರದ ದೇಶ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತರು, ಕಾರ್ಮಿಕರು ಹಾಗೂ ನಾಗರಿಕರ ಸಮರ ಶೀಲ ಹೋರಾಟಕ್ಕೆಐತಿಹಾಸಿಕ ಜಯ ಲಭಿಸಿದೆಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರಿ ಹೇಳಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನೀತಿಗಳನ್ನು ಜಾರಿಗೊಳಿಸುವಲ್ಲಿ ತಾನೇ ಮೊದಲಿಗನೆಂದು ಬೀಗಿ, ಕಾರ್ಪೊರೇಟ್‌ ಕಂಪನಿಗಳಿಗೆ ರಾಜ್ಯದ ಕೃಷಿಯನ್ನು ವಹಿಸುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ಗೋ ಹತ್ಯಾ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ವಾಪಾಸ್‌ ಪಡೆಯುವ ಕುರಿತು ರಾಜ್ಯ ಸರ್ಕಾರ ಮಾತನಾಡದೇ ಈಗಲೂ ಮೌನವಾಗಿರುವುದು ಖಂಡನೀಯ. ತಕ್ಷಣ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

****

ಸಂಘಟಿತ ಹೋರಾಟಕ್ಕೆ ದೊರೆತ ಫಲ

ವಿಜಯಪುರ:ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದ ಕಾರ್ಪೊರೇಟ್ ಪರ, ರೈತ ವಿರೋಧಿ ಕರಾಳ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 541 ಸಂಘಟನೆಗಳ ಸಂಘಟಿತ ಹಾಗೂ ಐತಿಹಾಸಿಕ ಹೋರಾಟಕ್ಕೆ ಐತಿಹಾಸಿಕ ಗೆಲವು ಸಿಕ್ಕಿದೆ ಎಂದು ಡಿವೈಎಫ್ಐ ಜಿಲ್ಲಾ ಸಮಿತಿ ಮುಖಂಡರಾದಈರಣ್ಣ ಬೆಳ್ಳೂಂಡಗಿ, ಪ್ರವೀಣ ಹಿರೇಮಠ ತಿಳಿಸಿದ್ದಾರೆ.

ರೈತರ ಹೋರಾಟ ಕೇವಲ ಮೂರು ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ ಮಾತ್ರವೇ ಅಲ್ಲದೇ, ಎಲ್ಲ ರೈತರ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಶಾಸನದ ಈಡೇರಿಕೆಗಾಗಿ ಕೂಡ ಎಂಬುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಪ್ರಬಲವಾಗಿ ಪ್ರತಿಪಾದಿಸುತ್ತಲೆ ಇದೆ. ರೈತರ ಈ ಬಹು ಮುಖ್ಯ ಬೇಡಿಕೆ ಈಗಲೂ ಇತ್ಯರ್ಥ ಆಗಿಲ್ಲ. ಹಾಗೇಯೇ ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ಸಾತಿ ಪ್ರಶ್ನೆಯೂ ಹಾಗೇ ಇದೆ ಎಂದು ಅವರು ಹೇಳಿದ್ದಾರೆ.

****

‌ರೈತರಿಗೆ ದ್ರೋಹ ಬಗೆಯುವ ಕೇಂದ್ರದಷಡ್ಯಂತ್ರ ವಿಫಲವಾಗಿದೆ. ಬೇಷರತ್ತಾಗಿ ಕೈಮುಗಿದು ರೈತರ ಕ್ಷಮೆ ಯಾಚಿಸಬೇಕು. ಬಿಜೆಪಿ ಮತ್ತು ಪ್ರಧಾನಿ ದೇಶವ ಮುನ್ನಡೆಸಲು ಯೋಗ್ಯರಲ್ಲ ಎಂಬುದು ಸಾಬೀತಾಗಿದೆ

–ಆಸೀಫ್ ಹೆರಕಲ್,ಮಾಧ್ಯಮ ಸಂಚಾಲಕ, ಆಮ್ ಆದ್ಮಿ ಪಕ್ಷ, ವಿಜಯಪುರ

****

ರೈತ ಚಳವಳಿಯಲ್ಲೇ ಚಾರಿತ್ರಿಕ ವಿಜಯ ಇದು. ಹುತಾತ್ಮ ರೈತರ ಕುಟುಂಬಗಳ ಜವಾಬ್ದಾರಿಯನ್ನು ಮೋದಿ ಸರ್ಕಾರ ತೆಗೆದುಕೊಳ್ಳಬೇಕು
–ಬಾಳು ಜೇವೂರ, ಎಸ್‌ಯುಸಿಐ, ಜಿಲ್ಲಾ ಸಂಚಾಲಕ ವಿಜಯಪುರ

****

ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದ್ದಿದ್ದು ಸ್ವಾಗರ್ತಹ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ
–ಶರಣು ಸಬರದ,ಅಧ್ಯಕ್ಷ, ಜಿಲ್ಲಾ ಯುವ ಪರಿಷತ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT