ಸೋಮವಾರ, ಜೂನ್ 21, 2021
20 °C

ಇಂಡಿ ಮಾಜಿ ಶಾಸಕ ಆರ್‌.ಆರ್‌.ಕಲ್ಲೂರ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಹಿರಿಯ ಕಾಂಗ್ರೆಸ್‌ ಮುಖಂಡ ಆರ್‌.ಆರ್‌.ಕಲ್ಲೂರ  (92) ಗುರುವಾರ ನಿಧನರಾದರು.

ಅವರಿಗೆ ಪತ್ನಿ ಮತ್ತು ಇಬ್ಬರು ದತ್ತು ಪುತ್ರರು ಇದ್ದಾರೆ. ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ ಅವರದೇ ಆದ ಬಿ.ಇಡಿ ಮಹಾವಿದ್ಯಾಲಯದ ಆವರಣದಲ್ಲಿ ಸಂಜೆ ಅಂತ್ಯಸಂಸ್ಕಾರ ನಡೆಯಿತು.

ಇಂಡಿನ ತಾಲ್ಲೂಕಿನ ಹಿರೇಮಸಳಿ ಗ್ರಾಮದವರಾಗಿದ್ದ ಇವರು 1978, 1983 ಮತ್ತು 1989ರಲ್ಲಿ ಇಂಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

1983ರಲ್ಲಿ ಭೀಕರ ಬರಗಾಲ ಬಿದ್ದಾಗ ಕ್ಷೇತ್ರದ ರೈತರ ಬಾವಿಗಳಿಗೆ ಉಚಿತ ವಿದ್ಯುತ್ ಮತ್ತು ಪಂಪಸೆಟ್ ನೀಡಲು ಆಗಿನ ಮುಖ್ಯಮಂತ್ರಿ ಗುಂಡುರಾವ್‌ ಅವರನ್ನು ಆಗ್ರಹಿಸಿ, ಅತಿ ಹೆಚ್ಚು ರೈತರಿಗೆ ಮಂಜೂರು ಮಾಡಿಸಿಕೊಟ್ಟಿದ್ದರು. ಹೀಗಾಗಿ ಇಂದಿಗೂ ರಾಜ್ಯದಲ್ಲಿಯೇ ಅತೀ ಹೆಚ್ಚು ತೆರೆದ ಬಾವಿಗಳಿರುವ ಕ್ಷೇತ್ರ ಎಂದರೆ ಅದು ಇಂಡಿ ತಾಲ್ಲೂಕಾಗಿದೆ.

ಶಾಸಕರಾ‌ಗಿದ್ದ ಅವಧಿಯಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಇಂಡಿ ಪಟ್ಟಣಕ್ಕೆ ಕರೆಯಿಸಿ, ಬೆಳ್ಳಿ ಪಂಪ್‌ಸೆಟ್ ನೀಡಿ ಗೌರವಿಸಿದ್ದರು.

ಅಲ್ಲದೆ, ಇಂಡಿ ಪಟ್ಟಣಕ್ಕೆ ಭೀಮಾ ನದಿಯಿಂದ ಕುಡಿಯುವ ನೀರು ತರುವ ಯೋಜನೆಯ ರೂವಾರಿಯೂ ಅವರಾಗಿದ್ದಾರೆ. ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಕಲ್ಲೂರ ಅವರು ಕರ್ನಾಟಕ ಭೂಸೇನಾ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಇಂಡಿಯ ಪ್ರತಿಷ್ಠಿತ ಶ್ರೀಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಮತ್ತು ವಿಜಯಪುರದ ಶ್ರೀಮತಿ ಮೀನಾಕ್ಷಿ ಕಲ್ಲೂರ ವಿದ್ಯಾಸಂಸ್ಥೆ, ವಿಜಯಪುರ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌ ಪ್ರಾರಂಭಿಸುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.