ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲ ಬಿಮಾ ಯೋಜನೆ; ಹೆಚ್ಚಬೇಕಿದೆ ರೈತರ ನೋಂದಣೆ

Last Updated 12 ಸೆಪ್ಟೆಂಬರ್ 2021, 7:09 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ 3.6 ಲಕ್ಷ ರೈತರು ಕೃಷಿಯಲ್ಲಿ ನಿರತವಾಗಿದ್ದಾರೆ.ಇದರಲ್ಲಿ, ಸುಮಾರು 80 ಸಾವಿರ ರೈತರು ಮಾತ್ರ ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಬೆಳೆ ವಿಮೆ ತುಂಬುವ ಮೂಲಕ ವಿಮೆ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ.‌ ಉಳಿದ ರೈತರು ಹತ್ತು ಹಲವು ಕಾರಣಗಳಿಂದ ಈ ವಿಮೆಯ ಸೌಲಭ್ಯ ಪಡೆದುಕೊಳ್ಳಲು ಮುಂದೆ ಬಂದಿಲ್ಲ.

ಬೆಳೆ ವಿಮೆ ಮೊತ್ತ ಹೆಚ್ಚೇನು ಇರುವುದಿಲ್ಲ.ವಿಮೆ ಮೊತ್ತದಲ್ಲಿ ರೈತರು ಕೇವಲ ಶೇ 2 ರಷ್ಟು ಮಾತ್ರ ಪಾವತಿಸಬೇಕು. ಉಳಿಕೆ ಮೊತ್ತವನ್ನು ಕೇಂದ್ರ, ರಾಜ್ಯ ಸರ್ಕಾರಗಳೇ ಭರಿಸುತ್ತವೆ. ಹೀಗಾಗಿ ಇದು ರೈತರಿಗೆ ಹೊರೆಯಾಗದು. ರೈತರಿಗೆ ನೆರವಾಗುವುದು. ಆದರೆ, ರೈತರು ವಿಮೆ ಬಗ್ಗೆ ನಿರಾಸಕ್ತಿ ವಹಿಸಿದ್ದಾರೆ.

ಬೆಳೆ ವಿಮೆ ಪಾವತಿಸಿದವರಿಗೆಲ್ಲ ಪರಿಹಾರ ಮೊತ್ತ ಲಭಿಸಬೇಕು ಮತ್ತು ಏಕ ಪ್ರಕಾರದ ವಿಮೆ ಪರಿಹಾರ ಲಭಿಸಬೇಕು ಎಂಬುದು ರೈತರ ಹಕ್ಕೊತ್ತಾಯವಾಗಿದೆ. ಆದರೆ, ವಿಮೆ ತುಂಬಿದ ತಕ್ಷಣ ಪರಿಹಾರ ಲಭಿಸುವುದಿಲ್ಲ. ಬಿತ್ತನೆ ಬಳಿಕ ಒಂದು ವೇಳೆ ಬೆಳೆ ನಷ್ಟವಾದರೆ, ಇಳುವರಿ ಕಡಿಮೆ ಬಂದರೆ ಅಥವಾ ಕಟಾವು ಬಳಿಕ ಬೆಳೆ ನಷ್ಟವಾದರೆ ಮಾತ್ರ ವಿಮೆ ಪರಿಹಾರ ಖಚಿತವಾಗಿ ರೈತರಿಗೆ ಲಭಿಸುತ್ತದೆ.

ಬೆಳೆ ವಿಮೆ ಬಗ್ಗೆ ರೈತರಿಗೆ ಮಾಹಿತಿ, ಜಾಗೃತಿ ಇಲ್ಲೇಂದೇನಿಲ್ಲ. ಎಲ್ಲರಿಗೂ ಮಾಹಿತಿ ಇದೆ. ಕೃಷಿ ಇಲಾಖೆ, ಸರ್ಕಾರ ಸಾಕಷ್ಟು ಪ್ರಚಾರ, ಜಾಗೃತಿ ಮೂಡಿಸಿದೆ. ಆದರೂ ರೈತರು ಯೋಜನೆ ಬಗ್ಗೆ ನಿರಾಸಕ್ತಿ ವಹಿಸಿದ್ದಾರೆ.

ಫಸಲ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ2016-17ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು ಅಂದರೆ, 1,24,438 ರೈತರು ಬೆಳೆ ವಿಮೆ ನೋಂದಣಿ ಮಾಡಿದ್ದರು. 2018-19ನೇ ಸಾಲಿನ ಮುಂಗಾರಿನಲ್ಲಿ ₹ 255 ಕೋಟಿ ವಿಮೆ ಪರಿಹಾರ ಜಿಲ್ಲೆಗೆ ಬಂದಿದೆ. ಪ್ರಸಕ್ತ ಮುಂಗಾರಿನಲ್ಲಿ 81 ಸಾವಿರ ರೈತರು ಬೆಳೆವಿಮೆ ನೋಂದಣಿ ಮಾಡಿಕೊಂಡಿದ್ದಾರೆ.

ಬೆಳೆ ವಿಮೆ ನೋಂದಣಿ:

2016-17ನೇ ಸಾಲಿನಲ್ಲಿ ಆರಂಭಗೊಂಡ ಕರ್ನಾಟಕ ರೈತ ಸುರಕ್ಷಿತ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಆರಂಭ ವರ್ಷ ಮುಂಗಾರು ಹಂಗಾಮಿನಲ್ಲಿ 15,162 ರೈತರು ವಿಮೆ ನೋಂದಣಿ ಮಾಡಿಕೊಂಡರೆ, ಹಿಂಗಾರು ಹಂಗಾಮಿನಲ್ಲಿ 1,24,438 ರೈತರು ನೋಂದಣಿ ಮಾಡಿಕೊಂಡಿದ್ದಾರೆ. 2017-18 ಸಾಲಿನ ಮುಂಗಾರು 65,099, ಹಿಂಗಾರು 733, 2018-19 ಸಾಲಿನ ಮುಂಗಾರು 93,941, ಹಿಂಗಾರು 69,791, 2019-20 ಸಾಲಿನ ಮುಂಗಾರು 18,340, ಹಿಂಗಾರು 81,298, 2020-21ನೇ ಸಾಲಿನ ಹಿಂಗಾರು 76,702, ಹಿಂಗಾರು 9,558 ರೈತರು ವಿಮೆ ನೋಂದಾಯಿಸಿ ಕೊಂಡಿದ್ದಾರೆ.

ಹೋಬಳಿ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದಾದರೂ ಒಂದು ಜಮೀನಿನಲ್ಲಿ ರ‍್ಯಾಂಡಮ್‌ ಟೆಸ್ಟ್ ನಡೆಸಿ ಬೆಳೆ ವಿಮೆ ಪರಿಹಾರ ನೀಡುವುದರಿಂದ ಬೆಳೆ ಹಾನಿಯಾದ ಬಹುತೇಕ ರೈತರು ಪರಿಹಾರದಿಂದ ವಂಚಿತರಾಗುತ್ತಾರೆ. ಹೀಗಾಗಿ ಪ್ರತಿಯೊಂದು ರೈತರ ಜಮೀನಿನ ಹಾನಿ ಕುರಿತಂತೆ ಪರಿಶೀಲಿಸಿ ನ್ಯಾಯಯುತವಾಗಿ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕು ಎಂದು ಹಲವು ರೈತರ ಆಗ್ರಹವಾಗಿದೆ.

ಪ್ರತಿ ವರ್ಷ ತಪ್ಪದೆ ವಿಮೆ ನೋಂದಣಿ ಮಾಡುತ್ತೇನೆ. ಫಸಲ ಬಿಮಾ ಯೋಜನೆ ಆರಂಭಕ್ಕೂ ಮೊದಲು ವಿಮೆ ಪರಿಹಾರ ಅಷ್ಟಾಗಿ ದೊರಕುತ್ತಿರಲಿಲ್ಲ. ಇದೀಗ ವಿಮೆ ತುಂಬಿದರೆ ಬೆಳೆ ಹಾನಿಯ ನಷ್ಟ ಸಿಗುತ್ತದೆ ಎಂಬ ಭರವಸೆ ಬಂದಿದೆ. ನಮ್ಮ ಕುಟುಂಬಕ್ಕೆ ಸುಮಾರು ₹2 ಲಕ್ಷದಿಂದ ₹3 ಲಕ್ಷದ ವರೆಗೆ ವಿಮೆ ಪರಿಹಾರ ದೊರಕಿದೆ. ತುಂಬಿದಕ್ಕೆ ನಷ್ಟ ಅಂತ ಅನಸಿಲ್ಲ ಎಂದು ಬಸವನಬಾಗೇವಾಡಿ ತಾಲ್ಲೂಕು ಬೂದಿಹಾಳ ಗ್ರಾಮದ ರೈತ ದಯಾನಂದ ಸೋಮನಾಳ ಹೇಳುತ್ತಾರೆ.

ಇಂಡಿಯಲ್ಲಿ ನೀರಸ ಪ್ರತಿಕ್ರಿಯೆ:

ಫಸಲ್ ಭೀಮಾ ಯೋಜನೆಗೆ ಇಂಡಿ ತಾಲ್ಲೂಕಿನಲ್ಲಿಯ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಆದರೂ ಕೂಡಾ 2018-2019ನೇ ಸಾಲಿನಲ್ಲಿ 3774 ಜನ ರೈತರು ಭೀಮಾ ಫಸಲ್ ಯೋಜನೆಯ ಅಡಿಯಲ್ಲಿ ಸೋಂದಣಿ ಮಾಡಿಕೊಂಡಿದ್ದರು. ಅವರಲ್ಲಿ 3012 ಜನ ರೈತರು ಪರಿಹಾರ ಪಡೆದುಕೊಂಡಿದ್ದಾರೆ. ಅದರಂತೆ, ಹಿಂಗಾರಿ ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಒಟ್ಟು 9919 ಜನ ರೈತರು ಸೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 7745 ಜನ ಪರಿಹಾರ ಪಡೆದುಕೊಂಡಿದ್ದಾರೆ.

2019-2020ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 1974 ಜನ ರೈತರು ಸೋಂದಣಿ ಮಾಡಿಕೊಂಡಿದ್ದು, 1393 ಜನ ಪರಿಹಾರ ಪಡೆದುಕೊಂಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ 9466 ಜನ ನೊಂದಣಿ ಮಾಡಿಕೊಂಡಿದ್ದು, ಅವರಲ್ಲಿ 2355 ಜನ ಮಾತ್ರ ಪರಿಹಾರ ಪಡೆದುಕೊಂಡಿದ್ದಾರೆ.

2020-2021ನೇ ಸಾಲಿನಲ್ಲಿ ಈಗಾಗಲೇ 9103 ಜನ ರೈತರು ನೋಂದಣಿ ಮಾಡಿಕೊಂಡಿದ್ದು, ಇನ್ನೂವರೆಗೆ ಪ್ರಕ್ರಿಯೆ ಚಾಲನೆಯಲ್ಲಿದೆ. ಹಿಂಗಾರು ಹಂಗಾಮಿನಲ್ಲಿ ಇದೀಗ ಕೇವಲ 891 ಜನ ರೈತರು ನೊಂದಣಿ ಮಾಡಿಕೊಂಡಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ.

ಪ್ರಧಾನ ಮಂತಿ ಭೀಮಾ ಫಸಲ್ ಯೋಜನೆ ಚೆನ್ನಾಗಿದೆ. ಆದರೆ, ನಿರ್ವಹಣೆ ಸರಿಯಾಗಿಲ್ಲ. ಸೋಂದಣಿ ಮಾಡಿಕೊಂಡಿರುವ ರೈತರಿಗೆ ಸರಿಯಾಗಿ ಪರಿಹಾರ ಬಂದಿಲ್ಲ. ಕೆಲವು ರೈತರು ಕಳೆದ 3 ವರ್ಷಗಳಿಂದ ಸೋಂದಣಿ ಮಾಡುತ್ತ ಬಂದರೂ ಕೂಡಾ ಒಮ್ಮೆಯೂ ಕೂಡಾ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಇಂಡಿ ತಾಲ್ಲೂಕಿನ ನಾದ ಕೆ.ಡಿ. ಗ್ರಾಮದಪ್ರಗತಿಪರ ರೈತ ಎಸ್.ಟಿ.ಪಾಟೀಲ.

ಸಿಂದಗಿಯಲ್ಲೂ ಏರಿಕೆ:

ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿವಿಮೆ ಮಾಡಿಸುವ ರೈತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಿಂದಗಿ ಭಾಗದಲ್ಲಿ 3505 ರೈತರು ದೇವರಹಿಪ್ಪರಗಿ ಭಾಗದಲ್ಲಿ 11,630 ರೈತರು ಈ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ.

***

ಫಸಲ್ ಬಿಮಾ ಯೋಜನೆ

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯಾ ತಾಲ್ಲೂಕಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳಿಗೆ, ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎನ್ನುತ್ತಾರೆ ವಿಜಯಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್‌.

ಮುಂಗಾರು ಹಂಗಾಮಿನಲ್ಲಿ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಯಿಂದ ಆದ ನಷ್ಟ ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುತ್ತದೆ.

ರೈತರು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 72 ಗಂಟೆಯೊಳಗಾಗಿ ತಿಳಿಸಿದಲ್ಲಿ ಪರಿಹಾರ ಒದಗಿಸಲಾಗುತ್ತದೆ. ನಷ್ಟದ ಬಗೆಗಿನ ಮಾಹಿತಿ ಸ್ವೀಕರಿಸಿದ ನಂತರ ವಿಮಾ ಸಂಸ್ಥೆಗಳು ಬೆಳೆ ನಷ್ಟ ನಿರ್ಧರಿಸುವುದಕ್ಕೆ ತಜ್ಞರನ್ನು ಸಂಬಂಧಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸುತ್ತಾರೆ.

ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ 14 ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರ ಇತ್ಯರ್ಥಪಡಿಸಲಿದೆ ಎನ್ನುತ್ತಾರೆ ಅವರು.

***

ಬೆಳೆ ವಿಮೆಗೆ ಒಳಪಟ್ಟ ಕ್ಷೇತ್ರ

ವಿಜಯಪುರ ಜಿಲ್ಲೆಯಲ್ಲಿ 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 61,079 ಎಕರೆ, ಹಿಂಗಾರಿನಲ್ಲಿ 5,77,777 ಎಕರೆ ಫಸಲ್‌ ಬೀಮಾ ಯೋಜನೆಗೆ ಒಳಪಟ್ಟಿತ್ತು.

2017-18ನೇ ಸಾಲಿನ ಮುಂಗಾರಿನಲ್ಲಿ 3,15,701 ಎಕರೆ, ಹಿಂಗಾರಿನಲ್ಲಿ 2,406 ಎಕರೆ, 2018-19ನೇ ಸಾಲಿನ ಮುಂಗಾರಿನಲ್ಲಿ 3,20,018 ಎಕರೆ, ಹಿಂಗಾರಿನಲ್ಲಿ 0 ಎಕರೆ, 2019-20ನೇ ಸಾಲಿನ ಮುಂಗಾರಿನಲ್ಲಿ 68,911 ಎಕರೆ, ಹಿಂಗಾರಿನಲ್ಲಿ 3,11,224 ಎಕರೆ, 2020-21ನೇ ಸಾಲಿನ ಮುಂಗಾರಿನಲ್ಲಿ 3,00,211 ಎಕರೆ, ಹಿಂಗಾರಿನಲ್ಲಿ 42,522 ಎಕರೆ ಕ್ಷೇತ್ರ ಬೆಳೆ ವಿಮೆಗೆ ಒಳಪಟ್ಟಿದೆ.

***

ಬಿಡುಗಡೆಯಾದವಿಮೆ ಪರಿಹಾರ ಮೊತ್ತ

ವಿಜಯಪುರ ಜಿಲ್ಲೆಯಲ್ಲಿ 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2,083 ರೈತರಿಗೆ ₹1.78 ಕೋಟಿ ಹಾಗೂ ಹಿಂಗಾರಿನಲ್ಲಿ 85,529 ರೈತರಿಗೆ ₹39.75 ಕೋಟಿ ವಿಮೆ ಪರಿಹಾರ ದೊರಕಿದೆ.

2017-18ನೇ ಸಾಲಿನ ಮುಂಗಾರಿನಲ್ಲಿ 39,906 ರೈತರಿಗೆ ₹76.27 ಕೋಟಿ, ಹಿಂಗಾರಿನಲ್ಲಿ 462 ರೈತರಿಗೆ ₹86.04 ಕೋಟಿ, 2018-19ನೇ ಸಾಲಿನ ಮುಂಗಾರಿನಲ್ಲಿ 63,804 ರೈತರಿಗೆ ₹255 ಕೋಟಿ, ಹಿಂಗಾರಿನಲ್ಲಿ 52,938 ರೈತರಿಗೆ ₹132.13 ಕೋಟಿ ಪರಿಹಾರ ಲಭಿಸಿದೆ.

2019-20ನೇ ಸಾಲಿನ ಮುಂಗಾರಿನಲ್ಲಿ 11,215 ರೈತರಿಗೆ ₹24.76 ಕೋಟಿ, ಹಿಂಗಾರಿನಲ್ಲಿ 23,849 ರೈತರಿಗೆ ₹29.16 ಕೋಟಿ, 2020-21ನೇ ಸಾಲಿನ ಮುಂಗಾರಿನಲ್ಲಿ 61,684 ರೈತರಿಗೆ ₹121.97 ಕೋಟಿ ಪರಿಹಾರ ಸಿಕ್ಕಿದೆ.

––––

ಪ್ರತಿ ವರ್ಷ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಹಾನಿಯಾದ ಪ್ರದೇಶಗಳಿಗೆ ನ್ಯಾಯಯುತವಾಗಿ ಪರಿಹಾರ ಸಹ ದೊರೆಯುತ್ತಿದೆ. ಇದರಿಂದ ಜನರಿಗೂ ವಿಮೆ ಬಗ್ಗೆ ವಿಶ್ವಾಸ ಬಂದಿದೆ
-ಡಾ.ರಾಜಶೇಖರ ವಿಲಿಯಮ್ಸ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ

––––

ಸಿಂದಗಿ ಭಾಗದಲ್ಲಿ ವಿಮೆ ಯೋಜನೆ ಪ್ರಯೋಜನ ರೈತರು ಅಷ್ಟಾಗಿ ಪಡೆದುಕೊಂಡಿಲ್ಲ. ಆದರೆ. ದೇವರಹಿಪ್ಪರಗಿ ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರೈತರು ವಿಮೆ ಸದುಪಯೋಗ ಪಡೆದುಕೊಂಡಿದ್ದಾರೆ.
-ಎಚ್.ವೈ.ಸಿಂಗೆಗೋಳ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಸಿಂದಗಿ.

–––

ವಿಮೆ ಯೋಜನೆ ರೈತರಿಗೆ ಅತ್ಯಂತ ಉತ್ಕೃಷ್ಟವಾದ ಯೋಜನೆಯಾಗಿದೆ. ಕಳೆದ 20 ವರ್ಷಗಳಿಂದ ವಿಮೆ ನೋಂದಣಿ ಮಾಡುತ್ತಲೇ ಇರುವೆ. 2017-18ರಲ್ಲಿ ಅತ್ಯಧಿಕ ₹ 5 ಲಕ್ಷ ವಿಮೆ ಪರಿಹಾರ ಪಡೆದುಕೊಂಡಿರುವೆ.
-ಶರಣಗೌಡ ಪಾಟೀಲ
ರೈತ, ಯಂಕಂಚಿ ಗ್ರಾಮ, ಸಿಂದಗಿ,

–––

ಫಸಲ್ ಬಿಮಾ ಯೋಜನೆ ನೋಂದಾಣಿಯಾದ ರೈತರಿಗೆ ವಿಮೆಹಣ ಜಮೆಯಾಗಿದೆ. ರೈತರ ಹರುಷಕ್ಕೆ ಕಾರಣವಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ನೋಂದಣಿ ಹೆಚ್ಚುತ್ತ ನಡೆದಿದೆ.
-ಮಹೇಶ ಜೋಶಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ತಾಳಿಕೋಟೆ.

–––

ಫಸಲು ಹಾಳಾದರೆ ಮಧ್ಯವರ್ತಿಗಳಿಲ್ಲದೇ ನೇರವಾಗಿ ಅವನ ಖಾತೆಗೇ ಹಣ ಜಮೆಯಾಗುತ್ತದೆ. ಆದರೆ, ಅದು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ವಿಮಾ ಕಂಪೆನಿ ಶೀಘ್ರವಾಗಿ ಹಣವನ್ನು ರೈತರಿಗೆ ಜಮೆ ಮಾಡಿಸಬೇಕು
-ಬಸವರಾಜ ಕೋರಿ, ಯುವ ರೈತ, ತಾಳಿಕೋಟೆ

–––


ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಬಾಬುಗೌಡ ಪಾಟೀಲ, ಶಾಂತೂ ಹಿರೇಮಠ, ಎ.ಸಿ.ಪಾಟೀಲ, ಶರಣಬಸಪ್ಪ ಶಿ.ಗಡೇದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT