ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲಿಗೆ ಬೆಂಕಿ; ಸಾಯತೊಡಗಿವೆ ಸಾಲು ಗಿಡಮರಗಳು

Last Updated 8 ಏಪ್ರಿಲ್ 2021, 20:15 IST
ಅಕ್ಷರ ಗಾತ್ರ

ನಾಲತವಾಡ: ಹೊಲ, ತೋಟಗಳ ಬದುಗಳಿಗೆ ರೈತರು ಬೆಂಕಿ ಹಚ್ಚುತ್ತಿರುವುದರಿಂದ ರಸ್ತೆಯ ಬದುಗಳಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಹೊಂಗೆ, ಬೇವು, ಆಲ, ಅರಳೆ ಮತ್ತಿತರ ಗಿಡ,ಮರಗಳು ಸುಟ್ಟು ಹೋಗುತ್ತಿವೆ.

ಬೇಸಿಗೆ ಕಾಲಿಡುತ್ತಿದ್ದಂತೆ ಬದುಗಳಲ್ಲಿರುವ ಗಿಡ ಮರ ಬಳ್ಳಿಗಳ ಎಲೆಗಳು ಒಣಗಿ ಉದುರಿ ಬೇಲಿಯಲ್ಲಿ ಉಳಿಯುತ್ತದೆ. ಮಾಗಿ ಉಳುಮೆ ನಂತರ ಮುಂಗಾರು ಬಿತ್ತನೆ ಬೆಳೆಗೆ ಆತಂಕ ಉಂಟು ಮಾಡಬಲ್ಲ ಕಳೆಗಳ ಹಾಗೂ ಅವುಗಳ ಬೀಜಗಳನ್ನು ನಾಶಪಡಿಸುವ ಉದ್ದೇಶದಿಂದ ರೈತರು ಸುಡುವುದು ಸಾಮಾನ್ಯ. ಇದರಿಂದ ಬೇಲಿ ಅಂಚಿನ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗುತ್ತಿವೆ.

ಬೇಲಿಗೆ ಬೆಂಕಿ ಹಚ್ಚುತ್ತಿರುವುದರಿಂದ ಅರಣ್ಯ ಇಲಾಖೆ ಸೇರಿದಂತೆ ಪರಿಸರ ಪ್ರೇಮಿಗಳು ವರ್ಷಾನುಗಟ್ಟಲೆ ಕಷ್ಟಪಟ್ಟು ಬೆಳೆಸಿದ ಮರಗಳು ಬೆಂಕಿಯಲ್ಲಿ ಬೆಂದುಹೋಗಿ ತೊಂದರೆಗೀಡುಮಾಡುತ್ತಿವೆ.

ಹೊಲ, ತೋಟಗಳಲ್ಲಿ ಒಣಹುಲ್ಲು, ಕೃಷಿ ತ್ಯಾಜ್ಯ ಇದ್ದರಂತೂ ಬೆಂಕಿ ಇಡೀ ಹೊಲ, ತೋಟಕ್ಕೆ ಹರಡುತ್ತದೆ. ಪಕ್ಕದ ಜಮೀನುಗಳಿಗೂ ಬೆಂಕಿಯ ಕೆನ್ನಾಲಿಗೆ ಚಾಚುವುದುಂಟು.

ಬೇಲಿಗೆ ಬೆಂಕಿ ಬಿದ್ದರೆ ಗಿಡಮರಗಳೊಂದಿಗೆ ಅವುಗಳ ಬೀಜಗಳೂ, ಬೇಲಿಯಲ್ಲಿರುವ ಹಲವು ಜೀವ ಜಂತುಗಳು ಸಾವನ್ನಪ್ಪುತ್ತವೆ. ಆದ್ದರಿಂದ ರಸ್ತೆ ಪಕ್ಕದ ಬೇಲಿಗಳಿಗೆ ಬೆಂಕಿ ಹಚ್ಚುವ, ಹರಡುವುದನ್ನು ತಪ್ಪಿಸುವುದು ಅತ್ಯವಶ್ಯಕ.

ಬೆಂಕಿ ತಡೆಗಟ್ಟಲು ಸಲಹೆ:

ಬದುಗಳಿಗೆ ಕಳೆ ನಾಶಕ ಸಿಂಪಡಿಸುವ ಮೂಲಕ ಕಳೆ ಇಲ್ಲದಂತೆ ಮಾಡಬಹುದಾಗಿದೆ, ಪ್ರಗತಿಶೀಲ ರೈತರು ಕಳೆಗಳು ಹೂವುಗಳನ್ನು ಬಿಡುವ ಪೂರ್ವದಲ್ಲಿ ಕಿತ್ತು ಹಸಿರೆಲೆಯ ಸಾವಯವ ಗೊಬ್ಬರ ತಯಾರಿಸಿ ಬಳಕೆ ಮಾಡುತ್ತಿದ್ದು, ಅದನ್ನು ಅನುಸರಿಸಬಹುದಾಗಿದೆ.

ಜಮೀನಿನ ಸುತ್ತಲೂ ಹಸಿರು ಬೇಲಿಗೆ ಬದಲಾಗಿ ತಂತಿ ಬೇಲಿಯನ್ನು ಹಾಕಬೇಕು. ಇದು ಸ್ವಲ್ಪ ವೆಚ್ಚವೆನಿಸಿದರೂ ಬೆಂಕಿಯಿಂದ ಉಂಟಾಗುವ ನಷ್ಟವನ್ನು ಗಮನಿಸಿದರೆ ವೆಚ್ಚ ಕಡಿಮೆ.

ಹೊಲ ಗದ್ದೆಗಳಲ್ಲಿ ಹುಲ್ಲು, ಕಾಚಿ, ಗಿಡಗಂಟಿಗಳು ಬೆಳೆಯದಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಪೂರ್ಣ ಪ್ರಮಾಣದಲ್ಲಿ ಉಳುಮೆ ಮಾಡಬೇಕು. ಉದುರಿದ ಎಲೆಯನ್ನು ಭೂಮಿಗೆ ಸೇರಿಸಬೇಕು. ಜಮೀನಿನ ಬೇಲಿಯ ಪಕ್ಕದಲ್ಲಿ ಹಾಗೂ ಒಳಭಾಗದಲ್ಲಿ ಅಲ್ಲಲ್ಲಿ ಕಾಲುವೆಗಳನ್ನು ನಿರ್ಮಿಸುವುದರ ಮೂಲಕ ಬೆಂಕಿ ಹರಡುವಿಕೆಯನ್ನು ತಡೆಯಬಹುದು.

***

'ಕಾಯ್ದಿಟ್ಟ ಅರಣ್ಯ ವಲಯದಲ್ಲಿ ಬೆಂಕಿ ಹಚ್ಚಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆದರೆ, ರಸ್ತೆಬದಿಯಲ್ಲಿರುವ ಮರಗಳ ಸನಿಹದಲ್ಲಿ ಬೆಂಕಿ ಹಚ್ಚಿದವರ ಮೇಲೆ ಕ್ರಮ ಕೈಗೊಳ್ಳಲಾಗದು. ಜನರೇ ಅರಿತುಕೊಳ್ಳಬೇಕು'

-ಮಲ್ಲಪ್ಪ ತೇಲಿ, ಉಪ ವಲಯ ಅರಣ್ಯಾಧಿಕಾರಿ, ಮುದ್ದೇಬಿಹಾಳ.

***

'ಹೊಲದ ಬೇಲಿಗೆ ಬೆಂಕಿ ಹಚ್ಚುವ ಪೂರ್ವದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಎಂಬ ಕಾನೂನನ್ನು ಜಾರಿಗೆ ತರಬೇಕು. ಅರಣ್ಯ ಸಂಪತ್ತು ನಾಶವಾದರೆ ಜೀವಿ ಸಂಕುಲವೇ ನಾಶವಾದಂತೆ'

– ದೇವು ಪತ್ತಾರ,ಬಿಜ್ಜೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT