ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಬದುಕಿಗೆ ನೆಮ್ಮದಿ ನೀಡಿದ ಕೃಷಿ

10 ಎಕರೆಯಲ್ಲಿ ತರಹೇವಾರಿ ಕೃಷಿ; ವಾರ್ಷಿಕ ₹ 20 ಲಕ್ಷ ಆದಾಯ!
Last Updated 10 ನವೆಂಬರ್ 2022, 14:03 IST
ಅಕ್ಷರ ಗಾತ್ರ

ಆಲಮೇಲ: ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಅಶೋಕ ಸದಲಾಪುರ ಅವರು ತಮ್ಮ 10 ಎಕರೆ ಜಮೀನು ಅಭಿವೃದ್ದಿಪಡಿಸಿ, ಅಲ್ಲಿಯೇ ಕೃಷಿ ಮಾಡುವ ಮೂಲಕ ಕೈತುಂಬ ಆದಾಯ ಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಪಟ್ಟಣದವರೇ ಆದ ಸದಲಾಪುರ ಅವರು 65ರ ಹರೆಯದ ಯುವಕನಂತೆ ಸದಾ ಕೃಷಿ ಕೆಲಸದಲ್ಲಿ ನಿರತರಾಗಿ ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ.

ನಿವೃತ್ತಿಯ ನಂತರ ತಮ್ಮ ಧರ್ಮಪತ್ನಿ ಕಸ್ತೂರಿಬಾಯಿಯೊಂದಿಗೆ ಹೊಲದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಅವರ ಕಾಯಕ ಭೂಮಿಯೊಂದಿಗೆ ಬೆಸೆದಿರುತ್ತದೆ.

ನಿತ್ಯ ಹತ್ತಾರು ಕೂಲಿ ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡುತ್ತಿರುತ್ತಾರೆ. 10 ಎಕರೆಯ ತಮ್ಮ ಹೊಲವನ್ನು ತೋಟವನ್ನಾಗಿ ಪರಿವರ್ತಿಸಿದ ಅವರ ಸಾಹಸ ಮೆಚ್ಚುವಂತಹದ್ದು, ಎರಡು ಕೊಳವೆಬಾವಿಗಳನ್ನು ತೊಡಿದಾಗ ಜಲಧಾರೆ ಉಕ್ಕಿಹರಿಯಿತು. ಇದರಿಂದ ಪ್ರೇರಣೆಗೊಂಡ ಅಶೋಕ ಅವರು ಇಡಿ ಜಮೀನನ್ನು ಹಣ್ಣು ಮತ್ತು ತರಕಾರಿ, ಬದುವನ್ನು ತೆಂಗು, ಮಾವು, ಸೀತಾಫಲ, ರಾಮಫಲ, ಲಕ್ಷ್ಮಣಫಲ, ಹನುಮಫಲ ಗಿಡಗಳಿಂದ ಅಲಂಕರಿಸಿದ್ದಾರೆ.

ಜಮೀನಿನ ಎರಡು ಬದಿಗಳಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. 200X180 ಅಡಿ ಅಳತೆಯ 50 ಅಡಿ ಆಳದ ಬೃಹತ್ ಕೃಷಿ ಹೊಂಡ ಮತ್ತು 100X100 ಅಳತೆಯ ಕೃಷಿ ಹೊಂಡಗಳಿಗೆ ₹ 20 ಲಕ್ಷ ಖರ್ಚು ಮಾಡಿದ್ದಾರೆ.

ಸರ್ಹಾರದ ಸಹಾಯಧನವು ಸ್ವಲ್ಪ ಸಿಕ್ಕಿದೆ. ಈ ಎರಡೂ ಹೊಂಡಗಳಲ್ಲಿ ಆರು ತಿಂಗಳು 10 ಎಕರೆ ಹೊಲಕ್ಕೆ ಬೇಕಾಗುವಷ್ಟು ನೀರು ಸಂಗ್ರಹ ಮಾಡಿಟ್ಟಿರುತ್ತಾರೆ. ಎಂತಹ ಬಿರು ಬೇಸಿಗೆಯಲ್ಲೂ ಈ ಕೃಷಿ ಹೊಂಡದ ನೀರು ಖಾಲಿಯಾಗುವುದೇ ಇಲ್ಲ.

ಐದು ಎಕರೆಯಲ್ಲಿ ದ್ರಾಕ್ಷಿ ಬೆಳೆ ಮಾಡಿದ್ದಾರೆ. ಅದಕ್ಕೆ ಬೇಕಾಗುವ ಎಲ್ಲಾ ಪರಿಕರಗಳನ್ನು ಸ್ವಂತ ಮಾಡಿಕೊಂಡಿದ್ದಾರೆ. ಅಲ್ಲದೇ, ಈ ಕುರಿತು ತರಬೇತಿಯೂ ಪಡೆದಿರುವುದರಿಂದ ಯಾವೆಲ್ಲ ಸಂದರ್ಭದಲ್ಲಿ ಏನು ಸಿಂಪಡಿಸಬೇಕು, ಕಳೆ, ಕಟಾವು, ಮಾರುಕಟ್ಟೆ ಎಲ್ಲವನ್ನೂ ಚೆನ್ನಾಗಿ ಬಲ್ಲ ಅವರು ಕಳೆದ ವರ್ಷ ₹ 20 ಲಕ್ಷ ದ್ರಾಕ್ಷಿ ಒಂದರಿಂದಲೇ ಆದಾಯ ಪಡೆದಿದ್ದಾರೆ. ಎಲ್ಲ ಖರ್ಚು ತೆಗೆದರೂ ₹ 10 ಲಕ್ಷ ಆದಾಯ ಉಳಿಯುತ್ತದೆ ಎನ್ನುತ್ತಾರೆ ಅವರು.

ತರಹೇವಾರಿ ಹಣ್ಣಿನ ಗಿಡ:

ಹತ್ತು ಎಕರೆಗೆ ರಕ್ಷಣಾ ಗೋಡೆಯಂತೆ ಜಮೀನ ಸುತ್ತಲೂ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.

ಅವರು ನಿವೃತ್ತಿಯ ನಂತರ ಮಾಡಿದ ಮೊದಲ ಕೆಲಸವೇ ಇದು, ಈಗ ಇದು ಲಾಭ ತರುವ ವಿಸ್ತೀರ್ಣಕ್ಷೇತ್ರ. 150 ತೆಂಗಿನ ಗಿಡಗಳಿದ್ದು ಪ್ರತಿ ತೆಂಗಿನ ಗಿಡವು 400 ಕಾಯಿಗಳನ್ನು ನೀಡುತ್ತಿವೆ. ಎಳೆನೀರು ಮಾರುವವರು ಹೊಲಕ್ಕೆ ಬಂದು ₹20 ರಂತೆ ಖರೀದಿಸುತ್ತಾರೆ.

ಗಿಡದಲ್ಲಿ ಒಣಗಿದ ಕಾಯಿಗಳನ್ನು ಸ್ವತಃ ಯಂತ್ರದ ಸಹಾಯದಿಂದ ಸುಲಿದು ಅವುಗಳನ್ನು ಮಾರುತ್ತಾರೆ. ಇದರಿಂದ ಪ್ರತಿ ವರ್ಷ ₹2 ಲಕ್ಷ ಆದಾಯವಾಗುತ್ತದೆ ಎನ್ನುತ್ತಾರೆ. ಅಲ್ಲದೇ, ಮಾವು 60 ಗಿಡಗಳು, ಸೀತಾಫಲ 100 ಗಿಡಗಳು ಇದ್ದು, ಅವುಗಳಿಂದಲೂ ಸ್ವಲ್ಪ ಹಣ ಬರುತ್ತದೆ. ಅಲ್ಲದೇ, ರಾಮಫಲ, ಲಕ್ಷ್ಮಣಫಲ, ಹನುಮಾನ ಫಲಗಳನ್ನು ಆರೋಗ್ಯದೃಷ್ಟಿಯಿಂದ ತಮ್ಮ ಮನೆಗೆ ಬೇಕಾಗುವುದಕ್ಕೆ ಬೆಳೆಸಿದ್ದಾರೆ. ಅವುಗಳನ್ನು ನೆರೆಹೊರೆಯವರಿಗೆ ಉಚಿತವಾಗಿಯೂ ಕೊಡುತ್ತಾರೆ.
ಒಬ್ಬ ನಿವೃತ್ತಿಯಾದ ನಂತರ ಹೇಗೆ ಬದುಕುಕಟ್ಟಿಕೊಳ್ಳಬೇಕು ಎಂಬುದನ್ನು ಇವರ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅನ್ನಿಸದೇ ಇರಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT